ಜೋಳದರಾಶಿ ದೊಡ್ಡನಗೌಡರ ಪುಣ್ಯಸ್ಮರಣೆ ಕಾರ್ಯಕ್ರಮ

| Published : May 12 2024, 01:15 AM IST

ಜೋಳದರಾಶಿ ದೊಡ್ಡನಗೌಡರ ಪುಣ್ಯಸ್ಮರಣೆ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗಮಕ ಕಲೆಗೆ ಅವರಿತ್ತ ಕೊಡುಗೆ ಅಪಾರವಾಗಿದ್ದು ಬಳ್ಳಾರಿ ರಾಘವರ ಶಿಷ್ಯರಾಗಿ ನಾಟಕ ರಂಗಕ್ಕೆ ಬಹುದೊಡ್ಡ ಕೆಲಸ ಮಾಡಿದರು

ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೊಸಿಯೇಷನ್ ವತಿಯಿಂದ ಗಮಕ ಕಲಾನಿಧಿ ಡಾ.ಜೋಳದರಾಶಿ ದೊಡ್ಡನಗೌಡರ 29ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದೊಡ್ಡನಗೌಡರ ಸೇವೆ ಹಾಗೂ ಸಾಹಿತ್ಯ ಕೃಷಿ ಕುರಿತು ಮಾತನಾಡಿದ ನಿವೃತ್ತ ಉಪನ್ಯಾಸಕ ಎನ್.ಬಸವರಾಜ್, ಗಮಕ ಕಾವ್ಯದ ಕಲಾನಿಧಿ ಎಂದೇ ಪ್ರಸಿದ್ಧಿಯಾಗಿದ್ದ ದೊಡ್ಡನಗೌಡರು, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗ ಲೀಲೆ ಮುಂತಾದ ಕಾವ್ಯಗಳನ್ನು ಅಪಾರವಾಗಿ ಅಧ್ಯಯನ ಮಾಡಿದ್ದರು. ಬಾಲ್ಯದಲ್ಲಿಯೇ ಗೌಡರಿಗೆ ನಟನೆ, ಸಾಹಿತ್ಯ ಕೃಷಿ ಹಾಗೂ ಬಯಲಾಟದಲ್ಲಿ ವೇಷ ಕಟ್ಟುವ ಕುರಿತು ಆಸಕ್ತಿ ಹೊಂದಿದ್ದರು. ಬಸವೇಶ್ವರ, ಕನಕದಾಸ, ಕಬೀರದಾಸ, ನಾರದ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಗಡಿ ಭಾಗದಲ್ಲಿದ್ದುದರಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ ಸಾಹಿತ್ಯ ರಚನೆ ಮಾಡಿದರು ಎಂದರು.

40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಗಮಕ ಕಲೆಗೆ ಅವರಿತ್ತ ಕೊಡುಗೆ ಅಪಾರವಾಗಿದ್ದು ಬಳ್ಳಾರಿ ರಾಘವರ ಶಿಷ್ಯರಾಗಿ ನಾಟಕ ರಂಗಕ್ಕೆ ಬಹುದೊಡ್ಡ ಕೆಲಸ ಮಾಡಿದರು. 1994ರ ಮೇ 10ರಂದು ಇಹಲೋಕ ತ್ಯಜಿಸಿದರು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರು ದೊಡ್ಡನಗೌಡರು ರಂಗಭೂಮಿಗೆ ನೀಡಿದ ಕೊಡುಗೆ ಹಾಗೂ ಗಮಕ ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನುಸ್ಮರಿಸಿದರು.

ಗೌಡರ ಕುಟುಂಬದ ಕೆ.ಪೊಂಪನಗೌಡ ಅವರು ದೊಡ್ಡನಗೌಡರ ಸಾಧನೆಗಳನ್ನು ಸ್ಮರಿಸಿದರು. ಸಹ ಕಾರ್ಯದರ್ಶಿ ಎಂ.ರಾಮಾಂಜನೇಯುಲು ಸಲ್ಲಿಸಿದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಗೌರವ ಕಾರ್ಯದರ್ಶಿ ಎನ್.ಪ್ರಕಾಶ್, ಕೆ.ರಾಮಾಂಜನೇಯಲು, ಎನ್.ಪ್ರತಾಪ್ ರೆಡ್ಡಿ, ಕೆ.ಕೃಷ್ಣ, ಸಿ.ಎ.ಚೌದರಿ, ಜಿ ಪ್ರಭಾಕರ, ಕೆ.ಶ್ಯಾಮ ಸುಂದರ್, ಕೆ ಪೊಂಪನ ಗೌಡ, ಬಿ.ಎಂ. ಬಸವರಾಜ್, ಪಿ.ಶ್ರೀನಿವಾಸಲು, ಶಿವಶ್ವರ ಗೌಡ, ಕಪ್ಪಗಲ್ಲು ಪ್ರಭುದೇವ, ಜಿ.ಆರ್‌. ವೆಂಕಟೇಶಲು, ರಮಣಪ್ಪ ಭಜಂತ್ರಿ ಮತ್ತು ಗೌಡರ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದರು.