ಜೀತ ಪದ್ಧತಿಯ ನಿರ್ಮೂಲನೆಗೆ ಪಣತೊಡಿ: ಕೆ. ಗುರುಪ್ರಸಾದ

| Published : Feb 10 2024, 01:47 AM IST

ಜೀತ ಪದ್ಧತಿಯ ನಿರ್ಮೂಲನೆಗೆ ಪಣತೊಡಿ: ಕೆ. ಗುರುಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಜೀತ ಪದ್ಧತಿ ಅಮಾನವೀಯ ಪದ್ಧತಿಯಾಗಿದ್ದು, ಇದು ಗುಲಾಮಗಿರಿ ಪದ್ಧತಿಯ ಪಳಿಯುಳಿಕೆಯಾಗಿದೆ. ಜೀತ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.

ಗದಗ: ಜೀತ ಪದ್ಧತಿ ಅಮಾನವೀಯ ಪದ್ಧತಿಯಾಗಿದ್ದು, ಇದು ಗುಲಾಮಗಿರಿ ಪದ್ಧತಿಯ ಪಳಿಯುಳಿಕೆಯಾಗಿದೆ. ಜೀತ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಉದ್ಘಾಟಿಸಿ ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಹಾಗೂ ದತ್ತು ಮಾರ್ಗಸೂಚಿಗಳು-೨೦೨೨ ಕುರಿತು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು ಹಾಗೂ ನಗರಸಭೆ, ಪುರಸಭೆ, ಪಪಂನ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀತ ಪದ್ಧತಿ ಗುಲಾಮಗಿರಿಗಿಂತ ಬಹಳ ವ್ಯತ್ಯಾಸ ಇಲ್ಲವಾಗಿದೆ. ಮನುಷ್ಯರೆಲ್ಲರೂ ಘನತೆಯಿಂದ ಬದುಕಬೇಕು. ಬಡತನ, ಸಾಲ ಪಡೆದ ಕಾರಣ, ಹೀಗೆ ವಿವಿಧ ಕಾರಣಗಳಿಂದ ಒಬ್ಬ ವ್ಯಕ್ತಿಯನ್ನು ಜೀತಕ್ಕೆ ಇಟ್ಟುಕೊಂಡು ಅವನನ್ನು ದುಡಿಸಿಕೊಳ್ಳುವುದು ಜೀತ ಪದ್ಧತಿಯಾಗಿದೆ. ಅವನಿಗೆ ನಿರೀಕ್ಷಿತ ಸಂಬಳ ಸಿಗುವುದಿಲ್ಲ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶವಿರುವುದಿಲ್ಲ. ಜೀತ ಪದ್ಧತಿಯನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆ ಹಾಗೂ ಅಪರಾಧವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಜೀತಕ್ಕೆ ಇಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದರೆ ಇಟ್ಟುಕೊಂಡ ಮಾಲೀಕನಿಗೆ ೩ ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಜೀತ ಪದ್ಧತಿ ನಿರ್ಮೂಲನೆಗಾಗಿ ವಿವಿಧ ಇಲಾಖೆಗಳೊಂದಿಗೆ ಸಂಘ ಸಂಸ್ಥೆಗಳ ಸಮುದಾಯಗಳ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಅವರು, ಜೀತ ಪದ್ಧತಿ ನಿರ್ಮೂಲನೆ ಪ್ರತಿಜ್ಞಾ ವಿಧಿ ಬೋಧಿಸಿ, ಆನಂತರ ಮಾತನಾಡಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಂತಹ ಸ್ಥಳಗಳಿಂದ ಕೂಲಿಕಾರ್ಮಿಕರಿಗೆ ಆಸೆ ಆಮಿಷಗಳನ್ನೊಡ್ಡಿ ಗಣಿಗಾರಿಕೆ, ಕಾರ್ಖಾನೆ, ಇಟ್ಟಂಗಿ ಬಟ್ಟಿ, ಕೃಷಿ ಚಟುವಟಿಕೆಗಳಲ್ಲಿ ಯಾವುದೇ ಸ್ವಾತಂತ್ರ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜೀತ ಪದ್ಧತಿಯು ಒಂದು ಹೀನಕೃತ್ಯವಾಗಿದ್ದು ಅಂತಹ ಪ್ರಕರಣವನ್ನು ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿದಾಗ ಕಾರ್ಯಕ್ರಮವು ಅರ್ಥಪೂರ್ಣವಾಗುತ್ತದೆ ಎಂದರು.

ಪೊಲೀಸ್ ಇಲಾಖೆಯ ಮಂಜುನಾಥ ಅಸೂಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಊಳಿಗಮಾನ್ಯ ಪದ್ಧತಿ ಇತ್ತು. ಈಗ ಅದು ಜೀತ ಪದ್ಧತಿಯಾಗಿದೆ. ಸ್ಲೆವರಿ ಎಂಬ ಪದವು ಯುರೋಪ ಖಂಡದ ಸ್ಲೆವಿಕ್ ಎಂಬ ಪದದಿಂದ ಬಂದಿದೆ. ಇದು ಗುಲಾಮಗಿರಿ ಪದ್ಧತಿಯಾಗಿ ಪ್ರಾರಂಭವಾಯಿತು. ವಂಶ ಪಾರಂಪರ್ಯವಾಗಿ ಬರುವ ಜೀತ ಪದ್ಧತಿ, ಸಾಲ, ಅಪರಾಧ, ಬಡತನ ಹೀಗೆ ಹಲವಾರು ಕಾರಣಗಳಿಂದ ವ್ಯಕ್ತಿಯನ್ನು ಮಾಲೀಕರು ತಮ್ಮ ಮನೆಯಲ್ಲಿ ನಿರ್ದಿಷ್ಟಾವಧಿ ಹಾಗೂ ಅನಿರ್ದಿಷ್ಟಾವಧಿಯವರೆಗೆ ಜೀತಕ್ಕೆ ಇಟ್ಟುಕೊಂಡು ಕೆಲಸ ಪಡೆಯುತ್ತಿದ್ದರು. ಇಟ್ಟಿಗೆ ಕಾರ್ಖಾನೆ, ಅಪಾಯಕಾರಿ ಕೈಗಾರಿಕೆ, ಕಬ್ಬು ಕಟಾವು, ಹೋಟೆಲ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಜೀತಕ್ಕೆ ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದರು. ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆಗಾಗಿ ಪೊಲೀಸ್ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಕೈ ಜೋಡಿಸಬೇಕಾಗಿದೆ ಎಂದು ವಿವರಿಸಿದರು.

ಹರೀಶ ಜೋಗಿ ಅವರು ಮಕ್ಕಳ ಹಕ್ಕುಗಳ, ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲನ್ಯಾಯ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಸಿಸ್ಟರ್ ಡುಲ್ಸಿನ್ ಬಾಲ ನ್ಯಾಯ ಕಾಯ್ದೆ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, ದತ್ತು ಮಾರ್ಗಸೂಚಿ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿಪಂ ಯೋಜನಾ ನಿರ್ದೇಶಕ ಚಳಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಮಿತ ಬಿದರಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಮಹಾಂತೇಶ.ಕೆ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಇದ್ದರು. ವಿಡಿಎಸ್‌ಟಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿ, ವಂದಿಸಿದರು.