ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಪ್ರಗತಿಪರ ಸಂಘಟನೆಗಳ ಹಾಗೂ ಇತರೆ ಎಲ್ಲ ವರ್ಗಗಳ ಒಕ್ಕೂಟವು ಡಿ.5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ, ಸ್ವಾಭಿಮಾನಿ ಸಮಾವೇಶವನ್ನು ಹಾಸನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಕರ್ನಾಟಕ ಪ್ರದೇಶದ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮನವಿ ಮಾಡಿದರು.ನಗರದ ಜೋಡಿರಸ್ತೆಯಲ್ಲಿರುವ ತಾಲೂಕು ಕುರುಬರ ಸಂಘದ ಸಂಕೀರ್ಣದಲ್ಲಿ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸುದೀರ್ಘ 45 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ನಿಷ್ಕಳಂಕ ಹಾಗೂ ನೈತಿಕತೆಯ ಸಾಕ್ಷಿ ಪ್ರಜ್ಞೆಯಾಗಿ ನಮ್ಮೊಂದಿಗಿರುವ ಸಮಾಜವಾದದ ಹಿನ್ನೆಲೆಯ ಸಿದ್ದರಾಮಯ್ಯನವರು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ರಾಜಕೀಯ ದುಷ್ಟ ಶಕ್ತಿಗಳು ಸಾಮಾನ್ಯ ಜನವರ್ಗವನ್ನು ಅವರ ವಿರುದ್ಧ ಎತ್ತಿ ಕಟ್ಟಿ ಷಡ್ಯಂತರ ರೂಪಿಸಿದ್ದಾರೆ ಎಂಬುದು ಈಗಾಗಲೇ ರುಜುವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಸರ್ವ ಜನಾಂಗದ ಸ್ವಾಭಿಮಾನಿ ನಾಯಕ ಸಿದ್ದರಾಮಯ್ಯನವರ ಪರವಾಗಿ ಗಟ್ಟಿಯಾಗಿ ನಿಲ್ಲುವ ನೈತಿಕ ಹೊಣೆಗಾರಿಕೆ ನಮ್ಮಗಳ ಕರ್ತವ್ಯ. ಆದ್ದರಿಂದ ಶೋಷಿತ, ಅಹಿಂದ ಹಾಗೂ ಇತರೆ ಎಲ್ಲ ವರ್ಗಗಳು ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸುವ ಸಲುವಾಗಿ ಹಾಸನದಲ್ಲಿ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ನಂಜೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಆರ್.ಉಮೇಶ್ ಎಸ್ಪಿಕೆ, ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ಅಹಿಂದ ಜಿಲ್ಲಾಧ್ಯಕ್ಷ ಮಹೇಶ ಹಳೇಪುರ, ಕಾರ್ಯಾಧ್ಯಕ್ಷ ಕೆರೆಹಳ್ಳಿ ರಾಜ್ ಕುಮಾರ್, ಯಳಂದೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಜಿಡಿಎಲ್ ಸುರೇಶ್, ನಿರ್ದೇಶಕ ಬಸಪ್ಪನಪಾಳ್ಯ ನಟರಾಜು, ಶಿವಲಿಂಗೌಡ ಮುತ್ತಿಗೆ, ಉಮೇಶ್, ರೇವಣ್ಣ, ಪುನೀತ್ ಕುಮಾರ್ ಭಾಗವಹಿಸಿದ್ದರು.