ಕಾಂಗ್ರೆಸ್‌ನ ಸವಿತಾ ಬಾಯಿ ಬಂಧನ

| Published : Nov 23 2025, 01:30 AM IST

ಸಾರಾಂಶ

ಜೆಡಿಎಸ್ ಪಕ್ಷದ ಮುಖಂಡ ಟಿ.ಅಸ್ಗರ್ ಕೊಲೆ ಯತ್ನ ಪ್ರಕಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕಿ ಸವಿತಾ ಮಲ್ಲೇಶ್ ನಾಯ್ಕರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ: ಜೆಡಿಎಸ್ ಪಕ್ಷದ ಮುಖಂಡ ಟಿ.ಅಸ್ಗರ್ ಕೊಲೆ ಯತ್ನ ಪ್ರಕಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕಿ ಸವಿತಾ ಮಲ್ಲೇಶ್ ನಾಯ್ಕರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ನ.10ರಂದು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಮುಖಂಡ ಟಿ.ಅಸ್ಗರ್ ಮೇಲೆ ಮುಸುಕುದಾರಿಗಳ ಗುಂಪೊಂದು ಚಾಕು, ಮತ್ತು ಪಂಚ್‌ನಂತಹ ಮಾರಕಾಯುಧಗಳಿಂದ ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿತ್ತು. ಈ ಕುರಿತು ಆಜಾದ್ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮುಸುಕುಧಾರಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಟಿ.ಅಸ್ಗರ್‌ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಾಣಾಪಾಯದಿಂದ ಅಸ್ಗರ್ ಪಾರಾಗಿದ್ದರು. ಆದರೆ, ತಮಗೆ ಈಗಲೂ ಪ್ರಾಣ ಭೀತಿ ಇದ್ದು, ಸೂಕ್ತ ರಕ್ಷಣೆ ನೀಡಬೇಕು. ತಮ್ಮ ಕೊಲೆಗೆ ಯತ್ನಿಸಿದವರನ್ನು ಬಂಧಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಅಸ್ಗರ್ ಸೇರಿದಂತೆ ಕುಟುಂಬ ಸದಸ್ಯರು, ಬಂಧು-ಬಳಗದವರು ಪ್ರತಿಭಟಿಸಿದ್ದರು.

ಹಣಕಾಸು ವಿಚಾರಕ್ಕೆ ಟಿ.ಅಸ್ಗರ್ ಹಾಗೂ ಖಾಲಿದ್ ಪೈಲ್ವಾನ್ ಎಂಬಾತನ ಮಧ್ಯೆ ವೈಷಮ್ಯವಿತ್ತು. ಖಾಲಿದ್ ಪೈಲ್ವಾನ್ ವಿರುದ್ಧ ಅಸ್ಗರ್ ಕೊಲೆ ಯತ್ನದ ಆರೋಪ ದಾಖಲಾಗಿತ್ತು. ಅಸ್ಗರ್ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಖಾಲಿದ್ ಪೈಲ್ವಾನ್‌ ತಲೆ ಮರೆಸಿಕೊಂಡಿದ್ದ. ಆರೋಪಿ ಖಾಲಿದ್ ಪೈಲ್ವಾನ್‌ಗೆ ಆಶ್ರಯ ಕಲ್ಪಿಸಿ, ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ಮಾಯಕೊಂಡ ಕಾಂಗ್ರೆಸ್ ನಾಯಕಿ ಸವಿತಾ ಬಾಯಿ ಮಲ್ಲೇಶ ನಾಯ್ಕಗೆ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಮಾಯಕೊಂಡ ಕಾಂಗ್ರೆಸ್ ಪಕ್ಷದ ಸವಿತಾ ಬಾಯಿ ಮಲ್ಲೇಶ ನಾಯ್ಕಗೆ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾಯಕೊಂಡ ಕ್ಷೇತ್ರದ ಟಿಕೆಟ್‌ಗೆ ಸವಿತಾಬಾಯಿ ದೆಹಲಿ ಮಟ್ಟದವರೆಗೂ ಪ್ರಯತ್ನ ನಡೆಸಿದ್ದರು. ಕಡೇ ಘಳಿಗೆಯಲ್ಲಿ ಮತ್ತೊಬ್ಬ ಆಕಾಂಕ್ಷಿ ಕೆ.ಎಸ್.ಬಸವಂತಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆಗ ಪಕ್ಷೇತರರಾಗಿ ಸ್ಪರ್ಧಿಸಿ ಸೋಲನುಭವಿಸಿದ್ದ ಸವಿತಾ ಬಾಯಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿದ್ದರು.

ಖಾಲಿದ್‌-ಸವಿತಾಬಾಯಿ ಪಾತ್ರದ ತನಿಖೆ ಆಗಲಿ

ಆಸ್ಪತ್ರೆಯಿಂದಲೇ ಆಡಿಯೋ ಮಾಡಿ, ಮಾಧ್ಯಮಗಳಿಗೆ ಅಸ್ಗರ್ ಬಿಡುಗಡೆದಾವಣಗೆರೆ: ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಹತ್ಯೆಗೆ ಯತ್ನಿಸಿದ ಆರೋಪಿ ಖಾಲಿದ್ ಪೈಲ್ವಾನ್ ಹಾಗೂ ಕಾಂಗ್ರೆಸ್ ಪಕ್ಷದ ಸವಿತಾಬಾಯಿ ಮಲ್ಲೇಶ ನಾಯ್ಕ ಮಧ್ಯೆ ಏನು ಸಂಬಂಧವಿದೆ, ಖಾಲಿದ್‌ ಬಂಧನವೂ ಆಗಬೇಕು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗಾಯಾಳು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಆಸ್ಪತ್ರೆಯಿಂದಲೇ ಆಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸವಿತಾ ಬಾಯಿ ಬಂಧನದ ಸುದ್ದಿ ಮಾಧ್ಯಮಗಳಿಂದ ನನ್ನ ಗಮನಕ್ಕೆ ಬಂದಿದೆ. ಸವಿತಾ ಬಾಯಿ ಹಾಗೂ ಖಾಲಿದ್ ಪೈಲ್ವಾನ್ ಮಧ್ಯೆ ಏನು ಸಂಬಂಧವಿದೆಯೆಂಬ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಖಾಲಿದ್‌ಗೆ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ಸವಿತಾ ಬಾಯಿ ಹಾಗೂ ನನಗೆ ಯಾವುದೇ ರಾಜಕೀಯ ವೈಷಮ್ಯವಿಲ್ಲ. ಪ್ರಕರಣದ ಪ್ರಮುಖ ಆರೋಪಿ ಖಾಲಿದ್ ಪೈಲ್ವಾನನ ಬಂಧನವಾಗಬೇಕು. ಆಸ್ಪತ್ರೆಯಲ್ಲಿ ಇರುವುದರಿಂದಾಗಿ ನನಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಲಾಗುತ್ತಿಲ್ಲ. ಪೋಕ್ಸೋ ಕೇಸ್‌ನ ರಾಜಿ ಪಂಚಾಯಿತಿಯಲ್ಲಿ ನಾನು 5 ಲಕ್ಷ ರು. ಪಡೆದಿದ್ದೇನೆಂಬುದಾಗಿ ಖಾಲಿದ್ ಪೈಲ್ವಾನ್ ಸುಳ್ಳು ಆರೋಪ ಮಾಡಿದ್ದ. ಇದೇ ಖಾಲಿದ್ ನನ್ನ ಸ್ನೇಹಿತ ಸಾಜಿದ್ ಬಳಿ 2 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದ ಎಂದು ದೂರಿದ್ದಾರೆ.

ಕಳೆದ ಅ.22ರಂದು ಸಾಜಿದ್ ಬಳಿ 2 ಲಕ್ಷ ರು. ಹಫ್ತಾ ಕೇಳಿದ್ದ. ಸಾಜಿದ್‌ಗೆ ಕಾನೂನು ಕ್ರಮ ಕೈಗೊಳ್ಳಲು ನಾನು ಸಲಹೆ ನೀಡಿದ್ದೆ. ಅ.24ರಂದು ಖಾಲಿದ್ ನನಗೆ ಕೊಲೆ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಅವತ್ತೇ ಪೊಲೀಸರು ಖಾಲೀದ್‌ಗೆ ಕರೆಸಿಕೊಂಡು, ತಕ್ಕ ಬುದ್ಧಿವಾದ ಹೇಳಿದ್ದರೆ ಹೀಗೆಲ್ಲಾ ಆತ ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಖಾಲಿದ್‌ ವೀಡಿಯೋ ಬಿಡುಗಡೆ ಮಾಡಿದ್ದ. ಸಾಜಿದ್, ನಾನು 5 ಲಕ್ಷ ರು. ಹಣ ಪಡೆದಿದ್ದೇವೆಂದು ಸುಳ್ಳು ಹೇಳಿದ್ದ. ಅ.26ರಂದು ನಾನು ಡಿವೈಎಸ್ಪಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ನಿರ್ಲಕ್ಷ್ಯ ತೋರಿದ್ದರಿಂದಲೇ ನ.10ರಂದು ಟಿಪ್ಪು ಜಯಂತಿ ವೇಳೆ ನನ್ನ ಕೊಲೆಗೆ ಬಾಷಾ ನಗರದ 6ನೇ ಕ್ರಾಸ್ ಬಳಿ ಯತ್ನ ನಡೆಯಿತು ಎಂದು ಆರೋಪಿಸಿದ್ದಾರೆ.

ಬಾಷಾ ನಗರ 6ನೇ ಕ್ರಾಸ್‌ನಲ್ಲಿ ಖಾಲಿದ್‌, ಇರ್ಫಾನ್‌ ಎಂಬಾತ ತಲ್ವಾರ್‌, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಈವರೆಗೂ ಪ್ರಮುಖ ಆರೋಪಿಗಳನ್ನೇ ಪೊಲೀಸರು ಬಂಧಿಸಿಲ್ಲ. ಇರ್ಫಾನ್ ಸಹ ನೆಟೋರಿಯಲ್ ರೌಡಿಯಾಗಿದ್ದು, ಅನೇಕ ಸಮಾಜಘಾತುಕ ಕೃತ್ಯಗಳಲ್ಲೂ ಭಾಗಿಯಾಗಿದ್ದಾನೆ. ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಗೂಂಡಾಗಿರಿ ವಾತಾವರಣವಿದೆ. ನನ್ನ ಕೊಲೆಗೆ ಸಂಚು ರೂಪಿಸಿದ್ದವರ ವಿರುದ್ಧ ಕಾನೂನು ಕ್ರಮ ಆಗಬೇಕು. ರೌಡಿಸಂ ವಿರುದ್ಧದ ನನ್ನ ಕೂಗಿಗೆ ಶಕ್ತಿ ಸಿಗಬೇಕು ಎಂದು ಟಿ.ಅಸ್ಗರ್ ಒತ್ತಾಯಿಸಿದ್ದಾರೆ.