ನಿವೇದನಾತ್ಮಕ ರೂಪುಗೊಂಡ ಸಮಕಾಲೀನ ಕಾವ್ಯಗಳು: ಕವಿ ಆರಿಫ್‌ರಾಜಾ

| Published : Feb 13 2025, 12:51 AM IST

ಸಾರಾಂಶ

ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿವೆ. ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ

ಹೊಸಪೇಟೆ: ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿವೆ. ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ. ಜತೆಗೆ ಕತೆ, ಕವಿತೆಗಳು ನಿವೇದನಾತ್ಮಕ ಕಾವ್ಯಗಳಾಗಿ ರೂಪುಗೊಂಡಿವೆ ಎಂದು ಕವಿ ಮತ್ತು ಅನುವಾದಕ ಆರಿಫ್ ರಾಜಾ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಕವಿತೆಗಳ ಓದು ಹಾಗೂ ಸಂವಾದ ಸಮಕಾಲೀನ ಭಾರತೀಯ ಕಾವ್ಯ ಸಂವೇದನೆಯ ಸ್ವರೂಪ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ದಲಿತ ಕಾವ್ಯಗಳು 90ರ ದಶಕದ ನಂತರ ಸಾಹಿತ್ಯದಲ್ಲಾದ ಏರುಪೇರುಗಳತ್ತ ಗಮನಹರಿಸಬೇಕು. ಕಾವ್ಯಗಳು ಕಲಾತ್ಮಕ ಮೌಲ್ಯಕ್ಕಿಂತ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ. ಇನ್ನು ಅಮೂರ್ತ ಚಿಂತನೆಗೆ ನಾವು ಹೆಚ್ಚು ಒತ್ತು ನೀಡಬಾರದು. ಹೆದರುವಂತಹ ಲೇಖಕ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ ಎಂದರು.

ಡಾರ್ಜಿಲಿಂಗ್‌ನ ಕವಿ ಮತ್ತು ಪತ್ರಕರ್ತ ಮನೋಜ್‌ ಬೋಗಾಟಿ ಮಾತನಾಡಿ, ಡಾರ್ಜಿಲಿಂಗ್‌ನ ಚಹಾ ಜಗತ್ತಿನಾದ್ಯಂತ ತುಂಬ ಫೇಮಸ್ ಆಗಿದೆ. ಉತ್ತಮ ಗುಣಮಟ್ಟದ ಚಹಾಕ್ಕೆ ಲಕ್ಷಾಂತರ ರು. ಬೆಲೆ ಸಿಗುತ್ತದೆ. ಆದರೆ ಅದೇ ಚಹಾದ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಡಿಮೆ ಕೂಲಿ ಸಿಗುತ್ತದೆ. ಇಲ್ಲಿಂದ ಆರಂಭವಾದ ತಾರತಮ್ಯ ಸ್ಥಳೀಯರ ಬದುಕು, ಭಾಷೆ, ಸಂಸ್ಕೃತಿಯ ಮೇಲೆ ಪ್ರಭಾವ ಬೀರಿ ಸ್ಥಳೀಯರ ಅಸ್ಮಿತೆಗೆ ಧಕ್ಕೆ ಉಂಟಾಗಿದೆ. ಅನ್ಯ ಭಾಷೆ ಹೇರಿಕೆಯಿಂದ ಎಲ್ಲ ಕ್ಷೇತ್ರದಲ್ಲಿಯೂ ಬುಡಕಟ್ಟು ಸಮುದಾಯಗಳ ಅನನ್ಯತೆ ಕಣ್ಮರೆಯಾಗಿವೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್‌ ಡಾ.ಎಫ್.ಟಿ. ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಪಾಳಿ ಸಾಹಿತ್ಯದ ಘಟನೆಗಳನ್ನು ನಾವೆಲ್ಲರೂ ಅರಿಯಬೇಕು. ಕಾವ್ಯಗಳ ಅಧ್ಯಯನದ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯ ಧೋರಣೆಯನ್ನು ನಾವು ಅಧ್ಯಯನ ಮಾಡಿದಾಗ ಸ್ಥಳೀಯ ಜೀವನ ಮತ್ತು ಬದುಕನ್ನು ನಾವು ತಿಳಿಯಬಹುದು ಎಂದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.