ಸಾರಾಂಶ
ಬಸವರಾಜ ಹಿರೇಮಠಶಿಗ್ಗಾಂವಿ: ತಾಲೂಕಿನ ದುಂಡಶಿ ಹೋಬಳಿಯಲ್ಲಿ ಸತತವಾಗಿ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ವಿಪರೀತ ಮಳೆಯಾದ ಪರಿಣಾಮ ವ್ಯಾಪಕ ಬೆಳೆಯುವ ಹಂತದಲ್ಲಿರುವ ಪೈರು ಹಾನಿಯಾಗುತ್ತಿದೆ.
ಭತ್ತದ ಬೆಳೆಗೆ ನಿರಂತರ ಮಳೆ ಅಡ್ಡಿಯಾಗಿದ್ದು, ಮಳೆ ಹೊಡೆತದಿಂದ ಭತ್ತದ ಪೈರು ನೆಲ ಬಿಟ್ಟು ಮೇಲೆಳುತ್ತಿಲ್ಲ ಎಂಬುದು ರೈತರ ಅಳಲು. ಗೊವಿನಜೋಳಕ್ಕೆ ತಾಮ್ರ ರೋಗ ತಗುಲಿದೆ. ಹಲವೆಡೆ ಗೊವಿನಜೋಳ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ದುಂಡಶಿ ಹೋಬಳಿಯು ಅರೆಮಲೆನಾಡು ಪ್ರದೇಶವಾಗಿದೆ. ಮುಖ್ಯ ಬೆಳೆಗಳಾದ ಭತ್ತ, ಗೋವಿನಜೋಳ, ಕಬ್ಬುಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದೆ. ಆದರೆ ಇವೆಲ್ಲ ಬೆಳೆಗಳ ಬೆಳವಣಿಗೆಗೆ ಪೂರಕವಾಗಬೇಕಿದ್ದ ವರುಣನಿಂದಲೇ ಹಾನಿಯಾಗುತ್ತಿರುವುದು ಅನ್ನದಾತರನ್ನು ಕಂಗಾಲಾಗಿಸಿದೆ. ಜೂನ್ ತಿಂಗಳಲ್ಲಿ ಸರಾಸರಿ ೨೦೧.೮ ಮಿಮೀ ವಾಡಿಕೆ ಮಳೆ. ಆದರೆ, ಈ ಬಾರಿ ೨೬೨.೦ ಮಿಮೀ ಮಳೆಯಾಗಿದೆ. ಅಂದರೆ ಶೇ. ೩೦ರಷ್ಟು ಹೆಚ್ಚು ಮಳೆ ಬಿದ್ದಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಬೆಳೆಗಳ ಬಿತ್ತನೆ ಶೇ. ೯೦ರಷ್ಟು ಮುಕ್ತಾಯಗೊಂಡಿದ್ದು, ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿ ಹಾನಿಗೊಂಡಿದೆ. ಇನ್ನೊಂದೆಡೆ ಗೊವಿನಜೋಳಕ್ಕೆ ಮುಳ್ಳುಸಜ್ಜೆ ಕಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ. ಯಾವುದೇ ಔಷಧಿ ಸಿಂಪಡಿಸಿದರೂ ಮುಳ್ಳುಸಜ್ಜೆ ಕಡಿಮೆಯಾಗುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.
ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರೆಲ್ಲರೂ ಚಿಂತೆಗೀಡಾಗಿದ್ದು, ಸ್ಥಳೀಯ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಇನ್ನೂವರೆಗೆ ರೈತರ ಬೆಳೆ ವೀಕ್ಷಣೆ ಮಾಡಲು ಬಾರದೇ ಇರುವುದು ರೈತರ ಆತ್ಮಸ್ಥೈರ್ಯಕ್ಕೆ ಕಳೆದುಕೊಳ್ಳಲು ಕಾರಣವಾಗುತ್ತಿದೆ ಎಂದು ರೈತರಾದ ಈರಣ್ಣ ಹೇಳಿದರು.ಈಗಾಗಲೇ ಬಿತ್ತಿರುವ ಬೆಳೆಯು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ರೈತರಿಗೆ ಪ್ರತಿ ಎಕರೆಗೆ ₹೧೦ ಸಾವಿರದಂತೆ ಪರಿಹಾರ ನೀಡಬೇಕು. ಇಲ್ಲವಾದರೆ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ ದುಂಡಶಿ ಹೋಬಳಿಯ ರೈತರು ಎಚ್ಚರಿಸಿದ್ದಾರೆ.
40 ಸಾವಿರ ಖರ್ಚು: ಒಂದು ಎಕರೆ ಭೂಮಿ ಹಸನು ಮಾಡಿ ಬೀಜ ಗೊಬ್ಬರ ಹಾಕಿ ಮತ್ತು ಒಂದು ತಿಂಗಳ ನಂತರ ೬- ೮ ಬಾರಿ ಗೊಬ್ಬರ ಹಾಕಿ ಒಂದು ಎಕರೆಗೆ ₹೩೫ ರಿಂದ ₹೪೦ ಸಾವಿರ ಖರ್ಚು ಮಾಡಿದ್ದೇನೆ. ಪ್ರತಿವರ್ಷವೂ ಬೆಳೆಯು ಕೈಗೆ ಬರದಂತಾಗಿದೆ ಎಂದು ರೈತ ಕೇಶಪ್ಪ ತಿಳಿಸಿದರು.ರೈತರಿಗೆ ಸಲಹೆ: ಸತತ ಮಳೆಗೆ ಗೋವಿನಜೋಳ ಬೆಳೆಯು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ನೀರಿನಲ್ಲಿ ಕರಗುವ ೧೯:೧೯:೧೯/ ಪೋಟ್ಯಾಷ್ ೦:೦:೫೦/೧೩:೦:೪೫ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ ೧.೫ ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಬೆಳೆಗಳು ಬೇಗನೆ ಚೇತರಿಸಿಕೊಳ್ಳುತ್ತವೆ ಎಂದು ಶಿಗ್ಗಾಂವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ತಿಳಿಸಿದರು.