ಸಾರಾಂಶ
ತೀವ್ರ ಬರಗಾಲದಿಂದಾಗಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಹೊಲಗಳಲ್ಲಿ ಎಡೆ ಕುಂಟೆ ಹೊಡೆಯಲು ತೊಂದರೆಯಾಗಿದ್ದು ಇದಕ್ಕೆ ಪರಿಹಾರವಾಗಿ ರೈತರು ಸೈಕಲ್ ಎಡೆಕುಂಟೆ ಮೊರೆ ಹೋಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತೀವ್ರ ಬರಗಾಲದಿಂದಾಗಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಹೊಲಗಳಲ್ಲಿ ಎಡೆ ಕುಂಟೆ ಹೊಡೆಯಲು ತೊಂದರೆಯಾಗಿದ್ದು ಇದಕ್ಕೆ ಪರಿಹಾರವಾಗಿ ರೈತರು ಸೈಕಲ್ ಎಡೆಕುಂಟೆ ಮೊರೆ ಹೋಗಿದ್ದಾರೆ. ಶೇಂಗಾ, ಮುಸುಕಿನ ಜೋಳ, ತೊಗರಿ ಬೆಳೆಗಳಲ್ಲಿ ಕಳೆ ತೆಗೆಯಲು ಕೂಲಿಯಾಳು ಕೊರತೆ ಇರುವುದರಿಂದ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪ್ರತಿ ಕೂಲಿಯಾಳುವಿಗೆ 300 ಕೊಡಬೇಕು. ಎತ್ತುಗಳ ಕೂಲಿಯು 3000 ರಿಂದ 3500 ಆಗಲಿದ್ದು, ರೈತರಿಗೆ ಆರ್ಥಿಕ ಹೊರೆಯಾಗಿದೆ. ಸರ್ಕಾರವು ತಂತ್ರಜ್ಞಾನ ಬಳಸಿ ಸೈಕಲ್ ಎಡೆಕುಂಟೆ ತಂದಿದ್ದು, ಇದು ಕೃಷಿ ಇಲಾಖೆಯಲ್ಲಿ ಲಭ್ಯವಿದೆ. ಸೈಕಲ್ ಎಡೆಕುಂಟೆ ಮೂಲಕ ಕಳೆ ತೆಗೆಯಬಹುದು. ಒಬ್ಬರೆ ಇದನ್ನು ನಿರ್ವಹಿಸುತ್ತಾರೆ. ಎತ್ತು ಬಳಸಿ ಎಡೆಕುಂಟೆ ಹೊಡೆಯಲು 3-4 ಕಾರ್ಮಿಕರು ಬೇಕು.ರೈತ ಕಾಮರಾಜು ಮಾತನಾಡಿ, ಒಂದು ಎಕರೆಯಲ್ಲಿ ಮುಸುಕಿನ ಜೋಳ ಹಾಕಿದ್ದು, ನಿತ್ಯ ಸೈಕಲ್ ಎಡೆಕುಂಟೆ ಬಳಸಿ ಕಳೆ ತೆಗೆಯುತ್ತಿದ್ದೇನೆ. ಇದರಿಂದಾಗಿ ಹಣ ಉಳಿಯುತ್ತಿದೆ ಎಂದರು.
ಕೃಷಿ ಸಹಾಯಕ ನಿರ್ದೇಶಕ ಎಂ. ಆರ್. ರುದ್ರಪ್ಪ ಮಾತನಾಡಿ, ಸೈಕಲ್ ಎಡೆಕುಂಟೆಯಿಂದ ಒಬ್ಬರೇ ಕಳೆ ತೆಗೆಯಬಹುದು. ಕೂಲಿಯಾಳು ಕೊರತೆ ನೀಗಿಸುತ್ತದೆ. ಹಳೆ ಸೈಕಲ್ ಇದ್ದರೆ ಎಡೆಕುಂಟೆ ತಯಾರಿಸಬಹುದು. ತಾಲೂಕಿನ 4 ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿದ್ದು, ಖರೀದಿಸಬಹುದು ಎಂದರು.