ಬರಪರಿಹಾರ, ನರೇಗಾ ಕೂಲಿ ಬಿಡುಗಡೆಗೆ ಆಗ್ರಹ: ಕೂಲಿಕಾರರು ಆಕ್ರೋಶ

| Published : Mar 15 2024, 01:15 AM IST

ಬರಪರಿಹಾರ, ನರೇಗಾ ಕೂಲಿ ಬಿಡುಗಡೆಗೆ ಆಗ್ರಹ: ಕೂಲಿಕಾರರು ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರಿಗೆ ಕೊಟ್ಟಿರುವ ನಿಧಿಯನ್ನಷ್ಟೇ ಬಳಸಿ ಅದನ್ನೇ ಅಭಿವೃದ್ಧಿ ಎಂದು ಭಾವಿಸಿದ್ದೀರಿ. ಕೃಷಿ ಕೂಲಿಕಾರರು, ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸಭೆ ಕರೆಯುವುದಾಗಿ ಹೇಳಿದ ಸುಮಲತಾ ಅವರು ಪಲಾಯನ ಮಾಡಿದ್ದಾರೆ. ಹಾಗಾದರೆ ಜಿಲ್ಲೆಗೆ ನೀವು ಮಾಡಿರುವ ಅಭಿವೃದ್ಧಿ ಏನು ಎಂದು ಕೂಲಿಕಾರರು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಬರಪರಿಹಾರ ಮತ್ತು ಉದ್ಯೋಗ ಖಾತ್ರಿ ಕೂಲಿ ಹಣ ಬಿಡುಗಡೆ ಮಾಡಿಸುವಂತೆ ಸಂಸದೆ ಸುಮಲತಾ ಅವರನ್ನು ಒತ್ತಾಯಿಸಿ ಕೃಷಿ ಪ್ರಾಂತ ಕೂಲಿಕಾರರ ಸಂಘದವರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ಕಳೆದ ಐದು ವರ್ಷಗಳಲ್ಲಿ ಸಂಸದರಾಗಿ ಸುಮಲತಾ ಅವರು ಉದ್ಯೋಗಖಾತ್ರಿ ಯೋಜನೆಯಡಿ ೧೦೦ ದಿನದ ಕೆಲಸ ದೊರಕಿಸುವಲ್ಲಿ ಹಾಗೂ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರ ಮಾರ್ಪಡಿಸುವುದನ್ನು ಬದಲಿಸುವಲ್ಲಿ ವಿಫಲರಾಗಿದ್ದೀರಿ, ಕೋವಿಡ್ ಸಮಯದಲ್ಲಿ ಕಣ್ಣಿಗೆ ಕಾಣದೆ ಮಾಯವಾಗಿದ್ದೀರಿ. ಕಾವೇರಿ ನೀರಿನ ವಿಷಯದಲ್ಲಿ ಶಾಶ್ವತ ಪರಿಹಾರ ಹುಡುಕುವಲ್ಲಿ ಎಡವಿದ್ದೀರಿ ಎಂದು ಟೀಕಿಸಿದರು.

ಸಂಸದರಿಗೆ ಕೊಟ್ಟಿರುವ ನಿಧಿಯನ್ನಷ್ಟೇ ಬಳಸಿ ಅದನ್ನೇ ಅಭಿವೃದ್ಧಿ ಎಂದು ಭಾವಿಸಿದ್ದೀರಿ. ಕೃಷಿ ಕೂಲಿಕಾರರು, ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸಭೆ ಕರೆಯುವುದಾಗಿ ಹೇಳಿದ ಸುಮಲತಾ ಅವರು ಪಲಾಯನ ಮಾಡಿದ್ದಾರೆ. ಹಾಗಾದರೆ ಜಿಲ್ಲೆಗೆ ನೀವು ಮಾಡಿರುವ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.

ಈಗಲಾದರೂ ಕೂಲಿ ಹಣ ಬಿಡುಗಡೆ ಮಾಡಿಸಿ, ಕೃಷಿ ಆಧಾರಿತ ಕೈಗಾರಿಕೆಗಳನ್ನು ತರಲು ತಮ್ಮ ಪ್ರತಿಕ್ರಿಯೆಯನ್ನು ಕೊಡುವಂತೆ ಕೃಷಿ ಕೂಲಿಕಾರರ ಸಂಘ ಒತ್ತಾಯಿಸಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಟಿ.ಎಲ್. ಕೃಷ್ಣೇಗೌಡ, ಬಿ.ಎಂ. ಶಿವಮಲ್ಲಯ್ಯ, ಬಿ. ಹನುಮೇಶ್, ಅಮಾಸಯ್ಯ, ಆರ್. ರಾಜು, ಶುಭವತಿ, ರಾಮಯ್ಯ, ಸಿ.ಕುಮಾರಿ, ಟಿ.ಎಚ್. ಆನಂದ್, ಎನ್. ಸುರೇಂದ್ರ, ಜಿ.ಎಚ್. ಹರೀಶ್, ಮಧುಕುಮಾರ್, ಅಬ್ದುಲ್ಲಾ ಇತರರಿದ್ದರು.