ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನಷ್ಟೇ ಹೊರತುಪಡಿಸಿ ಸಾಹಿತ್ಯೇತರ ವಲಯದಲ್ಲಿ ಸಾಧನೆ ಮಾಡಿರುವವರನ್ನೂ ಪರಿಗಣಿಸುವ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ಆದರೆ, ಅದರ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ವಾರದ ಅತಿಥಿ ಸಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ೨೬ ಮಠದ ಮಠಾಧೀಶರು, ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಹಲವರು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರರನ್ನೂ ಏಕೆ ಪರಿಗಣಿಸಬಾರದು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದು ನಮ್ಮನ್ನು ವಿಚಲಿತರನ್ನಾಗಿ ಮಾಡಿದೆ. ಹಾಗಾಗಿ ಸಾಹಿತಿಗಳ ಜೊತೆಗೆ ಸಾಹಿತ್ಯೇತರ ಸಾಧಕರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಪರಿಷತ್‌ನ ಮುಂದೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಕ್ಷೇತ್ರದಲ್ಲೇ ನಾವೂ ಕೂಡ ನಮ್ಮದೇ ಆದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆ ಮೂಲಕ ಕನ್ನಡ ಭಾಷೆ ಉಳಿವಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಹೀಗಾಗಿ ನಮಗೂ ಏಕೆ ಅವಕಾಶ ನೀಡಬಾರದು ಎಂಬ ಕೂಗೆಬ್ಬಿಸಿದ್ದಾರೆ.ವಾಸ್ತವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳಿಗಷ್ಟೇ ಸೀಮಿತವಾಗಿಲ್ಲ. ಕನ್ನಡ ನಾಡು, ನುಡಿ, ಜಲ, ನೆಲ, ಸಂಸ್ಕೃತಿಯ ಸೇವೆ ಮಾಡುತ್ತಿರುವವರು ಪರಿಷತ್ತಿನ ಸೇವಕರೇ ಆಗಿದ್ದಾರೆ. ಪರಿಷತ್ತನ್ನು ಸ್ಥಾಪಿಸಿದ ಉದ್ದೇಶವೂ ಅದೇ ಆಗಿತ್ತು. ಇದನ್ನೇ ಸಾಹಿತ್ಯೇತರ ಕ್ಷೇತ್ರದವರು ಈಗ ಪ್ರಶ್ನೆ ಮಾಡುತ್ತಿದ್ದಾರೆ. ಅವರ ಅಭಿಪ್ರಾಯ, ಮನವಿಗಳನ್ನು ಸ್ವೀಕರಿಸಿದ್ದು, ಪರಿಷತ್ತಿನ ವೇದಿಕೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಜಾಗದ ವಿಚಾರದಲ್ಲಿ ಕೊಂಕು ಬೇಡ:ಕೆಲವರು ಸಮ್ಮೇಳನ ನಡೆಯುವ ಜಾಗದ ಬಗ್ಗೆ ಕೊಂಕು ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಯಾರೊಬ್ಬರ ವೈಯಕ್ತಿಕ ತೀರ್ಮಾನವಲ್ಲ. ಸಮ್ಮೇಳನದ ಜಾಗ ನಿರ್ಧಾರ ಮಾಡುವ ಎಲ್ಲಾ ದೃಷ್ಟಿಯಿಂದಲೂ ಆಲೋಚಿಸಿ ತೀರ್ಮಾನ ಮಾಡಲಾಗಿದೆ. ಹಾವೇರಿಯಲ್ಲಿ ೧೩೦ ಎಕರೆ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿದ್ದಾಗಲೂ ಕೆಲವು ಕೊರತೆಗಳು ಕಾಣಿಸಿಕೊಂಡಿದ್ದವು. ಹೀಗಿರುವಾಗ ಮಂಡ್ಯ ನಗರದಲ್ಲಿ ಸಮಗ್ರವಾಗಿ ಸ್ಥಳ ಪರಿಶೀಲನೆ ನಡೆಸಿಯೇ ಅಂತಿಮಗೊಳಿಸಲಾಗಿದೆ. ಮುಖ್ಯವಾಗಿ ನೆಲದ ಗಟ್ಟಿತನ, ಸಮತಟ್ಟು, ಸಂಪರ್ಕ ವ್ಯವಸ್ಥೆಗೆ ನಮ್ಮ ಆಧ್ಯತೆ ಎಂದು ಪರೋಕ್ಷವಾಗಿ ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಅವರಿಗೆ ಟಾಂಗ್ ನೀಡಿದರು.
ಲಕ್ಷಾಂತರ ಜನರು ಬರುವ ನಿರೀಕ್ಷೆ:೧೯೯೪ರಲ್ಲಿ ನಡೆಸಿದ ಸಮ್ಮೇಳನಕ್ಕೂ ೩೦ ವರ್ಷಗಳ ನಂತರ ನಡೆಯುತ್ತಿರುವ ಸಮ್ಮೇಳನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಜನಸಂಖ್ಯೆ ಎಲ್ಲವೂ ಮೂರರಿಂದ ನಾಲ್ಕುಪಟ್ಟು ಹೆಚ್ಚಿದೆ ಎನ್ನುವುದನ್ನು ಅಂಕಿ- ಅಂಶಗಳ ಸಹಿತ ವಿವರಿಸಿದರು. ಸಾಹಿತ್ಯ ಸಮ್ಮೇಳನವನ್ನು ಶಾಲಾ- ಕಾಲೇಜು ರಜೆ ಇರುವ ಅವಧಿಯಲ್ಲಿ ನಿಗದಿಪಡಿಸಲಾಗಿದೆ. ಆದರೆ, ಕಲುಬುರಗಿಯಲ್ಲಿ ವಾರದ ಮಧ್ಯಭಾಗದಲ್ಲಿ ಸಮ್ಮೇಳನ ನಡೆದಿದ್ದರೂ ಸಹಸ್ರಾರು ಮಂದಿ ಪಾಲ್ಲೊಂಡಿದ್ದರು. ಹಾವೇರಿಯಲ್ಲಿ ವಾರದ ಕೊನೆಯಲ್ಲಿ ನಡೆದ ಪರಿಣಾಮ ೧೧ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದೇ ಮಾದರಿಯಲ್ಲಿ ಮಂಡ್ಯದಲ್ಲೂ ಹೆಚ್ಚಿನ ಸಂಖ್ಯೆಯ ಕನ್ನಡಾಭಿಮಾನಿಗಳು ಬರುವ ನಿರೀಕ್ಷೆ ಇದ್ದು, ಅದಕ್ಕೆ ಅನುವಾಗುವಂತೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಡೆಸಲಾಗುತ್ತಿದೆ ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು.
ನಿಖರವಾದ ಮಾರ್ಗಸೂಚಿ ಇಲ್ಲ:ಈಗಾಗಲೇ ನಡೆದಿರುವ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಆಳುವವರ ಅವಗಣನೆಗೆ ಒಳಗಾಗಿ ಇಂದಿಗೂ ಅನುಷ್ಠಾನಗೊಂಡಿಲ್ಲ. ಆದರೆ ಹಾವೇರಿಯಲ್ಲಿ ನಡೆದ ನುಡಿ ಜಾತ್ರೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡ ಇರಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ, ಉಳಿದ ಶೇ. ೪೦ರಷ್ಟು ಯಾವ ಭಾಷೆಯಲ್ಲಿರಬೇಕು ಎಂಬುದು ಸ್ಪಷ್ಟವಾಗಿಲ್ಲ. ತ್ರಿಭಾಷಾ ಸೂತ್ರದಲ್ಲಿ ಶೇ. ೪೦ರಷ್ಟನ್ನು ಬಳಸಬೇಕೇ ಅಥವಾ ನಾಮಫಲಕದ ಮಾಲೀಕರ ನಿರ್ಧಾರಕ್ಕೆ ಬಿಡಬೇಕೇ ಎಂಬ ಚರ್ಚೆ ಇನ್ನೂ ಚರ್ಚೆಯಲ್ಲಿಯೇ ಉಳಿದಿದೆ. ಹಾಗಾಗಿ ನಿಖರವಾದ ಮಾರ್ಗಸೂಚಿ ಇಲ್ಲದಂತೆ ಈ ವಿಷಯ ನೆನಗುದಿಗೆ ಬಿದ್ದಿದೆ. ಆದರೆ, ಸರೋಜಿನಿ ಮಹಿಷಿ ವರದಿ ಯಥಾವತ್ ಅನುಷ್ಠಾನಕ್ಕೆ ಬರಬೇಕೆಂಬುದು ಪರಿಷತ್ತಿನ ಇಚ್ಛೆಯಾದರೂ, ಅದು ಉಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದಲ್ಲಿ ಬೇರೆಯದ್ದೇ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಔದ್ಯೋಗಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಸಂವಾದದಲ್ಲಿ ಸಮಿತಿಯ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಇದ್ದರು.ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಬಗ್ಗೆ ಕಿಡಿ:
ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ಏಕವಚನದಲ್ಲಿ ಸಂಭೋಧಿಸಿರುವುದು ಹಾಗೂ ಅಮೆರಿಕಾಗೆ ಹೋಗುವುದು ಚಟ ಎಂದಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಅವರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ ಡಾ.ಮಹೇಶ್ ಜೋಶಿ ಕಿಡಿಕಾರಿದರು.ಇಂತಹ ಮಾತುಗಳನ್ನಾಡುವುದು ಸಾಹಿತಿಯಾಗಿರುವವರ ಸಂಸ್ಕಾರವೂ ಅಲ್ಲ, ಸಂಸ್ಕೃತಿಯೂ ಅಲ್ಲ. ಪದ ಬಳಕೆ ಮಾಡುವಾಗ ಎಚ್ಚರದಿಂದಿರಬೇಕು. ಏಕವಚನದಲ್ಲಿ ಮಾತನಾಡುವುದಕ್ಕೆ ನಾನು ಅವರ ಮನೆ ಕಾವಲುಗಾರನಲ್ಲ. ಯಾರ ಬಗ್ಗೆ ಮಾತನಾಡಿದರೂ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು ಎಂದು ನೇರವಾಗಿ ಹೇಳಿದರು.
ಅಮೆರಿಕಾಗೆ ಹೋಗುವುದು ಚಟ ಎಂಬ ಮಾತಿಗೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜೋಶಿ ಅವರು, ಅಮೆರಿಕಾಗೆ ಹೋಗಿದ್ದು ಅಕ್ಕ ಸಮ್ಮೇಳನ ನಡೆಸುವವರನ್ನು ಆಹ್ವಾನಿಸುವುದಕ್ಕಾಗಿಯೇ ಹೊರತು ಚಟಕ್ಕಾಗಿ ಅಲ್ಲ. ವಿದೇಶಗಳಲ್ಲೂ ಕನ್ನಡಿಗರಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳಿದ್ದಾರೆ. ಅವರೆಲ್ಲರನ್ನೂ ಆಹ್ವಾನಿಸುವುದು ಕನ್ನಡದ ಹಿರಿಮೆಯನ್ನು ಹೆಚ್ಚಿಸುತ್ತದೆ. ಚುಂಚನಗಿರಿ ಶ್ರೀಗಳು, ಸಚಿವ ಚಲುವರಾಯಸ್ವಾಮಿ ಅವರೂ ನಮ್ಮೊಡನೆ ಬಂದಿದ್ದರು. ಅವರೂ ಅಮೆರಿಕಾ ನೋಡುವ ಚಟದಿಂದ ಬಂದಿದ್ದರೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.ನಾನು ಸಿಬಿಐ ಅಧಿಕಾರಿಯಲ್ಲ:
ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪಿ ಎಂ.ಬಿ.ಕುಮಾರ್ ಎಂಬಾತನನ್ನು ಶ್ರೀರಂಗಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಡಾ.ಮಹೇಶ್‌ಜೋಶಿ ಅವರು, ನಾನು ಸಿಬಿಐ ಅಧಿಕಾರಿಯಲ್ಲ ಎಂದು ಚುಟುಕಾಗಿ ಉತ್ತರಿಸಿದರು.ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡುವುದು ಜಿಲ್ಲಾಧ್ಯಕ್ಷರೇ ಹೊರತು ನಾನಲ್ಲ. ನನಗೆ ಇದೊಂದೇ ಜಿಲ್ಲೆಯ ಜವಾಬ್ದಾರಿಯಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳ ಜವಾಬ್ದಾರಿ ಇದೆ. ಜಿಲ್ಲಾಧ್ಯಕ್ಷರ ಮೇಲಿನ ನಂಬಿಕೆ, ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ನೇಮಕ ಮಾಡಿರುತ್ತೇವೆ. ನೇಮಕ ಮಾಡುವಾಗಲೂ ಮುಂದಿನ ಆದೇಶದವರೆಗೆ ಎಂಬ ಪದವನ್ನು ಸೂಚಿಸಿರುತ್ತೇವೆ ಎಂದು ಹೇಳಿದರು.
ಎಂ.ಬಿ.ಕುಮಾರ್ ಎಂಬಾತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆಂಬುದು ನಿಮ್ಮಿಂದ ನನಗೆ ತಿಳಿಯುತ್ತಿದೆ. ಎಲ್ಲರ ಹಿನ್ನೆಲೆಯನ್ನು ತಿಳಿಯುವುದಕ್ಕೆ ನಾನು ಸಿಬಿಐ ಅಧಿಕಾರಿಯಲ್ಲ. ಎಂ.ಬಿ.ಕುಮಾರ್ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಇದರಲ್ಲಿ ರಾಜಕೀಯ ಪ್ರಭಾವ, ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.