ಕಪ್ಪತ್ತಗುಡ್ಡ ಸಮೀಪ ಗಣಿಗಾರಿಕೆಗೆ ಅನುಮತಿ ನೀಡದಿರಿ

| Published : Oct 19 2024, 12:15 AM IST

ಸಾರಾಂಶ

ಕಪ್ಪತ್ತಗುಡ್ಡ ಬಯಲು ನಾಡಿನ ಜೀವಾಳ, ವಾತಾವರಣ, ಮಳೆ ಪರಿಸರದ ಮೇಲೆ ಬಹಳ ಪರಿಣಾಮ ಬೀರುತ್ತದೆ

ಗದಗ: ಉತ್ತರ ಕರ್ನಾಟಕದ ಸೈಹ್ಯಾದ್ರಿ ಎಂದು ಕರೆಯಲ್ಪಡುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಸಮೀಪ ಯಾವುದೇ ರೀತಿಯ ಗಣಿಗಾರಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಮತಿ ನೀಡಬಾರದು, ಅನುಮತಿ ನೀಡಿದರೆ ಈ ಹಿಂದೆ ನಡೆಸಿದ ಪೊಸ್ಕೋ ವಿರೋಧಿ ಹೋರಾಟದ ಮಾದರಿಯಲ್ಲಿಯೇ ಜನ ಚಳವಳಿ ರೂಪಿಸಲಾಗುವುದು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪತ್ತಗುಡ್ಡ ಬಯಲು ನಾಡಿನ ಜೀವಾಳ, ವಾತಾವರಣ, ಮಳೆ ಪರಿಸರದ ಮೇಲೆ ಬಹಳ ಪರಿಣಾಮ ಬೀರುತ್ತದೆ, ಅದಕ್ಕಾಗಿ ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಪ್ರಮುಖವಾಗಿದೆ. ಈ ಹಿಂದೆ ಕಪ್ಪತ್ತಗುಡ್ಡದ ಮೇಲೆ ದೇಶದ ಪ್ರತಿಷ್ಠಿತ ಹಾಗೂ ವಿದೇಶಿ ಕಂಪನಿಗಳು ಕಣ್ಣು ಹಾಕಿ ಇಲ್ಲಿನ ಅಮೂಲ್ಯ ಅದಿರು ಲೂಟಿ ಮಾಡಲು ಬಂದಾಗಲೂ ಇಲ್ಲಿನ ಜನರು ದೊಡ್ಡ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕಾಲ್ಕಿತ್ತಿದ್ದರು. ಪೋಸ್ಕೋ ಹೊರಗೆ ಹೋದ ಮೇಲೆ ಬಲ್ದೋಟಾ, ಜಿಂದಾಲನಂತಹ ಕಂಪನಿಗಳು ಈಗಲೂ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು.

ಕಪ್ಪತ್ತಗುಡ್ಡವನ್ನು 2017ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ, ನಂತರ ಅದನ್ನು ಮರಳಿ ಪಡೆದು 2019 ರಲ್ಲಿ ವನ್ಯಧಾಮ ಮಾಡಿ ಕಪ್ಪತ್ತಗುಡ್ಡದ ಸುತ್ತಮುತ್ತಲು ಯಾವುದೇ ಗಣಿಗಾರಿಕೆ ಮಾಡಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಗಣಿಗಾರಿಕೆ ಮಾಡುವ ಹಲವಾರು ಕಂಪನಿಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದು, ಅಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅನುಮತಿ ನೀಡದಂತೆ ಸೂಚಿಸಿತ್ತು. ಇದೆಲ್ಲರ ಮಧ್ಯೆ ಆ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಹೊಸದಾಗಿ 28 ಪ್ರಸ್ತಾವನೆಗಳು ಈಚೆಗೆ ನಡೆದಿರುವ ವನ್ಯಜೀವಿ ಸಭೆಯ ಮುಂದೆ ಬಂದಿದ್ದು, ಅಂದಿನ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮುಂದೂಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಇದನ್ನು ಸರಾಸಗಟಾಗಿ ತಿರಸ್ಕಾರ ಮಾಡಬೇಕಿತ್ತು ಎಂದು ಹೇಳಿದರು.

ಈ ಹಿಂದೆ ಲಿಂ. ತೋಂಟದ ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟದ ವೇದಿಕೆಗೆ ಸಿಎಂ ಸಿದ್ಧರಾಮಯ್ಯ ಬಂದು ಭೇಟಿ ಕೊಟ್ಟು ಬೆಂಬಲಿಸಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು, ಈ ಹೊಸ ಪ್ರಸ್ತಾವನೆ ಮುಂದೂಡುವುದು ಸರಿಯಲ್ಲ, ಕಪ್ಪತ್ತಗುಡ್ಡ ಸುತ್ತಲೂ ಇರುವ 10 ಕಿಮಿ‌ ವ್ಯಾಪ್ತಿಯಲ್ಲಿನ ಎಲ್ಲ ಮಾದರಿಯ ಗಣಿಗಾರಿಕೆ ತಿರಸ್ಕಾರ ಮಾಡಬೇಕಿದೆ. ಇಲ್ಲವಾದಲ್ಲಿ ಕಪ್ಪತ್ತಗುಡ್ಡ ಉಳಿಸಲು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಿಶೇಷ ಕಾಳಜಿ ವಹಿಸಬೇಕು. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಡಾ. ಜಿ.ಬಿ. ಪಾಟೀಲ ಮಾತನಾಡಿ, ಕಪ್ಪತ್ತಗುಡ್ಡ ವನ್ಯಜೀವಿ ಧಾಮವಾಗಿ ಘೋಷಣೆಯಾಗಿದ್ದರೂ ಈಗ ಅದಕ್ಕೆ ಆತಂಕ ಎದುರಾಗಿದೆ. ಈ ಕುರಿತು ಪರಿಸರವಾದಿಗಳು, ಚಿಂತಕರು ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಲಿದೆ. ಕಪ್ಪತ್ತಗುಡ್ಡ ಮಡಿಲಲ್ಲಿ ಅಪರೂಪದ ಸಸ್ಯ ಪ್ರಬೇಧಗಳು ಇವೆ, ಅಲ್ಲಿರುವ ಔಷಧಿ ಸಸ್ಯಗಳು ಹಾಳಾಗುತ್ತಿವೆ. ಆಯುರ್ವೇದ ಕಾಲೇಜಿಗಳಿಗೆ ಔಷಧಿ ಸಸ್ಯಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಚವ್ಹಾಣ, ಬಾಲರಾಜ ಅರಬರ, ಷರೀಫ ಬಿಳಿಯಲಿ, ಶೇಖಣ್ಣ ಕವಳಿಕಾಯಿ, ಮುತ್ತು ಬಿಳಿಯಲಿ, ಆನಂದ ಸಿಂಗಾಡಿ, ಕಾಶಿನಾಥ ಬಗಲಿ, ನಾಗರಾಜ ಗೋಕಾವಿ, ಅನಿಲ ಕಾಳೆ, ಪರಶು ಕಾಳೆ ಮುಂತಾದವರು ಹಾಜರಿದ್ದರು.

ಮುಂದಿನ ಸೋಮವಾರ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಮತ್ತೆ 28 ಗಣಿಗಾರಿಕೆಯ ಪ್ರಸ್ತಾವನೆ ಚರ್ಚೆಗೆ ಬರಲಿವೆ. ಮುಖ್ಯಮಂತ್ರಿಗಳು ನೇರವಾಗಿ ಅವುಗಳನ್ನು ತಿರಸ್ಕಾರ ಮಾಡಬೇಕು. ಪ್ರಸ್ತುತ ವನ್ಯಜೀವಿ ಮಂಡಳಿಯ ಸದಸ್ಯರಲ್ಲಿ ಬಹುತೇಕ ರಾಜಕಾರಣಿಗಳೇ ಇದ್ದಾರೆ ಹಾಗಾಗಿ ಅವರು ಯಾರದ್ದೋ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯಮಂತ್ರಿಗಳು ಅವಕಾಶ ನೀಡದೇ ಕಪ್ಪತ್ತಗುಡ್ಡ ಉಳಿಸಬೇಕು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ತಿಳಿಸಿದ್ದಾರೆ.