ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹೃದಯದ ಭಾವನೆ, ಚಿಂತನಾಶೀಲತೆ, ಧನಾತ್ಮಕ ಸಾರ್ಥಕಭಾವ ಇದ್ದಲ್ಲಿ ಮಾತ್ರ ಮಾತ್ರ ಕಲಾಕೃತಿಗಳ ರಚನೆ ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ, ಮೈಸೂರು ಆರ್ಟ್ ಗ್ಯಾಲರಿ ಸಂಯುಕ್ತವಾಗಿ ಶ್ರೀ ನಟರಾಜ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರ ವಚನಾಧಾರಿತ ಕಲಾಕೃತಿಗಳನ್ನು ಧಾರವಾಡದ ಕರ್ನಾಟಕ ವಿವಿಯ ಶ್ರೀ ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿ, ದೈಹಿಕ, ಮಾನಸಿಕ, ಹೃದಯ ಸಮನ್ವಯತೆಯಿಂದ ಚಿತ್ರರಚನೆ ಸಾಧ್ಯ ಎಂದರು.
ಕಲಾಕೃತಿಗಳ ರಚನೆ, ಸಾಹಿತ್ಯ, ಸಂಶೋದನೆಗೆ ಸೃಜನಶೀಲತೆ ಮುಖ್ಯ. ಗ್ರಹಿಸಿ, ಆಸ್ವಾದಿಸಿ ನೋಡುವ ಕಲೆ ಅಪರೂಪದ ಸಾಧನ. ಸಾವಿರ ಪದಗಳು ಹೇಳುವುದನ್ನು ಒಂದು ಕಲಾಕೃತಿ ಹೇಳಬಲ್ಲದು. ಆಶಯ ವ್ಯಕ್ತಪಡಿಸುವಂತೆ ಚಿತ್ರ ರಚಿಸುವುದು ಸವಾಲಿನ ಕೆಲಸ ಎಂದರು.ಕಲೆ ಎಲ್ಲರಿಗೂ ಒಲಿಯುವುದಿಲ್ಲ. ತಪಸ್ವಿಗಳಿಗೆ, ಕಲಾಯೋಗಿಗಳಿಗೆ, ತ್ಯಾಗಿಗಳಿಗೆ ಮಾತ್ರ ಒಲಿಯುವಂಥದ್ದು. ಆರು ದಶಕಗಳಿಂದಲೂ ಮಿಗಿಲಾಗಿ ಕಲಾ ಸೇವೆಯಲ್ಲಿ ತೊಡಗಿರುವ ಎಲ್. ಶಿವಲಿಂಗಪ್ಪ ಅವರೊಬ್ಬ ಕಲಾತಪಸ್ವಿ ಎಂದು ಅವರು ಬಣ್ಣಿಸಿದರು.
ಮುಂದೆ ಪರಿಷತ್ತಿನ ವತಿಯಿಂದ ನಡೆಯುವ ದತ್ತಿ ಉಪನ್ಯಾಸಗಳಲ್ಲಿ ವಚನಾಧಾರಿತ ಕಲಾಕೃತಿಗಳನ್ನು ಶಾಲಾ ಮಕ್ಕಳಿಗೆ ಪ್ರದರ್ಶಿಸುವ ಕೆಲಸ ಮಾಡಲಾಗುವುದು. ಸಾಧಕನಿಗೆ ಯಾವತ್ತೂ ಸಾವಿಲ್ಲ. ಆದ್ದರಿಂದ ಶಿವಲಿಂಗಪ್ಪ ಅವರಿಗೆ ಸಿಗಬೇಕಾದ ಪ್ರಶಸ್ತಿಗಳು ಸಿಕ್ಕಿಲ್ಲ. ಅದಕ್ಕೆ ನಿರಾಶರಾಗಬಾರದು ಎಂದರು.ಶಿವಲಿಂಗಪ್ಪ ಅವರ ನಿಷ್ಠೆ, ಶರಣ ಸಾಹಿತ್ಯದ ಮೇಲಿನ ಒಲವು ಅಮೂರ್ತವಾದುದನ್ನು ಮೂರ್ತವಾಗಿಸಿದೆ ಎಂದು ಅವರು ಹೇಳಿದರು.
ವಚನ ಸಾಹಿತ್ಯ ಪ್ರಸ್ತುತವಚನ ಸಾಹಿತ್ಯ ವಿಶ್ವ ಸಾಹಿತ್ಯಪೀಠದ ಕಳಶವಿದ್ದಂತೆ. ಜನರ ನೋವು- ನಲಿವು, ಶೋಷಣೆಗಳನ್ನು ಆಧರಿಸಿ, ರಚಿತವಾಗಿರುವ ಮಾನವೀಯ ಸಾಹಿತ್ಯ. ಇವುಗಳಲ್ಲಿ ಆತ್ಮಕಲ್ಯಾಣವಿಲ್ಲ. ಶರಣರು ಜನರೊಂದಿಗೆ ಅನುಸಂಧಾನ ನಡೆಸಿ, ಸಾಮೂಹಿಕವಾಗಿ ರಚಿಸಿರುವ ಸಾಹಿತ್ಯ. ಇದರಿಂದಾಗಿಯೇ ಎಷ್ಟೇ ಶತಶತಮಾನಗಳು ಕಳೆದರೂ ವಚನ ಸಾಹಿತ್ಯ ಪ್ರಸ್ತುತವಾಗಿರುತ್ತದೆ ಎಂದು ಅವರು ಹೇಳಿದರು.ವಂಚನ ಸಾಹಿತ್ಯ ಮಾನವ ಸಂವಿಧಾನ ಇದ್ದಂತೆ. ಇದಕ್ಕೆ ತಿದ್ದುಪಡಿ ಸಾಧ್ಯವೇ ಇಲ್ಲ. ಹೀಗಾಗಿ ವಚನ ಸಾಹಿತ್ಯ ವಿಶೇಷವಾಗಿ ಯುವಕರನ್ನು ತಲುಪಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಕಲಾಕೃತಿಗಳ ಸಂರಕ್ಷಣೆ ಬಹಳ ಮುಖ್ಯ. ಯುವಕರು ಈ ಕಲಾಕೃತಿಗಳನ್ನು ವೀಕ್ಷಿಸಿ, ಬಸವಾದಿ ಶರಣರು ಹಾಗೂ ವಚನ ಸಾಹಿತ್ಯದ ಬಗ್ಗೆ ಅರಿಯಬೇಕು ಎಂದರು.ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲಾಕೃತಿಗಳನ್ನು ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ವಿಶೇಷ ಆಹ್ವಾನಿತರಾಗಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀ ವಾತ್ಸಲ್ಯ ಬಿ.ಇಡಿ ಕಾಲೇಜಿನ ಉಪನ್ಯಾಸಕ ದಿಲೀಪ್ ನಿರೂಪಿಸಿದರು. ಮೈಸೂರು ಆರ್ಟ್ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ವಂದಿಸಿದರು. ಚೂಡಾಮಣಿ ಪ್ರಾರ್ಥಿಸಿದರು.
-- ಬಾಕ್ಸ್ 1--ಕಲಾಕೃತಿಗಳನ್ನು ಸ್ವೀಕರಿಸಿದ ಧಾರವಾಡ ಕರ್ನಾಟಕ ವಿವಿ ಶ್ರೀ ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಮಾತನಾಡಿ, ಫ.ಗು. ಹಳಕಟ್ಟಿಯವರು ಸಂಗ್ರಹಿಸಿದ ವಚನ ಸಾಹಿತ್ಯದಿಂದಾಗಿ ನಮಗೆ ಬಸವಣ್ಣನವರ ಪ್ರಭಾವ ಅರಿಯಲು ಸಾಧ್ಯವಾಯಿತು. ಏಕೆಂದರೆ ವಚನಗಳು ನಮಗೆ ಬೆಳಕಿನ ದೀಪಗಳಾಗಿವೆ ಎಂದರು.ಬಸವೇಶ್ವರ ಪೀಠವು ಕಳೆದ 54 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದೆ. 1981 ರಿಂದ ಡಿಪ್ಲೋಮಾ, ಇತ್ತೀಚಿನ ವರ್ಷಗಳಲ್ಲಿ ಓಪನ್ ಎಲೆಕ್ಟ್ರಿವ್ ಕೋರ್ಸು ನಡೆಸುತ್ತಿದೆ.ಈವರೆಗೆ 80 ಗ್ರಂಥಗಳನ್ನು ಪ್ರಕಟಿಸಿದೆ. ವಚನಾಧಾರಿತ ಕಲಾಕೃತಿಗಳ ಮ್ಯೂಸಿಯಂ ಮಾಡಿ, ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಇಡಲಾಗುವುದು ಎಂದರು.