ಸಾಹಿತ್ಯ ರಚನೆ ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತವಾಗಬಾರದು

| Published : Feb 17 2025, 12:30 AM IST

ಸಾಹಿತ್ಯ ರಚನೆ ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತವಾಗಬಾರದು
Share this Article
  • FB
  • TW
  • Linkdin
  • Email

ಸಾರಾಂಶ

, ಅಕಾಡೆಮಿಕ್ ವಲಯದವರು ರಚಿಸಿರುವ ಸಾಹಿತ್ಯ ಶ್ರೇಷ್ಠ, ಇತರರದು ಆ ರೀತಿ ಇರುವುದಿಲ್ಲ ಎಂಬ ಭಾವನೆ ಹೋಗಬೇಕು. ಎಲ್ಲಾ ವರ್ಗದ ಜನತೆ ತಮ್ಮ ಅನುಭವಗಳನ್ನು ದಾಖಲು ಮಾಡಿದಾಗ ಮಾತ್ರ ಸಾಹಿತ್ಯ ಸಮೃದ್ಧವಾಗಲು ಸಾಧ್ಯ
ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯ ರಚನೆ ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತವಾಗಬಾರದು. ಏಕತಾನತೆಯಿಂದ ನರಳಬಾರದು. ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಜನರ ಅಭಿಪ್ರಾಯಗಳು ದಾಖಲಾಗಬೇಕು ಎಂದು ಜೆಎಸ್ಎಸ್‌ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರಮೂರ್ತಿ ದೇವನೂರು ಹೇಳಿದರು.

ನಂಜನಗೂಡಿನ ಅನುರಾಗ್‌ ಮಕ್ಕಳ ಮನೆ ಆವರಣದಲ್ಲಿ ಭಾನುವಾರ ಬಿಡುಗಡೆಯಾದ ಗುಂಡ್ಲುಪೇಟೆ ತಾ. ವಡ್ಡಗೆರೆಯ ಡಾ.ಎನ್‌. ಗವಿಸ್ವಾಮಿ ಅವರ ''''ಮಕ್ಕಳ ಸಾಕಿ ನೋಡು'''' ಕೃತಿ ಕುರಿತು ಮಾತನಾಡಿದ ಅವರು, ಅಕಾಡೆಮಿಕ್ ವಲಯದವರು ರಚಿಸಿರುವ ಸಾಹಿತ್ಯ ಶ್ರೇಷ್ಠ, ಇತರರದು ಆ ರೀತಿ ಇರುವುದಿಲ್ಲ ಎಂಬ ಭಾವನೆ ಹೋಗಬೇಕು. ಎಲ್ಲಾ ವರ್ಗದ ಜನತೆ ತಮ್ಮ ಅನುಭವಗಳನ್ನು ದಾಖಲು ಮಾಡಿದಾಗ ಮಾತ್ರ ಸಾಹಿತ್ಯ ಸಮೃದ್ಧವಾಗಲು ಸಾಧ್ಯ ಎಂದರು.

ಇದೇ ರೀತಿ ಇಲ್ಲಿ ಡಾ.ಎನ್‌. ಗವಿಸ್ವಾಮಿ ಅವರು ತಮಗೆ ದಕ್ಕಿದ ಅನುಭವಗಳನ್ನು ಅಕ್ಷರರೂಪದಲ್ಲಿ ದಾಖಲು ಮಾಡಿದ್ದಾರೆ. ಅವರದು ಮಾತು ಕಡಿಮೆ. ಆದರೆ ಬರವಣಿಗೆ ಮೊನಚು ಎಂದರು.

ಪಿ. ಲಂಕೇಶ್‌ ಅವರ ''''ಅವ್ವ'''' ಕವನ, ಜಿ.ಎಸ್. ಶಿವರುದ್ರಪ್ಪ ಅವರ ''''ದೀಪಧಾರಿ'''' ಕವನ, ''''ನಮ್ಮ ಮನೆಯ ದೀಪ'''' ಎಂಬ ಕವನದ ಸಂದೇಶಗಳು ಡಾ.ಎನ್‌. ಗವಿಸ್ವಾಮಿ ಅವರ ಲೇಖನಗಳಲ್ಲಿ ಕಂಡು ಬರುತ್ತವೆ. ಮಕ್ಕಳೊಂದಿಗಿನ ಅವರ ಅಭಿವ್ಯಕ್ತಿ ಇಲ್ಲಿ ಅಕ್ಷರ ರೂಪದಲ್ಲಿ ವ್ಯಕ್ತವಾಗಿದೆ. ಇಲ್ಲಿನ ಲೇಖನಗಳನ್ನು ಗಮನಿಸಿದಾಗ ಲೇಖನ, ಪ್ರಬಂಧ, ಕತೆಗಳ ನಡುವಿನ ಗೆರೆ ಅಳಿಸಿ ಹೋಗಿದೆ. ಇಲ್ಲಿ ಕಟ್ಟಿಕೊಟ್ಟಿರುವುದು ಆತ್ಮಕತೆಯೂ ಹೌದು, ಜೀವನಾನುಭವೂ ಹೌದು ಎಂದರು.

ಮೊಬೈಲ್‌ ಬಂದು ಯಾರೂ ಓದದಂತೆ ಮಾಡಿದೆ. ಸಾಮಾಜಿಕ ಜಾಲತಾಣದ ಸಂಕೀರ್ಣ ಸಂದರ್ಭದಲ್ಲಿ ಪ್ರಸ್ತುತ ಲೇಖಕನೇ ತನ್ನ ಕೃತಿಯ ಬಗ್ಗೆ ಮಾರ್ಕೆಟ್‌ ಮಾಡಬೇಕಾಗಿದೆ. ಕನ್ನಡದ ಬಹುದೊಡ್ಡ ಸಮಸ್ಯೆ ಎಂದರೇ ಇದು ಅನ್ನಕೊಡುವ ಭಾಷೆಯಲ್ಲ ಎಂಬ ಮನೋಭಾವ. ಇದು ಹೋಗಬೇಕು. ಭಾಷೆ ಒಗ್ಗೂಡಿಸಬೇಕೆ ಹೊರತು ವಿಭಜಿಸಬಾರದು ಎಂದು ಅವರು ಹೇಳಿದರು.

ಕುವೆಂಪು ಅವರ ಪ್ರಭಾವದಿಂದ ಹೊರಬರಲು ಜಿ.ಎಸ್. ಶಿವರುದ್ರಪ್ಪ ಎರಡು ಕವನ ಸಂಕಲನಗಳನ್ನು ಹೊರತರಬೇಕಾಯಿತು. ಅದೇ ರೀತಿ ದ.ರಾ. ಬೇಂದ್ರೆ ಅವರ ಪ್ರಭಾವದಿಂದ ಹೊರಬರಲು ಚೆನ್ನವೀರ ಕಣವಿ ಅವರು ಶ್ರಮಪಡಬೇಕಾಯಿತು. ದೇವನೂರು ಮಹದೇವ ಅವರಂತೆ ಮೊಗಳ್ಳಿ ಗಣೇಶ್‌ ಬರೆಯಬಹುದು. ಅದೇ ರೀತಿ ಡಾ. ಸಿದ್ದಲಿಂಗಯ್ಯ ಅವರದು ಬೆಂಗಳೂರು ಕನ್ನಡ, ಅರವಿಂದ ಮಾಲಗತ್ತಿ ಅವರದು ಮತ್ತೊಂದು ರೀತಿ. ನಂಜನಗೂಡು,, ಚಾಮರಾಜನಗರ ಭಾಷೆಯ ಸೊಗಡಿನ ವಿಚಾರ ಬಂದಾಗಲೆಲ್ಲಾ ದೇವನೂರು ಮಹಾದೇವ ಅವರ ಹೆಸರು ಪ್ರಸ್ತಾಪವಾಗುತ್ತದೆ. ಅದೇ ರೀತಿ ಡಾ.ಗವಿಸ್ವಾಮಿ ಅವರು ಚಾಮರಾಜನಗರ ಸೀಮೆಯ ಹಲವಾರು ಕನ್ನಡ ಪದಗಳನ್ನು ಈ ಕೃತಿಯಲ್ಲಿ ಬಳಕೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಡಾ.ಎನ್‌. ಗವಿಸ್ವಾಮಿ ಅವರ ಎಲ್ಲಾ ಕೃತಿಗಳು ಕೂಡ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಅನುಭವಗಳಿಂದ ಕೂಡಿವೆ. ತಾವು ಕಂಡಿದ್ದನ್ನು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಮಕ್ಕಳ ಲಾಲನೆ- ಪಾಲನೆಯಲ್ಲಿ ಇಷ್ಟೊಂದು ಸಂಕೀರ್ಣತೆ ಇದೆ ಎಂಬುದ ತಿಳಿಯಬೇಕಾದರೆ ಈ ಕೃತಿಯನ್ನು ಓದಬೇಕು ಎಂದರು.

ಚಾಮರಾಜನಗರ ರಂಗವಾಹಿನಿ ಸಂಸ್ಥೆಯ ಮುಖ್ಯಸ್ಥ, ಖ್ಯಾತ ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಮಹದೇಶ್ವರ, ಮಂಟೇಸ್ವಾಮಿ, ಸಂಚಿ ಹೊನ್ನಮ್ಮ, ನಿಜಗುಣ, ಷಡಕ್ಷರಿ. ಹನೂರು ಕೃಷ್ಣಮೂರ್ತಿ, ಹನೂರು ಚನ್ನಪ್ಪ ಸೇರಿದಂತೆ ಹಲವಾರು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿರುವ ಚಾಮರಾಜನಗರಪ ಜಿಲ್ಲೆಯಿಂದ ಈಗ ಡಾ.ಎನ್‌. ಗವಿಸ್ವಾಮಿ ಗಮನ ಸೆಳೆಯುವ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಅನುರಾಗ್‌ ಸೇವಾ ಟ್ರಸ್ಟ್‌ ಅಧ್ಯಕ್ಷ ಡಿ.ಜಿ. ಸೋಮಶೇಖರಮೂರ್ತಿ ಮಾತನಾಡಿ, ಮಕ್ಕಳಿಗೆ ಅಕ್ಷರ, ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಉತ್ತಮ ಸಂಸ್ಕಾರ ಕಲಿಸಲಾಗುತ್ತಿದೆ. ಮಕ್ಕಳಿಗೆ ಗುರುಗಳಾಗುವ ಬದಲು ಪೋಷಕರಂತೆಯೇ ನಡೆದುಕೊಳ್ಳಲಾಗುತ್ತಿದೆ ಎಂದರು.

ಸಾಹಿತಿ ಕಳಲೆ ಜವರನಾಯಕ ಮುಖ್ಯ ಅತಿಥಿಗಳಾಗಿದ್ದರು. ಇನಿತನಿ ಪ್ರಕಾಶನದ ಸಿ.ಎಂ. ನರಸಿಂಹಮೂರ್ತಿ ಜನಪದ ಗೀತೆಗಳನ್ನು ಹಾಡಿದರು. ಮಹೇಶ್‌ ಸ್ವರಚಿತ ಕವನ ವಾಚಿಸಿದರು. ಪುಟಾಣಿ ಇನಿ ವಚನಗೀತೆ ಹಾಡಿದಳು. ಸೌಭಾಗ್ಯ ಮಹದೇವಸ್ವಾಮಿ ಪ್ರಾರ್ಥಿಸಿದರು. ವೃಷಬೇಂದ್ರ ಸ್ವಾಗತಿಸಿದರು. ಶಿವಕುಮಾರ್‌ ನಿರೂಪಿಸಿದರು. ಶ್ರೀಧರಮೂರ್ತಿ ವಂದಿಸಿದರು.