ಬರಿದಾದ ಕೆರೆ-ಕಟ್ಟೆಗಳು: ಹನಿ ನೀರಿಗೂ ಹಾಹಾಕಾರ...!

| Published : Mar 27 2024, 01:05 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ನಾಲಾ ಬಯಲನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಪ್ರದೇಶಗಳು ಕೆರೆ-ಕಟ್ಟೆಗಳನ್ನು ಆಶ್ರಯಿಸಿವೆ. ತಾಲೂಕಿನಲ್ಲಿ ಒಟ್ಟು 235 ಕೆರೆಗಳು ರೈತರ ಕೃಷಿ ಮತ್ತು ಜನ ಜಾನುವಾರುಗಳ ಕುಡಿವ ನೀರಿನ ದಾಹ ಹಿಂಗಿಸುತ್ತಿವೆ. ಕುಡಿಯುವ ನೀರಿಗೂ ಜನ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಎಂ.ಕೆ.ಹರಿಚರಣ್ ತಿಲಕ್ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬಿಸಿಲಿನ ಬೇಗೆ ಹೆಚ್ಚಾದಂತೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರಿಗಾಗಿ ಜನ, ಜಾನುವಾರುಗಳು ಪರಿತಪ್ಪಿಸುವಂತಾಗಿದೆ.

ತಾಲೂಕಿನ ಕೆರೆ-ಕಟ್ಟೆಗಳು ನೀರಿಲ್ಲದೇ ಒಣಗಿವೆ. ಜೀವನದಿ ಹೇಮಾವತಿಯ ಒಡಲು ಬರಿದಾಗಿದೆ. ಪುರಸಭೆ ವ್ಯಾಪ್ತಿ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೊಳವೆ ಬಾವಿಗಳು ನೀರು ಬಾರದೆ ಸ್ಥಗಿತಗೊಳ್ಳುತ್ತಿವೆ.

ತಾಲೂಕಿನ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ನಾಲಾ ಬಯಲನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಪ್ರದೇಶಗಳು ಕೆರೆ-ಕಟ್ಟೆಗಳನ್ನು ಆಶ್ರಯಿಸಿವೆ. ತಾಲೂಕಿನಲ್ಲಿ ಒಟ್ಟು 235 ಕೆರೆಗಳು ರೈತರ ಕೃಷಿ ಮತ್ತು ಜನ ಜಾನುವಾರುಗಳ ಕುಡಿವ ನೀರಿನ ದಾಹ ಹಿಂಗಿಸುತ್ತಿವೆ.

ಹೇಮಾವತಿ ನದಿ ನೀರಿನ ಹರಿವು ಕಡಿಮೆಯಾಗಿ ನೀರಾವರಿ ಇಲಾಖೆ ಸಕಾಲದಲ್ಲಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸದ ಪರಿಣಾಮ ಕೆರೆಗಳು ಬರಿದಾಗಿವೆ. ಕುಡಿಯುವ ನೀರಿಗೂ ಜನ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತರ್ಜಲ ಕುಸಿತದಿಂದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿ ಬೋರ್‌ವೆಲ್ ಗಳಲ್ಲಿ ನೀರು ಕಡಿಮೆಯಾಗಿದೆ. ಕೆಲವೆಡೆ ಸ್ಥಗಿತಗೊಳ್ಳುವ ಆತಂಕವಿದೆ. ಇದು ರೈತರ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತಿದೆ.

ಹೇಮಾವತಿ ನದಿಯಿಂದ ನೀರೆತ್ತುವ ಜಾಕ್‌ವೆಲ್ ಇರುವ ಹೇಮಗಿರಿ ಬೆಟ್ಟ ಪಾದದ ಬಳಿ ನದಿ ನೀರು ಅಶುದ್ಧಗೊಂಡು ಪಾಚಿಕಟ್ಟಿ ನಿಂತಿದೆ. ನದಿಯಲ್ಲಿ ಕೇವಲ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರಿದೆ. ನದಿಯೊಳಗಿನ ಕಲ್ಲುಗಳು ಹೊರಕ್ಕೆ ಗೋಚರಿಸುತ್ತಿವೆ. ಇದರಿಂದ ಜಲಕ್ಷಾಮ ಉಂಟಾಗಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ.

ಏತ ನೀರಾವರಿ ಯೋಜನೆ ಸ್ಥಗಿತ:

ತಾಲೂಕಿನ ಐಚನಹಳ್ಳಿ ಏತ ನೀರಾವರಿ ಯೋಜನೆಗೆ ಕಳೆದ ತಿಂಗಳು ಚಾಲನೆ ನೀಡಲಾಗಿತ್ತು. ಆದರೆ, ಕೆರೆಗಳಿಗೆ ನೀರು ಹರಿದಷ್ಟೇ ವೇಗದಲ್ಲಿ ನಿಂತು ಹೋಗಿದೆ. ಹೇಮಾವತಿಯಲ್ಲಿ ನೀರು ಹರಿಯದ ಕಾರಣ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಣ್ಣ ನೀರಾವರಿ ಇಲಾಖೆ ಕೆರೆ ಕಟ್ಟೆಗಳಿಗೆ ಹೇಮೆ ನೀರು ತುಂಬಿಸುವ ಕೆಲಸವನ್ನು ನಿಲ್ಲಿಸಿದೆ. ತಮ್ಮೂರಿನ ಕೆರೆಗಳಿಗೆ ಹೇಮೆ ನೀರಿನ ಕನಸು ಕಾಣುತ್ತಿದ್ದ ಗ್ರಾಮೀಣ ಪ್ರದೇಶದ ರೈತರ ಕನಸು ನನಸಾಗುವ ಮುನ್ನವೇ ಕಮರಿ ಹೋಗಿದೆ.

ಮಲತಾಯಿ ಧೋರಣೆ:

ನೀರಿಲ್ಲ ಎನ್ನುವ ಕಾರಣ ಮುಂದೊಡ್ಡಿ ಕೆರೆಗಳಿಗೆ ನೀರು ತುಂಬಿಸುವುದವನ್ನು ಸ್ಥಗಿತಗೊಳಿಸಲಾಗಿದೆ. ಗೊರೂರು ಜಲಾಶಯದಲ್ಲಿ 10 ಟಿಎಂಸಿಯಷ್ಟು ನೀರಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಮ್ಮ ರಾಜಕೀಯ ಶಕ್ತಿ ಬಳಸಿ ತುಮಕೂರು ಜಿಲ್ಲೆಗೆ ಹೇಮೆ ನೀರು ಹರಿಸುತ್ತಿದ್ದಾರೆ. ಆದರೆ, ಅವರಿಗಿರುವಷ್ಟು ಕಾಳಜಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲ ಎಂದು ರೈತರು ದೂರಿದ್ದಾರೆ.

ಸರ್ಕಾರ ನೀರು ಹರಿಸುವ ವಿಚಾರದಲ್ಲಿ ತುಮಕೂರಿಗೆ ನೀರು ಹರಿಸಿ, ಮಂಡ್ಯ ಜಿಲ್ಲೆಯ ಜನರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಣ ರಾಜಕೀಯ ಬದಿಗೊತ್ತಿ ತಮ್ಮ ಸ್ವಕ್ಷೇತ್ರ ನಾಗಮಂಗಲ ಸೇರಿದಂತೆ ಜಿಲ್ಲೆಯ ಜನರ ಹಿತ ಕಾಯಲು ಜಿಲ್ಲೆಯ ನಾಲೆಗಳಿಗೆ ನೀರು ಹರಿಸಲು ಮುಂದಾಗಬೇಕಿದೆ.ಬೂಕನಕೆರೆ ಹೋಬಳಿಯ 46 ಕೆರೆಗಳನ್ನು ಐಚನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ತುಂಬಿಸುವ ಇಲಾಖೆ ಉದ್ದೇಶ ಈಡೇರದಿರಲು ರೈತರ ಅಸಹಕಾರವೇ ಕಾರಣ. ಈಗಾಗಲೇ ಸುಮಾರು 35 ಕೆರೆಗಳನ್ನು ಶೇ.30ರಷ್ಟು ತುಂಬಿಸಿದ್ದೇವೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದು ಹೋಗದಂತೆ ರೈತರು ಅಲ್ಲಲ್ಲಿ ವಾಲ್‌ಗಳನ್ನು ತಿರುಗಿಸಿಕೊಂಡು ಸಮಸ್ಯೆ ಉಂಟುಮಾಡಿದರು. ಇದರಿಂದ ಎಲ್ಲ ಕೆರೆಗಳಿಗೆ ತುಂಬಿಸುವ ನಮ್ಮ ಉದ್ದೇಶ ಈಡೇರಲಿಲ್ಲ.

- ಅಜರುದ್ದೀನ್, ಎಂಜಿನಿಯರ್ ಸರ್ಕಾರ ನೀರು ಹರಿಸುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಮ್ಮ ತಾಕತ್ತು ಪ್ರದರ್ಶಿಸಬೇಕು. ಮಂಡ್ಯ ಜಿಲ್ಲೆಗೂ ಹೇಮಾವತಿ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಜಿಲ್ಲೆಯ ರೈತರ ಹಿತ ಕಾಯಬೇಕು.

- ಎಂ.ವಿ.ರಾಜೇಗೌಡ, ರೈತ ಸಂಘದ ಹಿರಿಯ ಮುಖಂಡರು