ಸಾರಾಂಶ
ಬೆಳಗಾವಿ: ಪಂಚಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿರುವ ರಾಜ್ಯದ ಜನತೆಗೆ ಆರೋಗ್ಯದ ಗ್ಯಾರಂಟಿ ಇಲ್ಲದಂತಾಗಿದೆ. ಈ ಮೂಲಕ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕ್ಷಾಮ ಉದ್ಭವವಾಗಿದೆ. ಲೋಕಸಭಾ ಚುನಾವಣೆ ಗುಂಗಿನಲ್ಲಿದ್ದ ಕಾಂಗ್ರೆಸ್ ನಾಯಕರು ಪ್ರಚಾರದ ಸಮಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಒತ್ತಿ ಒತ್ತಿ ಹೇಳಿದರು. ಆದರೆ, ಜನರ ಆರೋಗ್ಯದ ಕುರಿತು ಯೋಚನೆ ಮಾಡದಿರುವುದರಿಂದ ಇದೀಗ ಸರ್ಕಾರಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಉದ್ಭವವಾಗಿದೆ. ಗಾಯಾಳುಯೊಬ್ಬ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದುಕೊಳ್ಳುವ ಸಮಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಔಷಧ ಕೊರತೆ ಹಾಗೂ ಸರ್ಕಾರ ನಿರ್ಲಕ್ಷ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿರುವುದು ಔಷಧ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಪಂಚಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿರುವ ರಾಜ್ಯದ ಜನತೆಗೆ ಆರೋಗ್ಯದ ಗ್ಯಾರಂಟಿ ಇಲ್ಲದಂತಾಗಿದೆ. ಈ ಮೂಲಕ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕ್ಷಾಮ ಉದ್ಭವವಾಗಿದೆ.
ಲೋಕಸಭಾ ಚುನಾವಣೆ ಗುಂಗಿನಲ್ಲಿದ್ದ ಕಾಂಗ್ರೆಸ್ ನಾಯಕರು ಪ್ರಚಾರದ ಸಮಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಒತ್ತಿ ಒತ್ತಿ ಹೇಳಿದರು. ಆದರೆ, ಜನರ ಆರೋಗ್ಯದ ಕುರಿತು ಯೋಚನೆ ಮಾಡದಿರುವುದರಿಂದ ಇದೀಗ ಸರ್ಕಾರಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಉದ್ಭವವಾಗಿದೆ. ಗಾಯಾಳುಯೊಬ್ಬ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದುಕೊಳ್ಳುವ ಸಮಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಔಷಧ ಕೊರತೆ ಹಾಗೂ ಸರ್ಕಾರ ನಿರ್ಲಕ್ಷ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿರುವುದು ಔಷಧ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.ಔಷಧ ಕೊರತೆ ಏಕೆ?:
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸಾಮಗ್ರಿ ಹಾಗೂ ಔಷಧಗಳ ಪೂರೈಕೆಗಾಗಿ ಟೆಂಡರ್ ಕರೆಯಲಾಗುತ್ತದೆ. ನಿಯಮಾನುಸಾರ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ಔಷಧಗಳನ್ನು ಪೂರೈಕೆ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಇದುವರೆಗೆ ಟೆಂಡರ್ ನೀಡದ ಹಿನ್ನೆಲೆಯಲ್ಲಿ ಔಷಧ ಪೂರೈಕೆಯಾಗುತ್ತಿಲ್ಲ. ನಿಯಮಾನುಸಾರ 2023 ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ, ಗುತ್ತಿಗೆ ನೀಡಬೇಕಿದ್ದ ಸರ್ಕಾರ, ನಿಗದಿತ ಅವಧಿಯೊಳಗೆ ಕ್ರಮಕೈಗೊಂಡಿಲ್ಲ.ನಂತರ ಚುನಾವಣೆ ಪ್ರಕ್ರಿಯೆಯಲ್ಲಿ ಸರ್ಕಾರ ಹಾಗೂ ನಾಯಕರು ಮುಂದಾಗಿದ್ದರ ಪರಿಣಾಮ ಸಮಯ ವ್ಯರ್ಥವಾಗಿದೆ. ಈ ಮಧ್ಯೆ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಔಷಧ ಪೂರೈಕೆ ಗುತ್ತಿಗೆ ನೀಡಲು ವಿಳಂಬವಾಗಿದೆ. ಇದರ ಪರಿಣಾಮದಿಂದಾಗಿ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಸಮುದಯಾ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಎದುರಾಗಿದೆ.ಇನ್ನೂ ಒಂದೂವರೆ ತಿಂಗಳು ಇದೇ ಸಮಸ್ಯೆ:
ಔಷಧ ಕೊರತೆ ನಿಬಾಯಿಸುವುದು ಸದ್ಯ ಅಷ್ಟೊಂದು ಸುಲಭವಾಗಿಲ್ಲ. ತುರ್ತು ಮತ್ತು ಅಗತ್ಯ ಔಷಧ ಹಾಗೂ ಸಾಮಗ್ರಿಗಳನ್ನು ಖರೀದಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಕಾಶ ಇದೆ. ಆದರೆ, ಇದಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಗಳು ಮುಂದಾಗುತ್ತಿಲ್ಲ. ಸರ್ಕಾರ ಡಿಸೆಂಬರನಲ್ಲೇ ಗುತ್ತಿಗೆ ನೀಡಿದ್ದರೇ ಇದೀಗ ಯಾವುದೇ ಸಮಸ್ಯೆ ಎದುರಾಗುತ್ತಲ್ಲಿಲ್ಲ. ಆದರೆ, ಸರ್ಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗಧಿತ ಅವಧಿಯಲ್ಲಿ ಔಷಧಿ ಪೂರೈಕೆಗೆ ಗುತ್ತಿಗೆ ಕರೆದಿಲ್ಲ. ಇದೀಗ ಜೂ.4 ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುರಿಂದ ಅಲ್ಲಿಯವರೆಗೆ ಯಾವುದೇ ಗುತ್ತಿಗೆ, ಹೊಸ ಯೋಜನೆ ಕೈಗೊಳ್ಳುವಂತಿಲ್ಲ. ಒಂದು ವೇಳೆ ಸರ್ಕಾರ ಜೂನ್‌ನಲ್ಲಿ ಗುತ್ತಿಗೆ ನೀಡಿದಲ್ಲಿ ಜುಲೈನಲ್ಲಿ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳು ಪೂರೈಕೆಯಾಗಲಿವೆ. ಆದರೆ, ಸರ್ಕಾರ ಜುಲೈನಲ್ಲಿ ಗುತ್ತಿಗೆ ನೀಡುವ ಬಗ್ಗೆ ಸುಳಿವು ನೀಡಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.ಬಾಕ್ಸ್ವೈರಲ್ ವಿಡಿಯೋದಲ್ಲಿ ಏನಿದೆ?
ಚಿಕ್ಕೋಡಿ ವಿಭಾಗದ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕಿನ ಕೇಂದ್ರಗಳಿಗೆ ಗೋಕಾಕ ವೇರ್‌ಹೌಸ್‌ನಿಂದ ಔಷಧ ಪೂರೈಕೆಯಾಗುತ್ತವೆ. ಆದರೆ, ವೇರಹೌಸ್‌ಗೆ ಔಷಧ ಪೂರೈಕೆಯಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಕೆಯಾಗುತ್ತಿಲ್ಲ. ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ, ಅವರ ಚಿಕಿತ್ಸೆ ನೀಡಲು ನಮ್ಮ ಬಳಿ ಔಷಧಯೇ ಇಲ್ಲ.ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಔಷಧ ಅಭಾವ ಸೃಷ್ಟಿಯಾಗಿದೆ ಎಂದು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
---------ಕೋಟ್....
ಡಿಸೆಂಬರ್‌ನಲ್ಲಿ ಔಷಧ ಪೂರೈಕೆಗೆ ಟೆಂಡರ್ ಕರೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಳಂಬವಾಗಿದೆ. ಸದ್ಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗುತ್ತಿಗೆ ಪ್ರಕ್ರಿಯೆ ನಡೆಸಲು ಬರುವುದಿಲ್ಲ. ಆದರೆ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಸ್ಥಳೀಯವಾಗಿ ಔಷಧ ಹಾಗೂ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ಇರುವುದರಿಂದ ಅಷ್ಟೊಂದು ಸಮಸ್ಯೆ ಆಗುವುದಿಲ್ಲ.-ಡಾ.ಮಹೇಶ ಕೋಣಿ, ಡಿಎಚ್‌ಒ ಬೆಳಗಾವಿ.---------ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಲಭ್ಯತೆಯಿದೆ. ಕೆಎಸ್‌ಎಂಎಸ್‌ಸಿ ಟೆಂಡರ್ ವಿಳಂಬದಿಂದ ಅಗತ್ಯ ಔಷಧಗಳ ಕೊರತೆ ಆಗದಂತೆ ಎನ್‌ಎಚ್‌ಎಂ ಅಡಿ ಸ್ಥಳೀಯ ಮಟ್ಟದಲ್ಲೇ ಔಷಧ ಖರೀದಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆಯಿಂದ ಅನುದಾನವೂ ಒದಗಿಸಲಾಗಿದೆ. ಹೀಗಾಗಿ ಯಾವ ಜಿಲ್ಲೆಯಿಂದಲೂ ಸಮಸ್ಯೆ ವರದಿಯಾಗಿಲ್ಲ. ಒಂದೊಮ್ಮೆ ಸಮಸ್ಯೆಯಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.- ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ