ಸಾರಾಂಶ
ಬೆಂಗಳೂರು : ರಾಜ್ಯದಲ್ಲಿನ ಆಸ್ತಿ ದಸ್ತಾವೇಜು ನೋಂದಣಿ ಪ್ರಕ್ರಿಯೆ ಹಾಗೂ ಇಸಿ/ಸಿಸಿ ಸೇವೆ ನೀಡುವ ಕಾವೇರಿ 2.0 ತಂತ್ರಾಂಶದಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಏಳನೇ ದಿನವೂ ಸಾರ್ವಜನಿಕರು ಪರದಾಡುವಂತಾಗಿದೆ.
ಕಳೆದ ಒಂದು ವಾರದಿಂದ ಇದ್ದ ಸರ್ವರ್ ಸಮಸ್ಯೆ ಬುಧವಾರವೂ ಮುಂದುವರೆದಿದ್ದು, ಬೆಳಗ್ಗೆಯೂ ಕಾವೇರಿ 2.0 ತಂತ್ರಾಂಶದ ನಾಗರಿಕರ ಲಾಗಿನ್ ತೆರೆದುಕೊಳ್ಳಲಿಲ್ಲ. ಉಪ ನೋಂದಣಾಧಿಕಾರಿಗಳ ಲಾಗಿನ್ ತೆರೆದುಕೊಂಡಿದ್ದರೂ ತಾಂತ್ರಿಕ ಸಮಸ್ಯೆಗಳು ಮುಂದುವರೆದಿದ್ದರಿಂದ ಗೊಂದಲಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಆದರೆ ಸಂಜೆ ವೇಳೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಂದಾದ ಸಚಿವ ಕೃಷ್ಣಬೈರೇಗೌಡ ಅವರು, ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಡಿಡಿಒಎಸ್ ಸಮಸ್ಯೆ:
ಅಧಿಕಾರಿಗಳ ಪ್ರಕಾರ, ಡಿಡಿಒಎಸ್ ದಾಳಿಯಿಂದ ಸಮಸ್ಯೆ ಉಂಟಾಗಿದೆ. ಡಿಸ್ಟ್ರಿಬ್ಯೂಟಿಂಗ್ ಡಿನಯಲ್ಸ್ ಆಫ್ ಸರ್ವಿಸಸ್ ಅಟ್ಯಾಕ್‌ನಿಂದಾಗಿ (ಡಿಡಿಒಎಸ್) ಸಾರ್ವಜನಿಕರು ಹಾಗೂ ಉಪ ನೋಂದಣಾಧಿಕಾರಿಗಳು ಲಾಗಿನ್ ಆಗಲು ಸಮಸ್ಯೆಯಾಗಿತ್ತು. ಇದು ಆನ್‌ಲೈನ್ ಸೇವೆಯಲ್ಲಿ ಅನಗತ್ಯ ಟ್ರಾಫಿಕ್ ಸೃಷ್ಟಿಸಿ ಅಡಚಣೆ ಮಾಡಲು ನಡೆದಿರುವ ಸೈಬರ್ ದಾಳಿ. ಹೀಗಾಗಿಯೇ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ದಸ್ತಾವೇಜು ನೋಂದಣಿಗಾಗಿ ಬಂದಿದ್ದ ಸಾರ್ವಜನಿಕರು ಸರ್ವರ್ ಸಮಸ್ಯೆಯಿಂದ ಕಾದು ಕಾದು ಸುಸ್ತಾದರು. ಮತ್ತೊಂದೆಡೆ ಈಗಾಗಲೇ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿಗಾಗಿ ಕಾಯುತ್ತಿದ್ದ ಸಾರ್ವಜನಿಕರೂ ಸಮಸ್ಯೆ ಎದುರಿಸುವಂತಾಯಿತು. ಮಧ್ಯಾಹ್ನದ ಬಳಿಕ ಸಮಸ್ಯೆ ಬಗೆಹರಿಸಲ್ಪಟ್ಟರೂ ಎಲ್ಲ ದಸ್ತಾವೇಜು ನೋಂದಣಿಗೂ ಅವಕಾಶ ದೊರೆಯಲಿಲ್ಲ. ಮತ್ತೊಂದೆಡೆ ಇಸಿ (ಋಣಭಾರ ಪತ್ರ) ಹಾಗೂ ಸಿಸಿ ನೋಂದಣಿಗಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು ಎಂದು ಮೂಲಗಳು ತಿಳಿಸಿವೆ.
ವಾರದಿಂದ ಆಗಿದ್ದ ಸಮಸ್ಯೆಗೆ ಮುಕ್ತಿ-ಸಚಿವ:
ಮತ್ತೊಂದೆಡೆ ಬುಧವಾರ ಸಂಜೆ ಪತ್ರಿಕಾ ಹೇಳಿಕೆ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಕಳೆದ ಒಂದು ವಾರದಿಂದ DDoS ದಾಳಿಯಿಂದ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ. ಹೀಗಾಗಿ ಈ ತಂತ್ರಾಂಶ ಇದೀಗ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು EC/CC ಸೇವೆಗಳ ಮೇಲೆ ಪರಿಣಾಮ ಉಂಟಾಗಿತ್ತು. ಇದು ಆದಾಯ ಸಂಗ್ರಹವನ್ನು ಮತ್ತಷ್ಟು ಕಡಿಮೆ ಮಾಡಿತು. ಇಂತಹ ಅನಿರೀಕ್ಷಿತ ದಾಳಿಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಗ್ಗಿಸಲು ಮುಂದುವರೆದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಅರ್ಜಿಯನ್ನು ರಕ್ಷಿಸಲು ಇ-ಆಡಳಿತ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು.ನೋಂದಣಿ ಸಂಖ್ಯೆ 556ಕ್ಕೆ ಕುಸಿದಿತ್ತು- ಸಚಿವ:
ತಾಂತ್ರಿಕ ದಾಳಿ ಕಾರಣಕ್ಕೆ ಫೆ.1 ರಂದು ತಂತ್ರಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಪರಿಣಾಮ ನೋಂದಣಿಗಳ ಸಂಖ್ಯೆ 556ಕ್ಕೆ ಇಳಿದಿತ್ತು. ಸಹಿ ಮಾಡಿದ ಇಸಿ (ಋಣಭಾರ ಪ್ರಮಾಣ ಪತ್ರ) ಸಂಖ್ಯೆ 1649 ಮತ್ತು ಸಿಸಿ ಸಂಖ್ಯೆ 405ಗೆ ಕುಸಿದು, ಕೇವಲ 15.18 ಕೋಟಿ ರು. ಮಾತ್ರ ಆದಾಯ ಸಂಗ್ರಹವಾಗಿತ್ತು.
ಫೆ.3 ರಂದು ಮಧ್ಯಂತರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಹೀಗಾಗಿ ನೋಂದಣಿಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿತು. ಪರಿಣಾಮ 5243 ನೋಂದಣಿಗಳಾಗಿದ್ದರೆ, 3525 ಇಸಿ ಗಳನ್ನು ಸಹಿ ಮಾಡಿದ್ದು, 652 ಸಿಸಿ ವಿತರಿಸಲಾಯಿತು. ಇದರಿಂದ ಆದಾಯ 52.24 ಕೋಟಿ ರು.ಗೆ ಹೆಚ್ಚಾಯಿತು.
ಇನ್ನು ಫೆ.4 ರಂದು ಅರ್ಜಿಗಳ ಸಂಖ್ಯೆ ಮತ್ತೊಮ್ಮೆ ಕಡಿಮೆಯಾಗಲಾರಂಭಿಸಿತು. ಇದಕ್ಕೆ ಅಗತ್ಯ ಕ್ರಮ ಕೈಗೊಂಡ ಬಳಿಕ ತಂತ್ರಾಂಶದ ಕಾರ್ಯಕ್ಷಮತೆ ಸುಧಾರಿಸಿತು. ಆದರೂ 1,657 ನೋಂದಣಿಗಳು ದಾಖಲಾಗಿದ್ದು, 17.13 ಕೋಟಿ ರು. ಮಾತ್ರ ಆದಾಯ ಸಂಗ್ರಹವಾಯಿತು.
ಈ ಎಲ್ಲಾ ಸಮಸ್ಯೆಗಳಿಂದಾಗಿ ಬುಧವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಬುಧವಾರ ಒಟ್ಟು 7,225 ನೋಂದಣಿ ಆಗಿದ್ದು 62.93 ಕೋಟಿ ರು. ಆದಾಯ ಸಂಗ್ರಹವಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಿನ್ನೆಯೂ ಆದಾಯ ಕುಸಿತ
ಕಂದಾಯ ಇಲಾಖೆಯ ಸ್ಪಷ್ಟನೆಯಲ್ಲಿ ಬುಧವಾರ ಡಿಸೆಂಬರ್ ಸರಾಸರಿಯಷ್ಟು ಆದಾಯ ಸಂಗ್ರಹವಾಗಿದೆ. ಹೀಗಾಗಿ ಸಹಜ ಸ್ಥಿತಿಗೆ ನೋಂದಣಿ ಪ್ರಕ್ರಿಯೆ ಮರಳಿದೆ ಎಂದು ಹೇಳಲಾಗಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಇ-ಖಾತಾ ಗೊಂದಲ ಹಾಗೂ ಉಪ ನೋಂದಣಾಧಿಕಾರಿಗಳ ಮುಷ್ಕರದಿಂದಾಗಿ ನೋಂದಣಿ ಆದಾಯ ಕುಸಿದಿದೆ. ಹೀಗಾಗಿ 62.93 ಕೋಟಿ ರು.ಗಳಷ್ಟು ಸರಾಸರಿ ಆದಾಯ ಸಂಗ್ರಹವಾಗಿದೆ. ವಾಸ್ತವದ ಸರಾಸರಿ ಆದಾಯ 80-100 ಕೋಟಿ ರು.ಗಳಷ್ಟಿರುತ್ತದೆ. ಅದಕ್ಕೆ ಹೋಲಿಸಿದರೆ ಬುಧವಾರವೂ ಆದಾಯ ಕುಸಿತ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.5ರ ನೋಂದಣಿ ಅಂಕಿ-ಅಂಶ (ಸಂ.4 ಗಂಟೆವರೆಗೆ):- ಒಟ್ಟು ನೋಂದಣಿಗಳು: 7,225- ಆದಾಯ ಸಂಗ್ರಹ: 62.59 ಕೋಟಿ ರು.
- 2024ರ ಡಿಸೆಂಬರ್ ಸರಾಸರಿ ಆದಾಯ- 62.93 ಕೋಟಿ ರು.