ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಳೆ ನಿಂತರೂ ನೆರೆ ನಿಲ್ಲದ ಸ್ಥಿತಿ ದಾವಣಗೆರೆ ಜಿಲ್ಲೆಯಲ್ಲಿ ಮುಂದುವರಿದಿದ್ದು, ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ತುಂಗಭದ್ರಾ ನದಿ ಆರ್ಭಟ ಗುರುವಾರವೂ ಮುಂದುವರಿದಿತ್ತು.ತುಂಗಾ-ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ನೆರೆ ಬಂದಿದ್ದು, ಜಿಲ್ಲೆಯಲ್ಲಿ ನದಿ ಹಾದು ಹೋಗಿರುವ ತಗ್ಗು ಪ್ರದೇಶಗಳು, ರಸ್ತೆಗಳು, ನದಿ ದಂಡೆ ಗ್ರಾಮಗಳವರೆಗೂ ತುಂಗಭದ್ರೆ ಚಾಚಿಕೊಂಡಿದ್ದಳು.
ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್‌ನ 150ಕ್ಕೂ ಹೆಚ್ಚು ಜನರನ್ನು ಅಲ್ಲಿನ ಅಂಬೇಡ್ಕರ್ ಭವನದಲ್ಲಿ ಪ್ರತಿ ಸಲದಂತೆ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದ ಕುಟುಂಬಗಳು ರಾತ್ರೋರಾತ್ರಿ ಸಿಕ್ಕ ವಸ್ತುಗಳು, ಬಟ್ಟೆ ಬರೆಗಳ ಸಮೇತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿವೆ.ಪ್ರತಿ ವರ್ಷ ಹೊನ್ನಾಳಿ ಬಾಲರಾಜ ಘಾಟ್, ಹರಿಹರ ನಗರ ಗಂಗಾ ನಗರದ ನಿವಾಸಿಗಳ ಗೋಳು ಇದೇ ರೀತಿ ಇರುತ್ತದೆ. ಹರಿಹರದ ಗಂಗಾ ನಗರ ನಿವಾಸಿಗಳನ್ನು ಸಹ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಎರಡೂ ಕಡೆ ಕಾಳಜಿ ಕೇಂದ್ರಗಳಲ್ಲಿ ನೂರಾರು ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರತಿ ಸಲ ನೆರೆ ಬಂದಾಗಲೂ ತಾಲೂಕು ಆಡಳಿತ, ಜಿಲ್ಲಾಡಳಿತ ಅಧಿಕಾರಿ ವರ್ಗ, ಜನ ಪ್ರತಿನಿಧಿಗಳು ಬಂದು ಸಾಂತ್ವನ ಹೇಳುವುದಕ್ಕಷ್ಟೇ ಸೀಮಿತವಾಗಿದ್ದು, ಈ ಜನರಿಗೆ ಶಾಶ್ವತ ಸೂರು, ಆಶ್ರಯ ಕಲ್ಪಿಸುವ ಕೆಲಸ ಯಾಕೆ ಆಗಿಲ್ಲವೆಂಬುದಕ್ಕೆ ಸ್ಪಷ್ಟ ಕಾರಣ ಸಹ ನಿಗೂಢವಾಗಿಯೇ ಇದೆ.
ನದಿ ನೀರಿನ ಹರಿವು ಹೆಚ್ಚುತ್ತಿದ್ದು, ಹರಿಹರದ ಗಂಗಾ ನಗರ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು, ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ತಲುಪಿದೆ. ಜಿಲ್ಲಾಡಳಿತವು ಕಾಳಜಿ ಕೇಂದ್ರವನ್ನು ಸ್ಥಾಪಿಸಿದ್ದರೂ ಅಲ್ಲಿಗೆ ಸ್ಥಳಾಂತರಕ್ಕೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ತಾವು ಇದ್ದರೂ ಇಲ್ಲಿಯೇ, ಸತ್ತರೂ ಇಲ್ಲಿಯೆ. ಇಲ್ಲೇ ನೀರಿನಲ್ಲೇ ಸಾಯುತ್ತೇವೆಯೇ ಹೊರತು, ಕಾಳಜಿ ಕೇಂದ್ರಕ್ಕೆ ನಾವು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಪ್ರತಿ ಸಲ ನೀರಿನ ಹರಿವು ಹೆಚ್ಚಾದಾಗ, ಪ್ರವಾಸ ಸಂದರ್ಭದಲ್ಲಿ ನದಿ ಪಾತ್ರದ ಜನರ ಪರಿಸ್ಥಿತಿ ಇದೇ ರೀತಿ ಇರುತ್ತದೆ.ಸಹಜವಾಗಿಯೇ ಸಮಸ್ಯೆ ಸರಿಪಡಿಸಬೇಕಾದ ಆಡಳಿತ ಯಂತ್ರಕ್ಕೆ ಇಂತಹ ಕುಟುಂಬಗಳ ನೆನಪಾಗುವುದು ನೆರೆ ಬಂದಾಗ ಮಾತ್ರ ಎಂಬ ದೂರು ಸಹ ಇದೆ. ಕಾಳಜಿ ಕೇಂದ್ರಗಳಿಗೆ ನಾವು ಬಟ್ಟೆ, ಬರೆ, ಪಾತ್ರೆ, ಮಕ್ಕಳು, ಮರಿ, ಸಾಮಾನು ಸರಂಜಾಮು ಕಟ್ಟಿಕೊಡು, ಜಾನುವಾರು ಹೊಡೆದುಕೊಂಡು, ಮನೆ ಮಂದಿಯಲ್ಲಾ ಕಾಳಜಿ ಕೇಂದ್ರಕ್ಕೆ ಹೋಗಬೇಕಾ? ಪ್ರತಿ ಸಲವೂ ಇದೇ ರೀತಿ ಮಾಡುತ್ತಾರೆ. ನಮಗೆ ಎಲ್ಲಿಯಾದರೂ ಸರ್ಕಾರದಿಂದ ಜಾಗ ಕೊಡಲಿ. ಗುಡಿಸಲು ಕಟ್ಟಿಕೊಂಡು, ನೆಮ್ಮದಿಯ ಜೀವನ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ.
ಹೀಗೆ ನೆರೆ, ಪ್ರವಾಹ ಬಂದಾಗ ನಮ್ಮ ಬಗ್ಗೆ ಎಂದಿಗೂ ಇಲ್ಲದ ಕಾಳಜಿ ತೋರುವುದೇಕೆ? ನಿಮಗೆ ನಮ್ಮೆಲ್ಲರ ಬಗ್ಗೆ ನಿಜ ಕಾಳಜಿ ಇದ್ದರೆ, ಶಾಶ್ವತವಾಗಿ ಜಾಗ ಕೊಟ್ಟು, ನಮಗೆ ಮನೆ, ಗುಡಿಸಲು ಕಟ್ಟಿಕೊಂಡು ಇರಲು ಅನುವು ಮಾಡಿಕೊಡಲಿ ಎಂದು ಒತ್ತಾಯಿಸುತ್ತಾರೆ.ನದಿ ಪಾತ್ರದ ಹೊಲ, ಗದ್ದೆಗಳು ಜಲಾವೃತವಾಗಿವೆ. ಅದರಲ್ಲೂ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ನೆರೆಯಿಂದಾಗಿ ಭತ್ತ, ಅಡಕೆ ಬೆಳೆಗಾರರು, ಇತರೆ ತೋಟದ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನದಿ ಪಾತ್ರದ ಸಾವಿರಾರು ಎಕರೆ ಅಡಕೆ ತೋಟ, ಭತ್ತದ ಗದ್ದೆಗಳು ಜಲಾವೃತವಾಗಿವೆ. ಹೊನ್ನಾಳಿ ತಾ. ಕಂಬಾರಗಟ್ಟೆ, ಬೆನಕನಹಳ್ಳಿ, ಸಾಸ್ವೇಹಳ್ಳಿ ಇತರೆ ಭಾಗದಲ್ಲಿ ಬತ್ತ, ಅಡಿಕೆ ಬೆಳೆಗಾರರು ತುಂಗಭದ್ರಾ ಪ್ರವಾಹದಿಂದ ದಿಕ್ಕೇ ತೋಚದಂತಾಗಿದ್ದಾರೆ.
ಭದ್ರಾ ನೀರು ನಂಬಿ ಮಳೆಗಾಲದ ಬೆಳೆಗೆ ಭತ್ತದ ನಾಟಿ ಮಾಡಿಕೊಂಡಿದ್ದಲ್ಲೆಲ್ಲಾ ಮಡಿಗಳನ್ನೆಲ್ಲಾ ತುಂಗಭದ್ರೆ ಆಪೋಷನ ತೆಗೆದುಕೊಂಡಿದ್ದಾಳೆ. ಇದೇ ಸ್ಥಿತಿ ಇನ್ನೊಂದು ವಾರ ಮುಂದುವರಿದರೆ ರೈತರಿಗೆ ನೂರಾರು ಕೋಟಿ ರು. ನಷ್ಟವಾಗುವ ಅಪಾಯವೂ ಇಲ್ಲದಿಲ್ಲ. ಕ್ಷಣಕ್ಷಣಕ್ಕೂ ತುಂಗಭದ್ರಾ ನದಿ ನೀರಿನ ಹರಿವು ಏರಿಕೆ, ಇಳಿಕೆಯಾಗುತ್ತಿದೆ. ಸದ್ಯಕ್ಕೆ ಬುಧವಾರದಿಂದ ದಾವಣಗೆರೆ ಜಿಲ್ಲೆಯಲ್ಲಿ ಮಳೆ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದಂತೆ ಸುಮ್ಮನಾಗಿದೆ.ಸದ್ಯಕ್ಕೆ ಜಿಲ್ಲೆ ತುಂಗಭದ್ರಾ ನದಿ ನೀರಿನ ಮಟ್ಟವು ನಿನ್ನೆಗೆ ಹೋಲಿಸಿದರೆ ಗುರುವಾರ ಒಂದಿಷ್ಟು ಇಳಿಕೆಯಾಗುತ್ತಾ ಸಾಗಿತ್ತು. ಹೊನ್ನಾಳಿ ನದಿ ನೀರಿನ ಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್‌ನ ಬೇಸ್ ಸ್ಟೇಷನ್‌ನಲ್ಲಿ 11.48 ಮೀಟರ್ ಹರಿಯುತ್ತಿತ್ತು. ಇದೇ ಕೇಂದ್ರದಲ್ಲಿ ಬುಧವಾರ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿದಿದ್ದು, ನಿನ್ನೆಗೆ ಹೋಲಿಸಿದರೆ ಇಂದಿನ ಪ್ರಮಾಣ ಸುಮಾರು ಇಳಿಕೆಯಾಗಿದೆ. ಇದೇ ರೀತಿ ಇಳಿಕೆಯಾಗುತ್ತಿದ್ದರೆ ನದಿ ಪಾತ್ರದ ಗ್ರಾಮಸ್ಥರು, ರಸ್ತೆ ಸಂಪರ್ಕ ಕಡಿತವಾಗಿ, ಸೇತುವೆಗಳು ಮುಳುಗಡೆಯಾಗಿದ್ದ ಗ್ರಾಮಗಳ ಜನರು, ರೈತರು ನೆಮ್ಮದಿ ನಿಟ್ಟಿಸಿರು ಬಿಡುತ್ತಾರೆ.