ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರೈತರು ತಾವು ಬೆಳೆಯುವ ವಿವಿಧ ಹಣ್ಣುಗಳ ವಿಶೇಷ ತಳಿಯನ್ನು ನೋಂದಣಿ ಮಾಡಬೇಕು. ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ತಳಿ ನೋಂದಣಿ ಮಾಡುವ ರೈತರ ಸಂಖ್ಯೆ ತೀರಾ ಕಡಿಮೆಯಿದೆ. ಆದ್ದರಿಂದ ಹೆಚ್ಚಿನ ರೈತರು ನೋಂದಣಿ ಮಾಡಿ ತಮ್ಮ ತಳಿಯನ್ನು ಅಭಿವೃದ್ಧಿಪಡಿಸಬೇಕೆಂದು ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕುಗಳ ಕಾಯ್ದೆಯ ಅಧ್ಯಕ್ಷ ಡಾ. ತ್ರಿಲೋಚನ್ ಮೊಹಪಾತ್ರ ಸಲಹೆ ನೀಡಿದ್ದಾರೆ.ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಲ್ಲಿ ಶನಿವಾರ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿಧ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ರೂಪಿಸಿರುವ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಉಪಯೋಗ ರೈತರಿಗೆ ತಲುಪಬೇಕು. ಈ ಕಾಯಿದೆ ಮುಖಾಂತರ ರೈತರ ಸಬಲೀಕರಣ ಮಾಡಲಾಗುತ್ತಿದೆ. ತಮ್ಮಲ್ಲಿರುವ ವಿಭಿನ್ನ ತಳಿಗಳನ್ನು ರೈತರು ಈ ಕಾಯಿದೆ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೀಗೆ ನೋಂದಾಯಿಸಿಕೊಂಡಾಗ ಸಿಗುವ ಪ್ರಮಾಣಪತ್ರಕ್ಕೆ ಆಸ್ತಿ ದಾಖಲೆಗೆ ಇರುವಷ್ಟೇ ಬೆಲೆ ಇದೆ. ಈ ಕಾಯಿದೆ ಅಡಿಯಲ್ಲಿ ನೋಂದಾವಣಿ ಆಗಿರುವ ಸಿದ್ದು ಹಲಸು ಯಶೋಗಾಥೆ ಎಲ್ಲರಿಗೂ ಮಾದರಿ ಎಂದರು.ಪ್ರಾಕೃತಿಕ ಅನುಕೂಲತೆಗಳನ್ನು ಹೊಂದಿರುವ ಕೊಡಗಿನಲ್ಲಿ ಕಾಫಿ ಮಾತ್ರವಲ್ಲದೆ ಹೊರದೇಶಗಳಿಂದ ಪರಿಚಯವಾದ ವಿದೇಶಿ ಹಣ್ಣುಗಳನ್ನೂ ಬೆಳೆಯಲಾಗುತ್ತಿದೆ. ಇಲ್ಲಿಯ ಜೀವ ವೈವಿಧ್ಯತೆ ಕೊಡಗಿನ ಪಾಲಿಗೆ ಅನುಕೂಲಕರವಾಗಿದ್ದು, ಇದನ್ನೇ ಬಳಸಿಕೊಂಡು ವಿವಿಧ ಬೆಳೆ ಬೆಳೆಯಲು ಅವಕಾಶವಿದೆ.
ಉನ್ನತ ವಿದ್ಯಾಭ್ಯಾಸದ ನಂತರ ಕೃಷಿ ಕಡೆಗೆ ಒಲವು ತೋರಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇಂಥ ಬೆಳವಣಿಗೆ ಮಧ್ಯೆಯೂ ಕೃಷಿ ಕಡೆಗೆ ಆಕರ್ಷಿತರಾಗುವ ಯುವ ಸಮುದಾಯದ ಬಗ್ಗೆ ಅಭಿಮಾನ ಪಡಬೇಕು ಎಂದರು.ಅಪರೂಪದ ಜೀವ ವೈವಿಧ್ಯತೆ ತಾಣವಾಗಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಇಲ್ಲಿನ ವಿಭಿನ್ನತೆಯಾಗಿರುವ ಜೀವವೈವಿಧ್ಯತೆಯನ್ನು ಉಳಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಲಾಭ ಗಳಿಸುವಂತಾಗಬೇಕು. ಕೃಷಿ ಕ್ಷೇತ್ರದ ಅವಕಾಶಗಳು, ಇಲ್ಲಿಯ ಯಶಸ್ವಿ ಕತೆಗಳನ್ನು ಶಾಲೆಗಳಿಗೂ ತಲುಪಿಸುವಂತಾಗಬೇಕು ಎಂದು ಹೇಳಿದರು.
ಬೆಂಗಳೂರು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಕೆ. ಬೆಹೆರ ಮಾತನಾಡಿ, ವೈವಿಧ್ಯಮಯ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಕೊಡಗಿನ ವಾತಾವರಣ ಸೂಕ್ತವಾಗಿದೆ. ಶೇ.20ರಷ್ಟು ವೈವಿಧ್ಯಮಯ ತಳಿಗಳು ಕೊಡಗಿನಲ್ಲಿ ಕಂಡುಬರುತ್ತದೆ. ಇಲ್ಲಿಯಷ್ಟು ಜೀವ ವೈವಿಧ್ಯತೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಸಲುವಾಗಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಹೆಚ್ಚಿನ ವಿಜ್ಞಾನಿಗಳು, ತಂತ್ರಜ್ಞರನ್ನು ಒದಗಿಸಲಾಗುವುದು. ಕೊಡಗಿನ ಕಿತ್ತಳೆ ಮತ್ತು ಕೂರ್ಗ್ ಹನಿ ಡ್ಯೂ ಪಪ್ಪಾಯಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು.ಕಾಫಿ ಬೋರ್ಡ್ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಇತ್ತೀಚೆಗೆ ಹವಾಮಾನ ಬದಲಾವಣೆ ಅರೆಬಿಕಾ ಕಾಫಿಯಂಥ ಸೂಕ್ಷ್ಮ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ರೈತರ ಆದಾಯ ಹೆಚ್ಚಳದ ಕನಸಿಗೆ ಇದರಿಂದ ಹಿನ್ನಡೆ ಆಗಿದೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಪಾರಾಗಲು ವಿಜ್ಞಾನಿಗಳು ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲಿ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯಲು ಸೂಕ್ತ ವಾತಾವರಣವಿದೆ. ಆದರೆ ಬೆಳೆದ ಹಣ್ಣುಗಳಿಗೆ ಮಾರುಕಟ್ಟೆ ಒದಗಿಸುವುದೇ ದೊಡ್ಡ ಸಮಸ್ಯೆ ಆಗಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಬಗ್ಗೆ ಡಾ. ದಿಪಾಲ್ ರಾಯ್ ಚೌದುರಿ ಮತ್ತು ರ‍್ಯಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಹಣ್ಣು ವಿಜ್ಞಾನಿ ಡಾ. ಮುರಳೀಧರ ಬಿ.ಎಂ. ವಿಷಯ ಮಂಡನೆ ಮಾಡಿ ಮಾಹಿತಿ ನೀಡಿದರು.ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಹಣ್ಣಿನ ಬೆಳೆಗಳ ವಿಭಾಗದ ಮುಖ್ಯಸ್ಥ ಡಾ. ಶಂಕರನ್, ಕೀಟ ವಿಜ್ಞಾನಿ ಡಾ. ರಾಣಿ ಮತ್ತಿತರರು ಇದ್ದರು.