ಸಾರಾಂಶ
ಹಾನಗಲ್ಲ: ತೋಟಗಾರಿಕೆ ಬೆಳೆ ವಿಮೆ ಕಂತು ತುಂಬಲು ಗ್ರಾಮ-1 ಕೇಂದ್ರಗಳಲ್ಲಿ ರೈತರು ಪರದಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಸ ಆದೇಶದಂತೆ ಬೆಳೆ ವಿಮೆ ತುಂಬಲು ಕೆಲವು ರೈತರು ನಿಯಮ ಪಾಲಿಸಬೇಕು ಎನ್ನುತ್ತಿದ್ದಾರೆ. ಹಿಂದಿನ ವರ್ಷದಲ್ಲಿ ಕಟ್ಟಿದ ಜಮೀನು ಬೆಳೆಗೆ ಈ ವರ್ಷ ಬೆಳೆವಿಮೆ ತುಂಬಲು ಆಗುತ್ತಿಲ್ಲ. ಇದೇ ಜುಲೈ ೩೧ ವಿಮೆ ಕಂತು ತುಂಬಲು ಅಂತಿಮ ದಿನ.
ಹಾನಗಲ್ಲ ತಾಲೂಕಿನಲ್ಲಿ ೧೫ ಸಾವಿರ ಹೆಕ್ಟೇರ್ ತೋಟಗಾರಿಕೆ ಕ್ಷೇತ್ರವಿದೆ. ಕಳೆದ ವರ್ಷ ಶೇ. ೭೫ರಷ್ಟು ಬೆಳೆ ವಿಮೆ ತುಂಬಲಾಗಿತ್ತು. ಆದರೆ ಪ್ರಸ್ತುತ ವರ್ಷ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ರೈತರು ಬೆಳೆವಿಮೆ ತುಂಬುವ ಅವಕಾಶದಿಂದೇ ವಂಚಿತರಾಗುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ರೈತರು ತಮ್ಮ ಜಮೀನಿನಲ್ಲಿನ ತೋಟಗಾರಿಕೆ ಬೆಳೆಗಳ ವಿಮೆ ತುಂಬಲು ನೇರ ಅವಕಾಶವಿತ್ತು. ಆದರೆ ಈ ಬಾರಿ ಕಳೆದ ೩ ವರ್ಷ ಇದೇ ಬೆಳೆ ಇದೆ ಎಂದು ಬೆಳೆ ದರ್ಶನದಲ್ಲಿ ನಮೂದಿಸಿದರೆ ಮಾತ್ರ ಈ ಬಾರಿ ಬೆಳೆ ವಿಮೆ ತುಂಬಲು ಅವಕಾಶವಿದೆ ಎನ್ನಲಾಗುತ್ತಿದೆ. ಹತ್ತಾರು ವರ್ಷಗಳಿಂದ ಅದೇ ಜಮೀನಿನಲ್ಲಿ ಅದೇ ಬೆಳೆಗೆ ವಿಮೆ ತುಂಬಿದ್ದರೂ ಈಗ ಬೆಳೆ ವಿಮೆ ತುಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.ಕುಟುಂಬಗಳು ಆಸ್ತಿ ಹಂಚಿಕೆ ಮಾಡಿಕೊಂಡು ಖಾತೆ ಬದಲಾವಣೆಯಾಗಿದ್ದರೆ, ಹೊಸ ಜಮೀನ ಖರೀದಿಯಾಗಿದ್ದರೆ, ಒಟ್ಟು ಕುಟುಂಬ ಇದ್ದರೆ, ಬೆಳೆ ಸರ್ವೆ ದೋಷವಾದರೆ ಈ ಬಾರಿ ಬೆಳೆವಿಮೆ ತುಂಬಲು ಅವಕಾಶವಾಗುತ್ತಿಲ್ಲ. ದಿಢೀರ್ ಬಂದ ಈ ಆದೇಶದಿಂದ ರೈತರಿಗೆ ಬೆಳೆ ವಿಮೆ ತುಂಬಲು ಸಮಸ್ಯೆಯಾಗಿದೆ.
ಇಡೀ ರಾಜ್ಯ ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿಯೂ ಅತಿ ಹೆಚ್ಚು ಬೆಳೆವಿಮೆ ಕಂತು ತುಂಬುವ, ಪರಿಹಾರ ಪಡೆಯುತ್ತಿರುವ ಹಾನಗಲ್ಲ ತಾಲೂಕಿನಲ್ಲಿ ಈ ಬಾರಿ ರೈತರಿಗೆ ದಿಕ್ಕು ತೋಚದಂತಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷ ೧೯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಕ್ಷೇತ್ರಕ್ಕೆ ಬೆಳೆ ವಿಮೆ ಕಂತು ತುಂಬಲಾಗಿತ್ತು. ಇದೇ ಹಾನಗಲ್ಲ ತಾಲೂಕಿನಲ್ಲಿ ೧೬ ಸಾವಿರ ಹೆಕ್ಟೇರ್ ತೋಟಗಾರಿಕೆ ಕ್ಷೇತ್ರದ ಬೆಳೆ ವಿಮೆ ತುಂಬಲಾಗಿತ್ತು. ಆದರೆ ಪ್ರಸ್ತುತ ವರ್ಷ ಕಂತು ತುಂಬುವ ಕೊನೆಯ ಘಳಿಗೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ೮೩೯೬ ಹೆಕ್ಟೇರ್‌ನಲ್ಲಿ ಮಾತ್ರ ಬೆಳೆ ವಿಮೆ ತುಂಬಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಕೇವಲ ಅರ್ಧಕ್ಕಿಂತ ಕಡಿಮೆ. ಅಂದರೆ ೬೮೬೨ ಹೆಕ್ಟೇರ್‌ನಲ್ಲಿ ಮಾತ್ರ ತೋಟಗಾರಿಕೆ ಕ್ಷೇತ್ರದ ಬೆಳೆ ವಿಮೆ ಕಂತು ತುಂಬಲು ಸಾಧ್ಯವಾಗಿದೆ.ಬೆಳೆ ದರ್ಶನ ಆ್ಯಪ್ ಮೂಲಕ ಮಾಡುವ ಬೆಳೆ ನಮೂದಿನಲ್ಲಿಯೂ ಲೋಪ-ದೋಷಗಳಾಗಿವೆ. ಬಹಳಷ್ಟು ರೈತರು ಈ ಆ್ಯಪ್ ಮೂಲಕ ಬೆಳೆ ನಮೂದು ಮಾಡಲು ಸಾಧ್ಯವಾಗಿಲ್ಲ. ಯಾವುದೇ ರೀತಿ ಮುಂದಾಲೋಚನೆ ಇಲ್ಲದೆ ದಿಢೀರ್ ಇಂತಹ ನಿಯಮಗಳನ್ನು ಬೆಳೆ ವಿಮೆ ಕಂತು ತುಂಬಲು ಮಾಡಿರುವುದರಿಂದ ಹಾನಗಲ್ಲ ತಾಲೂಕಿನ ಅರ್ಧಕ್ಕೂ ಅಧಿಕ ರೈತರು ಬೆಳೆ ವಿಮೆ ಕಂತು ತುಂಬಲು ಸಾಧ್ಯವಾಗಿಲ್ಲ ಎಂಬುದೇ ಆತಂಕದ ಸಂಗತಿ.
ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಶಾಸಕರು ಹಾಗೂ ಸಂಸದರಿಗೆ ಮೊರೆ ಹೋಗಿದ್ದಾರೆ. ಬೆಳೆ ವಿಮೆ ಕಂತು ತುಂಬುವ ಅವಧಿ ವಿಸ್ತರಿಸಿ, ಹಿಂದಿನಂತೆ ಬೆಳೆ ವಿಮೆ ತುಂಬಲು ಅವಕಾಶವಾಗಬೇಕು ಎಂದು ಒತ್ತಾಯಿಸಿದ್ದಾರೆ. ತೋಟಗಾರಿಕೆ ಇಲಾಖೆಯಲ್ಲಿ ರೈತರು ತಮ್ಮ ಸಮಸ್ಯೆಗಳ ಕುರಿತು ಪರಿಹಾರಕ್ಕೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನೇ ಹೇಳಿ ಸುಮ್ಮನಾಗಿದ್ದಾರೆ.ಬೆಳೆ ವಿಮೆ ತುಂಬಲು ಇಲಾಖೆ ಹೊಸ ನಿಯಮ ರೂಪಿಸಿದೆ. ಆದರೆ ರೈತರು ಹಿಂದಿನಂತೆ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಪರಿಹಾರ ಮಾಡಬೇಕು. ರೈತರಿಗೆ ತಿಳಿವಳಿಕೆ ಹೇಳಲಾಗುತ್ತಿದೆ. ಆದರೆ ರೈತರು ದಿಢೀರ್ ತಂದ ಈ ನಿಯಮ ಅತ್ಯಂತ ಅನನುಕೂಲಕರ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಹೇಳಿದರು.