ಸಾರಾಂಶ
ಜಾನಪದ ಕಲೆ ನಶಿಸಿ ಹೋಗುತ್ತಿದೆ. ಹೊಸ ಕಾಲಕ್ಕೆ ಜಾನಪದ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಆಧುನಿಕ ಶೈಲಿಗೆ ಹೊಂದಿಕೊಂಡಿರುವ ಕಾಲೇಜಿನ ವಿದ್ಯಾರ್ಥಿಗಳೂ ಕೂಡ ಮೂಲ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ಇಂತಹ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉನ್ನತ ಸ್ಥಾನಕ್ಕೇರಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಗತ್ತಿನ ಕಲಾ ಪರಂಪರೆಗೆ ಜಾನಪದವೇ ಮೂಲ ಬೇರು. ಗ್ರಾಮೀಣ ಸೊಗಡಿನ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪ್ರಾಂಶುಪಾಲೆ ವೈ.ಎನ್.ನೇತ್ರಾವತಿ ಹೇಳಿದರು.ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಸೊಗಡಿನ ಜನರ ಬಾಯಿಂದ ಬಾಯಿಗೆ ಸುಲಭವಾಗಿ ತಲುಪಬಹುದಾದ ವಿಶೇಷ ಶಕ್ತಿಯುಳ್ಳ ಜಾನಪದ ಕಲೆಯನ್ನು ಶಾಶ್ವತವಾಗಿ ಉಳಿಸಬೇಕಿದೆ ಎಂದರು.
ಜಾನಪದ ಕಲೆ ನಶಿಸಿ ಹೋಗುತ್ತಿದೆ. ಹೊಸ ಕಾಲಕ್ಕೆ ಜಾನಪದ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಆಧುನಿಕ ಶೈಲಿಗೆ ಹೊಂದಿಕೊಂಡಿರುವ ಕಾಲೇಜಿನ ವಿದ್ಯಾರ್ಥಿಗಳೂ ಕೂಡ ಮೂಲ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ ಎಂದರು.ಇಂತಹ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉನ್ನತ ಸ್ಥಾನಕ್ಕೇರಬೇಕು ಎಂದರು.
ಜಾನಪದ ಉತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ರಾಗಿ, ಭತ್ತ ಸೇರಿದಂತೆ ವಿವಿಧ ಧಾನ್ಯಗಳ ರಾಶಿ ಮಾಡಿ, ಉಳುವ ನೇಗಿಲು, ನೊಗ ಮತ್ತು ಕೃಷಿ ಪರಿಕರಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಕಾಲೇಜಿನ ಹೆಣ್ಣು ಮಕ್ಕಳು ತಂಬಿಟ್ಟಿನ ಆರತಿಗೆ ಹೂವು ಮತ್ತು ಅಡಿಕೆ ಹೊಂಬಾಳೆಯಿಂದ ಸಿಂಗರಿಸಿ ಉತ್ಸವಕ್ಕೆ ಮೆರಗು ನೀಡಿದರು. ಕಾಲೇಜಿನ ಮಹಿಳಾ ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ರಾಗಿ ಬೀಸಿ, ಭತ್ತ ಕುಟ್ಟುವ ಮೂಲಕ ಪೂರ್ವಿಕರ ಪರಂಪರೆಯನ್ನು ನೆನಪಿಸಿದರು.ಉತ್ಸವದ ಪ್ರಯುಕ್ತ ರೇಷ್ಮೆ ಪಂಚೆ, ಶರ್ಟ್ ಶಲ್ಯ ಧರಿಸಿ ಬಂದಿದ್ದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ದೇವಲಾಪುರ ಹ್ಯಾಂಡ್‌ಪೋಸ್ಟ್‌ನಿಂದ ಕಾಲೇಜುವರೆಗೆ ತಮಟೆ ಮೇಳ ಹಾಗೂ ಪೂಜಾ ಕುಣಿತದೊಂದಿಗೆ ಎತ್ತಿನಗಾಡಿ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು. ತಮಟೆಯ ಸದ್ದಿಗೆ ವಿದ್ಯಾರ್ಥಿಗಳ ಜೊತೆಗೂಡಿ ಎಲ್ಲಾ ಪ್ರಾಧ್ಯಾಪಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ನಂತರ ಜಾನಪದ ಶೈಲಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಕಾಲೇಜಿನ ಸಹಾಯಕ ಪ್ರಧ್ಯಾಪಕರಾದ ವಿ.ಎನ್.ಶರ್ಮಿಳಾ, ಬಿ.ಎಚ್.ಹನುಮಂತಪ್ಪ, ಡಾ.ಕೋಮಲ, ಗಂಗು, ಮಣಿಕಂಠ, ಬಿ.ಟಿ.ಶ್ರೀನಿವಾಸ್, ಅರವಿಂದಮಿತ್ರ, ಡಾ.ಪ್ರಕಾಶ್, ಯತಿರಾಜ್, ಮಂಜುನಾಥ್, ಅತಿಥಿ ಉಪನ್ಯಾಸಕಿ ನೀಲಾಮೂರ್ತಿ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಸಿಬ್ಬಂದಿ ಇದ್ದರು.