ಪ್ರವಾಸೋದ್ಯಮದ ಮೇಲೆ ಬಿದ್ದ ಅರಣ್ಯ ಇಲಾಖೆಯ ಕರಿ ನೆರಳು : ಅಸ್ಪಷ್ಟವಾದ ನಿಯಮಗಳು ಕಾರಣ

| N/A | Published : Mar 27 2025, 01:07 AM IST / Updated: Mar 27 2025, 01:20 PM IST

forest

ಸಾರಾಂಶ

ಚಿಕ್ಕಮಗಳೂರು, ತಮ್ಮ ಸ್ವಂತ ಹಿಡುವಳಿ ಜಮೀನಿನಲ್ಲಿ ಹೋಂ ಸ್ಟೇ, ರೇಸಾರ್ಟ್ ಮಾಡಿಕೊಂಡಿರುವ ಮಾಲೀಕರು ಅರಣ್ಯ ಇಲಾಖೆ ಕಪಿ ಮುಷ್ಟಿಯಲ್ಲಿ ಸಿಲುಕಿದ್ದಾರೆ. ಈ ಎಡವಟ್ಟಿಗೆ ಕಾರಣವಾಗಿರುವುದು ಅಸ್ಪಷ್ಟವಾದ ನಿಯಮಗಳು.

 ಆರ್. ತಾರಾನಾಥ್ ಅಟೋಕರ್

 ಚಿಕ್ಕಮಗಳೂರು ತಮ್ಮ ಸ್ವಂತ ಹಿಡುವಳಿ ಜಮೀನಿನಲ್ಲಿ ಹೋಂ ಸ್ಟೇ, ರೇಸಾರ್ಟ್ ಮಾಡಿಕೊಂಡಿರುವ ಮಾಲೀಕರು ಅರಣ್ಯ ಇಲಾಖೆ ಕಪಿ ಮುಷ್ಟಿಯಲ್ಲಿ ಸಿಲುಕಿದ್ದಾರೆ. ಈ ಎಡವಟ್ಟಿಗೆ ಕಾರಣವಾಗಿರುವುದು ಅಸ್ಪಷ್ಟವಾದ ನಿಯಮಗಳು.ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹೋಂ ಸ್ಟೇ ಹಾಗೂ ರೇಸಾರ್ಟ್‌ಗಳ ಪರವಾನಗಿ ನವೀಕರಣ ಮಾಡ ಬೇಕಾದರೆ ಅರಣ್ಯ ಇಲಾಖೆಯಿಂದ ಎನ್ಓಸಿ ಪಡೆಯಬೇಕೆಂಬ ನಿಯಮ ಉದ್ಯಮಕ್ಕೆ ಕೊಡಲಿ ಪೆಟ್ಟು ನೀಡಿದೆ. ಎನ್‌ಓಸಿ ಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಅರಣ್ಯ ಇಲಾಖೆಗೆ ಹೋಗಿರುವ ಫೈಲ್‌ಗಳು ಧೂಳು ಹಿಡಿಯುತ್ತಿವೆ. ಅರಣ್ಯ ಇಲಾಖೆ ಒಪ್ಪಿಗೆ ನೀಡದೆ ಹೋದರೆ ನೂರಾರು ಹೋಂ ಸ್ಟೇ ಹಾಗೂ ರೇಸಾರ್ಟ್‌ಗಳಿಗೆ ಅಕ್ರಮದ ಮುದ್ರೆ ಬೀಳಲಿದೆ.

ಜೀವನಾಡಿ: ಪ್ರತಿ ವರ್ಷ ಒಂದಲ್ಲಾ ಒಂದು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರತಿಕೂಲ ಹವಾಮಾನ ಎದುರಾಗಿ ಕಾಫಿ ಬೆಳೆ ಗಾರರು ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಬೆಳೆಗಾರರಿಗೆ ಜೀವನಾಡಿ ಆಗಿರೋದು ಹೋಂ ಸ್ಟೇ. ಇಲ್ಲಿ ಸುಮಾರು 800ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಇವುಗಳು ಪ್ರವಾಸಿಗರ ಮೇಲೆ ಅವಲಂಬಿತವಾಗಿವೆ. ಜಿಲ್ಲೆಗೆ ಒಂದು ವರ್ಷದಲ್ಲಿ ಸರಾಸರಿ 70 ರಿಂದ 80 ಲಕ್ಷ ಮಂದಿ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಅವರಿಗೆ ಆತಿಥ್ಯ ನೀಡುತ್ತಿವೆ. ಅಂದರೆ, ಜಿಲ್ಲೆಯ ಪ್ರವಾಸೋದ್ಯಮದ ಆಧಾರ ಸ್ತಂಭ ಹೋಂ ಸ್ಟೇ ಹಾಗೂ ರೇಸಾರ್ಟ್‌ಗಳು.

ಜಿಲ್ಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರವಾಸಿ ಕೇಂದ್ರಗಳಿವೆ. ಇಲ್ಲಿಗೆ ಲಕ್ಷಾಂತರ ಮಂದಿ ಬಂದು ಹೋಗುತ್ತಿದ್ದಾರೆ. ಹೋಂ ಸ್ಟೇ ಹಾಗೂ ರೇಸಾರ್ಟ್‌ಗಳು ಪ್ರವಾಸಿಗರಿಗೆ ನೀಡುತ್ತಿರುವ ಸವಲತ್ತಿಗೆ ಹೋಲಿಕೆ ಮಾಡಿದರೆ ಸರ್ಕಾರದ ಕೊಡುಗೆ ಶೂನ್ಯ. ವಾಸ್ತವಿಕತೆ ಹೀಗಿದ್ದರೂ ಗದಾ ಪ್ರಹಾರ ಮಾಡುವುದು ಮಾತ್ರ ನಿಲ್ಲಿಸಿಲ್ಲ. ಸರ್ಕಾರದ ಮಟ್ಟದಲ್ಲಿ ಯಾವುದಾದರೂ ಚರ್ಚೆ ಆಗಿದ್ದರೆ, ಅದು ಆದೇಶವಾಗಿ ಜಾರಿಗೆ ಬರುವ ಮೊದಲೇ ಕಾಫಿ ನಾಡಿನಲ್ಲಿ ಪ್ರಯೋಗ ಮಾಡಲಾಗುತ್ತಿದೆ.

ಎಮ್ಮೆಗೆ ಬರೆ:

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ. ಈ ಗಾಧೆ ಮಾತು ಕಾಫಿ ನಾಡಿನಲ್ಲಿ ಆಗಾಗ ಪ್ರಯೋಗ ಆಗುತ್ತಲೆ ಇರುತ್ತದೆ. ಕಳೆದ ವರ್ಷ ಕೇರಳದ ವಯಾ ನಾಡಿನಲ್ಲಿ ಧರೆ ಕುಸಿತದಿಂದ ಇಡೀ ಊರೇ ಜಲ ಸಮಾಧಿ ಆಯಿತು. ಆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮಲೆನಾಡಿನಲ್ಲೂ ಎಚ್ಚರ ವಹಿಸಬೇಕೆಂಬ ತೀರ್ಮಾನಕ್ಕೆ ಬಂದು ಕೇಂದ್ರದ ಸರ್ವೆಕ್ಷಣಾ ಇಲಾಖೆ ತಂಡ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗೆ ಭೇಟಿ ನೀಡಿತ್ತು. ಗಿರಿ ಪ್ರದೇಶಗಳಿಗೆ ವಾಹನಗಳ ದಟ್ಟಣೆ ತಡೆಯಲು ಜಿಲ್ಲಾಡಳಿತ ನಿರ್ಬಂಧದ ಆದೇಶ ಮಾಡಿತ್ತು. ಇದು, ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖ ಮಾಡಿತು.

ಏರ್‌ ವೇ ಗುಮ್ಮಸ್ವಂತ ಹಿಡುವಳಿ ಜಮೀನಿನಲ್ಲಿ ತಾವು ವಾಸವಾಗಿರುವ ಮನೆಯಲ್ಲಿ ಹೋಂ ಸ್ಟೇ ನಡೆಸಬೇಕಾದರೆ ಅಥವಾ ರೇಸಾರ್ಟ್‌ ನಿರ್ಮಾಣ ಮಾಡಬೇಕಾದರೆ ಆ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕು. ಕಂದಾಯ ದಾಖಲೆ, ರಸ್ತೆ ಸಂಪರ್ಕ ಇದ್ದರೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು, ಯೋಜನಾ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡುತ್ತವೆ. ಇಷ್ಟು ವರ್ಷ ಮುಂದುವರಿದು ಕೊಂಡು ಬಂದಿರುವ ನಿಯಮವೂ ಸಹ ಇದೆ.

ಆದರೆ, ಇದೀಗ ನಿಯಮದಲ್ಲಿ ಬದಲಾವಣೆಯಾಗಿದೆ. ನಿಮ್ಮ ಸ್ವಂತ ಜಾಗದಲ್ಲಿ ಹೋಂ ಸ್ಟೇ ನಿರ್ಮಾಣ ಮಾಡಿಕೊಳ್ಳ ಬೇಕಾದರೆ ಅರಣ್ಯ ಇಲಾಖೆಯೂ ಕೂಡ ಒಪ್ಪಿಗೆ ನೀಡಬೇಕು. ಆದರೆ, ಭಯಾರಣ್ಯದಿಂದ ಹತ್ತು ಕಿಲೋ ಮೀಟರ್‌ (ಏರ್‌ ವೇ) ಒಳಗೆ ನಿಮ್ಮ ಸ್ವಂತ ಭೂಮಿ ಇದ್ದರೆ ಅರಣ್ಯ ಇಲಾಖೆ ಎನ್ಓಸಿ ಕೊಡುವುದಿಲ್ಲ. ಇದು, ಈಗಾಗಲೇ ಜನರ ಮೇಲೆ ದುಷ್ಪರಿ ಣಾಮ ಬೀರಿದೆ. 

ಆನ್‌ ಲೈನ್‌ನಲ್ಲಿ ಸಲ್ಲಿಸಿರುವ ಹಲವು ಅರ್ಜಿಗಳು ವಜಾ ಆಗಿವೆ.

ಸರ್ಕಾರದ ಇದೇ ಸುತ್ತೋಲೆಯನ್ನು ಅರಣ್ಯ ಇಲಾಖೆ ನವೀಕರಣದ ಸಂದರ್ಭದಲ್ಲೂ ಪಾಲನೆ ಮಾಡುತ್ತಿದೆ. ಹಾಗಾಗಿ ಕಳೆದ ಜನವರಿಯಿಂದ ಈವರೆಗೆ ಸುಮಾರು 150ಕ್ಕೂ ಹೆಚ್ಚು ಅರ್ಜಿಗಳು ಅರಣ್ಯ ಇಲಾಖೆಯಲ್ಲಿ ವಿಲೇಯಾಗದೆ ಧೂಳು ಕುಡಿಯು ತ್ತಿವೆ. ಇವುಗಳಿಗೆ ಅನಧಿಕೃತ ಎಂಬ ಮುದ್ರೆ ಬೀಳಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಅನಧಿಕೃತ ಹೋಂ ಸ್ಟೇ ಮುಚ್ಚಬೇಕೆಂಬ ಆದೇಶ ಬಂದರೆ ಮಾಲೀಕರು ತಲೆ ಬಾಗಲೇ ಬೇಕು.

ಜಿಲ್ಲೆಯಲ್ಲಿ 32 ರೆಸಾರ್ಟ್‌, 607 ನೋಂದಾಯಿತ ಹೋಂ ಸ್ಟೇಗಳ ಪೈಕಿ 325 ಹೋಂ ಸ್ಟೇಗಳು ರಿನಿವಲ್‌ ಆಗಿವೆ. ಸುಮಾರು 150 ಅರ್ಜಿಗಳನ್ನು ಎನ್‌ಓಸಿಗಾಗಿ ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ. 85 ಅರ್ಜಿಗಳು ಎನ್ಓಸಿಗಾಗಿ ಪೊಲೀಸ್‌ ಇಲಾಖೆಗೆ ಕಳುಹಿಸಲಾಗಿದೆ. ಅವುಗಳು ಬಂದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.-

 ಲೋಹಿತ್‌ 

ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ