ಸಾರಾಂಶ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ಲಭಿಸಿದ ಪ್ರಕರಣವು ಜನ ಸಮುದಾಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಜೈಲುಗಳಲ್ಲಿ ಹಣವಂತರದ್ದೇ ಆಟ, ಕೈದಿಗಳೇ ರೂಲರ್‌ಗಳು, ರೌಡಿಗಳದ್ದೇ ದರ್ಬಾರ್ ಎಂಬ ಟೀಕೆಗಳು ವ್ಯಕ್ತವಾಗಿವೆ. ಯಾವತ್ತಿಗೂ ಕತ್ತಲ ಕೋಣೆಗಳಲ್ಲಿ ಹೊಸ ಬೆಳಕು ಮೂಡುವುದೇ ಇಲ್ಲ ಎನ್ನುವಂತಹ ಅಧೋಗತಿಗೆ ಜೈಲುಗಳ ಪರಿಸ್ಥಿತಿ ತಲುಪಿದೆ ಎನ್ನುವ ಹೊತ್ತಿನಲ್ಲಿ ಜೈಲುಗಳ ಕರಾಳತೆ, ಅವುಗಳ ಬದಲಾವಣೆ ಬಗ್ಗೆ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ನಿವೃತ್ತ ಡಿಜಿಪಿ ಹಾಗೂ ಲೇಖಕರೂ ಆಗಿರುವ ಡಾ.ಡಿ.ವಿ.ಗುರುಪ್ರಸಾದ್ ಅವರು ‘ಮುಖಾಮುಖಿ’ಯಾಗಿದ್ದು ಹೀಗೆ...
*ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನಲ್ಲಿ ಮತ್ತೆ ಅವ್ಯವಹಾರ ಬಯಲಾಗಿದೆ, ಏನು ಹೇಳುತ್ತೀರಿ?
- ಇದೇನೂ ಹೊಸದಲ್ಲ ಬಿಡಿ. ಅನಾದಿ ಕಾಲದಿಂದಲೂ ಪರಪ್ಪನ ಅಗ್ರಹಾರ ಮಾತ್ರವಲ್ಲ ದೇಶದ ಎಲ್ಲ ಜೈಲುಗಳ ಕಥೆ-ವ್ಯಥೆಯೂ ಇದೆ. ಮೊದಲೆಲ್ಲ ವಾಟ್ಸ್ ಆಪ್, ಮೀಡಿಯಾ ಪ್ರಭಾವವಿರಲಿಲ್ಲ. ಹಾಗಾಗಿ ಈಗಿನಷ್ಟು ದೊಡ್ಡಮಟ್ಟದಲ್ಲಿ ಸಾರ್ವಜನಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿರಲಿಲ್ಲ. ಜೈಲಿನಲ್ಲಿ ಆಗಲೂ ಕಾಸಿದ್ದವನೇ ಬಾಸು, ಈಗಲೂ ಕಾಸಿದ್ದವನೇ ಬಾಸು. ಅಲ್ಲಿ ದುಡ್ಡಿದ್ದರೆ ಸಕಲ ಸೌಲಭ್ಯವೂ ಸಿಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.
*ಕಾಸು ಇದ್ದವನೇ ಬಾಸು ಅನ್ನೋದಾದರೆ ಜೈಲಿಗೆ ಅಧಿಕಾರಿಗಳೇಕೆ ಬೇಕು?
- ಪೊಲೀಸಿನವರ ಆದಾಯಕ್ಕೆ ಬೇರೆ ಬೇರೆ ಮೂಲಗಳಿವೆ. ಆದರೆ ಕಾರಾಗೃಹದ ಅಧಿಕಾರಿಗಳಿಗೆ ಕೈದಿಗಳೇ ಅವರ ವೇತನೇತರ ಆದಾಯದ ಮೂಲವಾಗಿದೆ. ಹಣದಾಸೆಗೆ ಬಿದ್ದು ಕೆಲ ಅಧಿಕಾರಿಗಳು ವ್ಯವಸ್ಥೆ ಹಾಳು ಮಾಡಿದ್ದಾರೆ. ಎಲ್ಲ ಅಧಿಕಾರಿಗಳು ಅಪ್ರಾಮಾಣಿಕರಲ್ಲ. ಆದರೆ ಪ್ರಾಮಾಣಿಕ ಅಧಿಕಾರಿಗಳಿಗೆ ಅಧಿಕಾರ ಸಿಗುವುದಿಲ್ಲ, ಅದೇ ಸಮಸ್ಯೆ.
*ಜೈಲುಗಳಲ್ಲಿ ಪರ್ಯಾಯ ಸರ್ಕಾರದಂತೆ ಕೈದಿಗಳದ್ದೇ ದರ್ಬಾರ್ ನಡೆಯುತ್ತದೆಯಂತೆ?
- ಸತ್ಯವಾದ ಮಾತು. ಜೈಲಿನಲ್ಲಿ ಕೆಲ ಕೈದಿಗಳದ್ದೇ ಪರ್ಯಾಯ ಸರ್ಕಾರವಿದೆ. ಅಲ್ಲಿ ಅವರದ್ದೇ ಮಾತು, ಅವರದ್ದೇ ಆದೇಶ. 1982ರಲ್ಲಿ ದೇಶದ ಅತಿದೊಡ್ಡ ಜೈಲು ತಿಹಾರ್‌ನಲ್ಲಿ ಕುಖ್ಯಾತ ರೇಪಿಸ್ಟ್ ಚಾರ್ಲ್ಸ್ ಶೋಭರಾಜ್‌ನದ್ದು ದರ್ಬಾರ್ ನಡೆದಿತ್ತು. ಜೈಲಿನಲ್ಲಿ ಆತನ ಅಕ್ರಮಗಳು ಬಯಲಾಗಿ ಇಂದಿಗೆ 40 ವರ್ಷಗಳು ಕಳೆದಿವೆ. ಈಗಲೂ ಅದೇ ವ್ಯವಸ್ಥೆ ಅನಿರ್ಬಂಧಿತವಾಗಿ ಮುಂದುವರೆದಿದೆ. ಅಂದು ತಿಹಾರ್ ಜೈಲಿನ ಎಡಿಜಿಪಿಯೇ ಅಮಾನತುಗೊಂಡಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ವಿಚಾರಣಾ ವರದಿಯಲ್ಲಿಯೇ ಜೈಲಿನಲ್ಲಿ ಹಣ ಕೊಟ್ಟರೆ ಹೆಣ್ಣಿನ ಸೇವೆಯೂ ಸಿಗುತ್ತದೆ ಎಂದು ಉಲ್ಲೇಖಿಸಿದ್ದರು.
*ಹಾಗಾದರೆ ನಟ ದರ್ಶನ್ ಕೇಸ್ ಹೊಸದೂ ಅಲ್ಲ, ಕೊನೆಯೂ ಅಲ್ಲ?
- ದರ್ಶನ್ ಕೇಸ್ ಬಯಲಾಗಿದ್ದರಿಂದ ರಾತ್ರೋರಾತ್ರಿ ಜೈಲುಗಳಲ್ಲಿ ಬಿಗಿ ಆಡಳಿತ ಬಂದು ಬಿಡುತ್ತದೆ, ಅಕ್ರಮ ಚಟುವಟಿಕೆಗಳೆಲ್ಲಾ ಬಂದ್ ಆಗುತ್ತವೆ ಎಂಬುದು ಭ್ರಮೆ ಅಷ್ಟೇ. ಪ್ರಕರಣದ ಕಾವಿರುವವರೆಗೆ ಜೈಲು ಶುದ್ಧವಾಗಿರುತ್ತವೆ. ದಿನ ಕಳೆದಂತೆ ದರ್ಶನ್ ಕೇಸು ಹಳೆಯದಾಗುತ್ತದೆ. ಸಮಾಧಾನವೆಂದರೆ ದೇಶದಲ್ಲಿ ನಮ್ಮ ರಾಜ್ಯದ ಜೈಲುಗಳೇ ಪರವಾಗಿಲ್ಲ.
*ದೇಶದ ಎಲ್ಲ ಜೈಲುಗಳಿಗಿಂತ ಪರಪ್ಪನ ಅಗ್ರಹಾರ ಬೆಸ್ಟ್ ಅಂತೀರಾ?
- ಹೌದು..ದೇಶದ ಇತರೆ ರಾಜ್ಯಗಳ ಜೈಲುಗಳಿಗೆ ಹೋಲಿಸಿದರೆ ಪರಪ್ಪನ ಅಗ್ರಹಾರ ನೂರಕ್ಕೆ ನೂರು ಉತ್ತಮವಾಗಿದೆ. ಕೆಲ ತಿಂಗಳ ಹಿಂದೆ ನಾನು ಗಲ್ಲು ಶಿಕ್ಷೆಗೆ ಗುರಿಯಾದ ಕೈದಿಗಳ ಕುರಿತು ಪುಸ್ತಕ ರಚನೆ ಸಲುವಾಗಿ ತಿಹಾರ್, ಕೋಲ್ಕತಾ, ಪುಣೆ, ಮುಂಬೈ ಹಾಗೂ ಬಿಹಾರ ಸೇರಿದಂತೆ 20 ಜೈಲುಗಳಿಗೆ ಭೇಟಿ ನೀಡಿ ಅಲ್ಲಿನ ಕೈದಿಗಳ ಜತೆ ಮಾತುಕತೆ ನಡೆಸಿದ್ದೆ. ಆಗ ಅಲ್ಲಿನ ಪರಿಸ್ಥಿತಿ ಅವಲೋಕಿಸಿದಾಗ ಪರಪ್ಪನ ಅಗ್ರಹಾರನೇ ಪರವಾಗಿಲ್ಲ ಅನಿಸಿತು. ಬ್ರಿಟಿಷರ ಕಾಲದ ಕೋಲ್ಕತಾ ಜೈಲಿನಲ್ಲಿ ನನ್ನನ್ನು ಭೇಟಿಯಾಗಲು ಕೈದಿಯೊಬ್ಬ ಮೊಬೈಲ್ ಹಿಡಿದುಕೊಂಡೇ ಬಂದಿದ್ದ. ಮುಂಬೈನಲ್ಲಿ ಮಹಿಳಾ ಕಾರಾಗೃಹದಲ್ಲಿ ಡ್ರಗ್ಸ್ ಮಾಫಿಯಾದ ಮಹಿಳಾ ಪಾತಕಿಯೇ ರೂಲರ್ ಆಗಿದ್ದಾಳೆ. ಬಿಹಾರ ಜೈಲುಗಳ ಅವ್ಯವಸ್ಥೆ ಬಗ್ಗೆ ಮಾತಿನಲ್ಲಿ ಹೇಳಲಾಗದು.
*ಹಾಗಿದ್ದರೆ ಜೈಲುಗಳ ಸಮಸ್ಯೆಗೆ ಪರಿಹಾರ ಏನು?- ಕೈದಿಗಳು ಮಾತ್ರವಲ್ಲ, ಅಧಿಕಾರಿಗಳೂ ಬದಲಾಗಬೇಕು. ಇದಕ್ಕೆ ಯಾವುದೇ ಹುದ್ದೆಯಲ್ಲಿ ಸುದೀರ್ಘ ಅವಧಿಗೆ ಒಬ್ಬನೇ ಇರಬಾರದು. ಅಧಿಕಾರ ಹಂಚಿಕೆಯಲ್ಲಿ ರೊಟೇಷನ್ ಸಿಸ್ಟಂ ತರಬೇಕು. ಇದರಿಂದ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಆಗ ಪೈಪೋಟಿ ಇರುವುದಿಲ್ಲ. ಆದರೆ ಬಹುತೇಕ ಸಲ ಸೇವಾ ಹಿರಿತನ ಇದ್ದರೂ ಜಾತಿ ಬೆಂಬಲವಿಲ್ಲದೆ ಒಳ್ಳೆಯ ಅಧಿಕಾರಿಗಳಿಗೆ ಹುದ್ದೆ ಸಿಗುವುದಿಲ್ಲ. ಹಾಗಾಗಿ ಮೊದಲು ವರ್ಗಾವಣೆ ನೀತಿ ಸರಿಯಾಗಬೇಕು. ಪ್ರಾಮಾಣಿಕರಿಗೆ ನ್ಯಾಯ ಸಿಗಬೇಕು.
*ಜೈಲಿನಲ್ಲಿ ಸಿಗರೇಟ್ ಮಾರಾಟ ನಿಷೇಧ ಇದೆಯೇ?
- ನನಗಿರುವ ಮಾಹಿತಿ ಪ್ರಕಾರ ಜೈಲುಗಳಲ್ಲಿ ಸಿಗರೇಟ್ ಸೇವನೆಗೆ ಅವಕಾಶವಿದೆ. ಬಹುಪಾಲು ಜೈಲುಗಳ ಕ್ಯಾಂಟೀನ್‌ಗಳಲ್ಲೇ ಬಿಡಿ-ಸಿಗರೇಟ್ ಮಾರುತ್ತಾರೆ. ಸಿಗರೇಟ್ ನೀಡದೆ ಹೋದರೆ ಜೈಲಿನಲ್ಲಿ ವ್ಯಸನಿಗಳನ್ನು ನಿಯಂತ್ರಿಸೋದು ಕಷ್ಟವಾಗುತ್ತದೆ. ಇನ್ನು ಕೆಲವರು ವೈದ್ಯರಿಗೆ ಹಣ ಕೊಟ್ಟು ನಿಕೋಟಿನ್ ಚಾಕೊಲೇಟ್ ಪಡೆಯುತ್ತಾರೆ. ಇದಕ್ಕಿಂತ ಮಾರಾಟ ಸರಿ ಅಲ್ವಾ?
*ಜೈಲು ಹಾಳಾಗಲು ಅಧಿಕಾರಿಗಳ ನಡುವಿನ ವೃತ್ತಿ ಸಂಘರ್ಷವೂ ಸಹ ಕಾರಣವಂತೆ?
- ನೋ ಡೌಟ್. ಒಳ್ಳೆಯ ಪ್ರಶ್ನೆ. ಜೈಲಿನ ಅಧಿಕಾರಿಗಳ ನಡುವೆ ಸಮನ್ವಯತೆ, ಸಹಬಾಳ್ವೆ ಹಾಗೂ ಸಹಕಾರ ಇಲ್ಲದೆ ಇರೋದು ಕೂಡ ಕೈದಿಗಳಿಗೆ ವರದಾನವಾಗಿದೆ. ಯಾರೇ ಮುಖ್ಯ ಅಧೀಕ್ಷಕನಾದರೂ ಆತನಿಗೆ ವಿರೋಧಿ ಗುಂಪು ಇದ್ದೇ ಇರುತ್ತದೆ. ಆಗ ಕೈದಿಗಳಲ್ಲಿ ಸಹ ಎರಡು ಗುಂಪುಗಳಾಗುತ್ತವೆ. ಅಧಿಕಾರಿಗಳ ಈ ಮೇಲಾಟದಿಂದಲೇ ಜೈಲಿನ ಅಕ್ರಮಗಳು ಹೊರ ಜಗತ್ತಿಗೆ ಕಾಣುವಂತಾಗೋದು.
*ಎಲ್ಲ ಅಧಿಕಾರಿಗಳು ಪರಪ್ಪನ ಅಗ್ರಹಾರನೇ ಬೇಕು ಅಂತಾರೆ ಏಕೆ?
- ಐಪಿಎಸ್ ಅಧಿಕಾರಿಗಳಿಗೆ ಹೇಗೆ ಒಮ್ಮೆಯಾದರೂ ಬೆಂಗಳೂರು ನಗರ ಕಮಿಷನರ್ ಆಗುವ ಬಯಕೆ ಇರುತ್ತದೆಯೋ ಹಾಗೆಯೇ ಪರಪ್ಪನ ಅಗ್ರಹಾರದ ಮುಖ್ಯಸ್ಥನ ಹುದ್ದೆಯ ಮೇಲೂ ಕಾರಾಗೃಹ ಅಧಿಕಾರಿಗಳಿಗೆ ಆಸೆ ಇರುತ್ತದೆ. ಪರಪ್ಪನ ಅಗ್ರಹಾರ ಬಿಟ್ಟರೆ ರಾಜ್ಯದಲ್ಲಿ ಇನ್ನುಳಿದ ಜೈಲುಗಳು ಸಾಧಾರಾಣ ಮಟ್ಟದಲ್ಲಿವೆ. ಪರಪ್ಪನ ಅಗ್ರಹಾರ ಜೈಲು ಕೆಲ ಅಧಿಕಾರಿಗಳ ಪಾಲಿಗೆ ಸಮೃದ್ಧ ಹಾಲುಣಿಸುವ ಕಾಮಧೇನು. ಹೀಗಾಗಿ ಈ ಹುದ್ದೆಗೆ ಪೈಪೋಟಿ, ಲಾಬಿ, ವಶೀಲಿ ಎಲ್ಲವೂ ಸಾಮಾನ್ಯ.
*ಕಾರಾಗೃಹ ಕೇಡರ್ ಮಾತ್ರವಲ್ಲ ಐಪಿಎಸ್ ಅಧಿಕಾರಿಗಳ ಮಧ್ಯೆಯೇ ಕಿತ್ತಾಟ ಇದೆಯಲ್ಲ?
- ಕಾರಾಗೃಹ ಇಲಾಖೆಗೆ ಪ್ರತ್ಯೇಕ ವೃಂದವಿದೆ. ನಾನು 1990ರಲ್ಲಿ ಸಹಾಯಕ ಜೈಲರ್‌ಗಳ ಹುದ್ದೆಗಳಿಗೆ ಮೊದಲ ಬಾರಿಗೆ ನೇಮಕ ಮಾಡಿದ್ದೆ. ಆದರೆ ಕಾರಾಗೃಹ ಇಲಾಖೆ ಮುಖ್ಯಸ್ಥ ಹುದ್ದೆ ಐಪಿಎಸ್ ಅಧಿಕಾರಿಗಳಿಗೆ ಮೀಸಲಾಗಿದೆ. ಕಾರಾಗೃಹ ವೃಂದದ ಅಧಿಕಾರಿಗಳು ಹೆಚ್ಚುವರಿ ಐಜಿಪಿ ಹುದ್ದೆಗೇರಿ ನಿವೃತ್ತಿಯಾಗುತ್ತಾರೆ. ಕಾರಾಗೃಹದ ಅಧಿಕಾರಿಗಳು ಹಾಗೂ ಐಪಿಎಸ್ ನಡುವೆ ತಾಳಮೇಳ ಚೆನ್ನಾಗಿದ್ದರೆ ಆಡಳಿತ ಸುಗಮವಾಗುತ್ತದೆ. ಒಬ್ಬರು ನೀರಿಗೆ, ಮತ್ತೊಬ್ಬರು ಏರಿಗೆ ಎಳೆದಾಡಿದರೆ ಆಡಳಿತ ನಡೆಸೋದು ಕಷ್ಟ.
*ಬಂದೀಖಾನೆ ಮತ್ತು ಸುಧಾರಣೆ ಸೇವೆ ಇಲಾಖೆಯಲ್ಲಿ ನಾಯಕತ್ವದ ಕೊರತೆ ಇದೆಯೇ?
- ಕಾರಾಗೃಹ ಇಲಾಖೆ ಮುಖ್ಯಸ್ಥ ಹುದ್ದೆ ಯಾವ ಐಪಿಎಸ್ ಅಧಿಕಾರಿಗೂ ಬೇಡವಾದ ಹುದ್ದೆಯಾಗಿದೆ. ಬಹುತೇಕರು ಒಲ್ಲದ ಮನಸ್ಸಿನಿಂದಲೇ ಆ ಹುದ್ದೆ ಸ್ವೀಕರಿಸುತ್ತಾರೆ. ಇಂಥ ಅಧಿಕಾರಿಗಳಿಂದ ಇಲಾಖೆ ಸುಧಾರಣೆ ಕಾಣಲು ಸಾಧ್ಯವೇ ಹೇಳಿ. ಮುಖ್ಯಸ್ಥನಾದವನು ಸಮರ್ಥನಾಗಿರಬೇಕು. ಯಾವುದೇ ಹುದ್ದೆಯಾದರೂ ನ್ಯಾಯ ಸಲ್ಲಿಸುವ ಕರ್ವವ್ಯ ನಿಷ್ಠೆ ಇರಬೇಕು.
*ರಾಜಕಾರಣಿಗಳ ಮರ್ಜಿಯಿಲ್ಲದೆ ಆಡಳಿತ ಸಾಧ್ಯನೇ ಇಲ್ವಾ?
- ನನ್ನ ಅನುಭವದಲ್ಲಿ ಹೇಳುವುದಾದರೆ ಬಂದೀಖಾನೆ ಆಡಳಿತದಲ್ಲಿ ಯಾವ ರಾಜಕಾರಣಿಯೂ ಹಸ್ತಕ್ಷೇಪ ಮಾಡುವುದಿಲ್ಲ. ಕ್ರಿಮಿನಲ್‌ಗಳಿಗೆ ಯಾರು ಬೆಂಬಲಿಸುತ್ತಾರೆ ಹೇಳಿ. ಜೈಲುಗಳು ಹಾಳಾಗಿರೋದು ಹೆಚ್ಚಿನದ್ದಾಗಿ ಅಧಿಕಾರಿಗಳಿಂದ ಅಷ್ಟೇ. ಯಾರಾದರೂ ತೀರಾ ಹತ್ತಿರದವ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಬಂದರೆ ಆತನ ಕ್ಷೇಮದ ಬಗ್ಗೆ ರಾಜಕಾರಣಿ ವಿಚಾರಿಸಬಹುದು. ಆದರೆ ಬಂದೀಖಾನೆ ಆಡಳಿತದಲ್ಲಿ ನಿಜಕ್ಕೂ ರಾಜಕಾರಣಿಗಳು ಮೂಗು ತೂರಿಸುವುದಿಲ್ಲ.
*ಶಾಸಕರ ಮಿನಿಟ್ (ಶಿಫಾರಸು ಪತ್ರ) ಇಲ್ಲದೆ ವರ್ಗಾವಣೆ ಸಾಧ್ಯವೇ?
- ಅದು ನಿಜ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ನಿರ್ಧರಿಸುವ ಪಿಇಬಿ ಯೂಸ್ ಲೆಸ್. ನಮ್ಮ ರಾಜ್ಯವಲ್ಲ, ಇಡೀ ದೇಶದಲ್ಲಿ ಪೊಲೀಸ್ ವ್ಯವಸ್ಥೆ ಹಾಳಾಗಲು ಪ್ರಕಾಶ್ ಸಿಂಗ್ ಪ್ರಕರಣ ಕಾರಣವಾಯಿತು. ಸರ್ಕಾರ ಬದಲಾದಂತೆ ಅಧಿಕಾರಿಗಳ ನಡವಳಿಕೆ ಬದಲಾಗುತ್ತದೆ. ಆಡಳಿತಕ್ಕೆ ತಕ್ಕಂತೆ ಕೆಲ ಅಧಿಕಾರಿಗಳು ಕುಣಿಯುತ್ತಾರೆ. ಇದರಿಂದ ಕಾನೂನು ಹಾಗೂ ಕರ್ತವ್ಯ ನಿಷ್ಠೆ ತೋರುವವರ ಸಂಖ್ಯೆ ಕಡಿಮೆಯಾಗುತ್ತದೆ.
*ವರ್ಗಾವಣೆ ವ್ಯವಸ್ಥೆಗೆ ಪಿಇಬಿ ಉತ್ತಮ ಅಂತಾರೆ?
- ಅದಕ್ಕೇ ನಾನು ಹೇಳಿದ್ದು, ಪ್ರಕಾಶ್ ಸಿಂಗ್ ಪ್ರಕರಣದಿಂದ ಪಿಇಬಿ ರಚನೆಯಾಯಿತು. ಆದರೆ ಅದೂ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆಯೇ? ಜಾತಿ ಇಲ್ಲದೆ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳು ಸಿಗುವುದು ಸಾಧ್ಯವೇ ಇಲ್ಲ. ಈಗಂತೂ ಜಾತಿಯೇ ಪ್ರಧಾನವಾಗಿದೆ. ನಾನು ಹೇಳೋದು ಜಾತಿಯೇ ಮುಖ್ಯವಾದರೆ ಆ ಜಾತಿಯಲ್ಲಿಯೇ ಉತ್ತಮನಿಗೆ ಹುದ್ದೆ ಕೊಡಿ. ಆದರೆ ಈಗ ಅಪ್ರಾಮಾಣಿಕನೇ ಜಾತಿಯಲ್ಲೂ ಪಾಲು ಪಡೆಯುತ್ತಾನೆ.
*ಸುಧಾರಣೆಗೆ ದಾರಿಯೇ ಇಲ್ಲದಷ್ಟು ಜೈಲುಗಳು ಹದಗೆಟ್ಟಿವೆಯೇ?
- ಹಾಗೇನೂ ಇಲ್ಲ. ಸುಧಾರಣೆಗೆ ದೃಢವಾದ ನಿರ್ಧಾರ ತೆಗೆದುಕೊಳ್ಳುವ ನಿರ್ಭಿಡೆಯ ಅಧಿಕಾರಿಗಳ ಅಗತ್ಯವಿದೆ. ಮೊದಲು ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳನ್ನು ಪ್ರತ್ಯೇಕವಾಗಿಡಬೇಕು. ಹಾಗೆಯೇ ಆ ಕೈದಿಗಳಲ್ಲಿ ಅಪರಾಧ ಪ್ರಕರಣಗಳ ಸ್ವರೂಪದ ಆಧರಿಸಿ ವಿಭಜಿಸಬೇಕು. ಉದಾಹರಣೆಗೆ ಭಯೋತ್ಪಾದಕ ಕೃತ್ಯಗಳು, ಅತ್ಯಾಚಾರ, ಕೊಲೆ, ಸರಣಿ ಹತ್ಯೆಗಳು ಹಾಗೂ ವೈಟ್ ಕಾಲರ್ ಕ್ರಿಮಿನಲ್‌ಗಳನ್ನು ಪ್ರತ್ಯೇಕವಾಗಿಡಬೇಕು. ಬಯಲು ಕಾರಾಗೃಹಗಳು ಹೆಚ್ಚಾಗಬೇಕು. ಅಮೆರಿಕ ಮಾದರಿ ಖಾಸಗಿ ವ್ಯವಸ್ಥೆ ರೂಪಿಸಿದರೆ ಒಳ್ಳೆಯದು.
*ಕಾನೂನು ತಿಳಿದ ಅಧಿಕಾರಿಗಿಂತ ಖಾಸಗಿ ಕಂಪನಿಗೆ ಹೊರಗುತ್ತಿಗೆ ಕೊಡೋದು ಸರಿಯೇ?
- ಅಮೆರಿಕದಲ್ಲಿ ಜೈಲುಗಳು ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಜೈಲಿನಿಂದ ತಪ್ಪಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಏಕೆಂದರೆ ಅಲ್ಲಿ ಬಿಗಿಯಾದ ವ್ಯವಸ್ಥೆ ಇದೆ. ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾದರೆ ಆ ಕಂಪನಿಯ ಗುತ್ತಿಗೆ ಮುಲಾಜಿಲ್ಲದೆ ರದ್ದಾಗುತ್ತದೆ. ಇದರಿಂದ ಜೈಲುಗಳಲ್ಲಿ ಕಟ್ಟುನಿಟ್ಟಾದ ನಿಯಮಗಳು ಜಾರಿಗೆ ಬಂದಿವೆ. ಜೈಲುಗಳು ಸ್ವಚ್ಛವಾಗಬೇಕು ಹಾಗೂ ಕಾನೂನು ಪ್ರಕಾರ ನಡೆಯಬೇಕು ಎನ್ನುವುದಾದರೆ ಖಾಸಗಿ ಕಂಪನಿಗೆ ಹೊರಗುತ್ತಿಗೆ ಕೊಟ್ಟರೆ ತಪ್ಪೇನು? ಇಲ್ಲವಾದರೆ ಕಾರಾಗೃಹಗಳ ಮುಖ್ಯಸ್ಥ ಹುದ್ದೆಗೆ ಹೊರಗುತ್ತಿಗೆ ಮೇರೆಗೆ ತಜ್ಞರನ್ನು ನೇಮಿಸಲಿ.