ಸಾರಾಂಶ
ಕಾರವಾರ: ಹಗರಣಗಳ ಗೂಡಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರು ತನಕ ನಡೆಯುತ್ತಿರುವ ಬೃಹತ್ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಉತ್ಸಾಹದಿಂದ ಪಾಲ್ಗೊಂಡರು.
ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಕಾರವಾರ, ಅಂಕೋಲಾ ಹಾಗೂ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಆರ್. ಅಶೋಕ, ಛಲವಾದಿ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ನಿಖಿಲ ಕುಮಾರಸ್ವಾಮಿ, ಮತ್ತಿತರ ನಾಯಕರೊಂದಿಗೆ ಹೆಜ್ಜೆ ಹಾಕಿದ ರೂಪಾಲಿ ಎಸ್. ನಾಯ್ಕ ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಸರ್ಕಾರ ಬಡವರು, ದಲಿತರಿಗೆ ಮೀಸಲಾದ ಸೌಲಭ್ಯ, ಹಣವನ್ನು ಲೂಟಿ ಮಾಡಿದೆ. ಈ ಸರ್ಕಾರ ತೊಲಗಬೇಕು. ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿರಲು ಯಾವುದೆ ನೈತಿಕ ಹಕ್ಕು ಇಲ್ಲ. ಈ ಪಾದಯಾತ್ರೆ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಆಗಿದೆ ಎಂದು ಅಭಿಪ್ರಾಯಪಟ್ಟರು.ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಸೇರಿದಂತೆ ಹಗರಣವನ್ನೆ ಹೊದ್ದು ಮಲಗಿದ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾರವಾರ, ಅಂಕೋಲಾ ಹಾಗೂ ಇತರೆಡೆಗಳಿಂದ ಬಂದವರು ಸರ್ಕಾರದ ದುರಾಡಳಿತ, ಹಗರಣಗಳ ಬಗ್ಗೆ, ಸರ್ಕಾರದ ವಿರುದ್ಧ ನಿರಂತರ ಘೋಷಣೆ ಮೊಳಗಿಸಿದರು.ಮೊದಲ ದಿನದ ಪಾದಯಾತ್ರೆ ಅಭೂತ ಪೂರ್ವವಾಗಿ ನಡೆಯಿತು. ಬೆಂಗಳೂರಿನ ಕೆಂಗೇರಿ ಜೆ.ಕೆ. ಗಾರ್ಡನ್ ಆರೇನ್‌ನಿಂದ ಆರಂಭಗೊಂಡು ಬಿಡದಿಯಲ್ಲಿ ಕೊನೆಗೊಂಡಿತು.
ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ಕಾರವಾರ ಗ್ರಾಮೀಣ ಮಂಡಲದ ಸುಭಾಷ ಗುನಗಿ, ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾದವರು, ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.ಬಿಜೆಪಿ ಪಾದಯಾತ್ರೆಯಲ್ಲಿ ಭಟ್ಕಳ ಬಿಜೆಪಿ ಮುಖಂಡರು ಭಾಗಿ:ಕಾಂಗ್ರೆಸ್ ಸರ್ಕಾರದ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಭಟ್ಕಳದ ಬಿಜೆಪಿ ಮುಖಂಡರು ಪಾಲ್ಗೊಂಡು ಗಮನ ಸೆಳೆದರು.ಭಟ್ಕಳದವರಾದ ಬಿಜೆಪಿಯ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ ಆಸರಕೇರಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಬಿಜೆಪಿ ಮುಖಂಡ ಹಾಗೂ ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮುಂತಾದವರು ಶಾಸಕರು, ಸಂಸದರು, ಪಕ್ಷದ ಪ್ರಮುಖರ ಜತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.