ಹೆಣ್ಣುಮಕ್ಕಳು ಸುಶಿಕ್ಷಿತ, ಸಂಘಟಿತರಾಗಬೇಕು

| Published : Jul 15 2024, 01:51 AM IST

ಸಾರಾಂಶ

ಉತ್ತಮ ಶಿಕ್ಷಣ ಪಡೆಯುವ ಮೂಲಕ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಹೆಣ್ಣುಮಕ್ಕಳು ಸುಶಿಕ್ಷಿತರಾಗಿ ಸಂಘಟಿತರಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು. ಚಾಮರಾಜನಗರದಲ್ಲಿ ‘ಮಹಿಳೆಯರ ಅಭಿವೃದ್ಧಿ ಹಾಗೂ ಸ್ವಾವಲಂಬನೆ’ ಕುರಿತು ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಲಹೆ । ಸಂವಾದ ಕಾರ್ಯಕ್ರಮ । ದೌರ್ಜನ್ಯ ನಡೆದರೆ ದೂರು ನೀಡಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉತ್ತಮ ಶಿಕ್ಷಣ ಪಡೆಯುವ ಮೂಲಕ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಹೆಣ್ಣುಮಕ್ಕಳು ಸುಶಿಕ್ಷಿತರಾಗಿ ಸಂಘಟಿತರಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ನಗರದ ಹೊರವಲಯದ ಬೇಡರಪುರದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ‘ಮಹಿಳೆಯರ ಅಭಿವೃದ್ಧಿ ಹಾಗೂ ಸ್ವಾವಲಂಬನೆ’ ಕುರಿತು ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಶಿಕ್ಷಣ ಮಹಿಳೆಯರ ಭವಿಷ್ಯವನ್ನು ನಿರ್ಧರಿಸುವ ಬಹುದೊಡ್ಡ ಅಸ್ತ್ರವಾಗಿದೆ. ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳು, ಭದ್ರತೆ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಅರಿವು ಇಲ್ಲವಾಗಿದೆ. ಈ ಬಗ್ಗೆ ಐಇಸಿ ಕಾರ್ಯಕ್ರಮಗಳ ಜಾಗೃತಿ ಮೂಡಿಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅರಿವು ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ತಾವು ಅರಿತು ಸಮಾಜದ ಇತರರಿಗೂ ಅರಿವು ಮೂಡಿಸಬೇಕು. ಆಗಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಆಯೋಗಕ್ಕೆ ಸ್ವೀಕೃತವಾಗುವ ದೂರುಗಳನ್ನು ಗಮನಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದಲೂ ೪ ದೂರುಗಳು ದಾಖಲಾಗಿವೆ. ಹೆಣ್ಣುಮಕ್ಕಳಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಸೈಬರ್ ಕ್ರೈಂ ನಂತಹ ದುಷ್ಕೃತ್ಯಗಳಿಗೆ ಹೆಣ್ಣುಮಕ್ಕಳೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಫೇಕ್ ಅಕೌಂಟ್‌ಗಳಿಂದ ಮೋಸ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಮಹಿಳೆಯರು ಮೊಬೈಲ್‌ಗಳಿಂದ ಪ್ರಭಾವಿತರಾಗದೇ ಸಕಾರಾತ್ಮಕ ಚಿಂತನೆಗಳಿಗೆ ಆದ್ಯತೆ ನೀಡಬೇಕು. ಸದೃಢ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ಬಗೆಯ ದೌರ್ಜನ್ಯಗಳಾದರೂ ನೇರವಾಗಿ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ಸಹ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಜನಸ್ನೇಹಿಯಾಗಿರುವ ಪೊಲೀಸ್ ಠಾಣೆಗಳು ಮಹಿಳಾ ಸ್ನೇಹಿಯಾಗಿಯೂ ಕಾರ್ಯನಿರ್ವಹಿಸಬೇಕು. ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಆತ್ಮವಿಶ್ವಾಸ ತುಂಬಬೇಕು. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಐಸಿಸಿ (ಇಂಟರ್‌ನಲ್ ಕಂಪ್ಲೈಟ್ ಕಮಿಟಿ) ಇರಬೇಕು. ಹೆಣ್ಣುಮಕ್ಕಳು ದೌರ್ಜನ್ಯ, ಹಿಂಸೆಗೊಳಗಾದಾಗ ಐಸಿಸಿ ಸಮಿತಿಯಲ್ಲಿ ದೂರು ದಾಖಲಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಹಿಳೆಯರ ರಕ್ಷಣೆ, ಸ್ವಾವಲಂಬನೆ, ಲಿಂಗ ಸಮಾನತೆ ಮೊದಲು ಮನೆಯಿಂದಲೇ ಆರಂಭವಾಗಬೇಕು. ಹಿಂದೆ ಸಾಕಷ್ಟು ಅವಕಾಶಗಳಿರಲಿಲ್ಲ. ಜಿಲ್ಲೆಯಲ್ಲಿ ಬಾಲ್ಯವಿವಾಹ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಜರುಗಿದರೆ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ೧೦೭೭ಕ್ಕೆ ಕರೆ ಮಾಡಿ. ತಕ್ಷಣ ಕ್ರಮ ವಹಿಸಲಾಗುವುದು ಎಂದರು.

ಸಂವಾದದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಸಮಸ್ಯೆ, ಕುಂದುಕೊರತೆ ಆಲಿಸಿದರು.

ನಂತರ ವಿಶ್ವವಿದ್ಯಾಲಯದ ಆವರಣದಲ್ಲಿರುವ ಮಹಿಳೆಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದರು. ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿನಿಲಯದಲ್ಲಿ ನೀಡುವ ಊಟ, ಉಪಹಾರ ಗುಣಮಟ್ಟದಿಂದ ಕೂಡಿಲ್ಲ. ವಿದ್ಯಾರ್ಥಿನಿಲಯವು ಪಟ್ಟಣದಿಂದ ಹೊರಗಿರುವುದರಿಂದ ರಾತ್ರಿ ವೇಳೆ ಯಾವುದೇ ವೈದ್ಯಕೀಯ ಸಮಸ್ಯೆ ಎದುರಾದರೂ ಸಾರಿಗೆ ವ್ಯವಸ್ಥೆಯ ಕೊರತೆ ಇದೆ. ಇದನ್ನು ಸರಿಪಡಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ ವಿದ್ಯಾರ್ಥಿನಿಲಯಕ್ಕೆ ಬೇಕಾಗಿರುವ ಸೌಲಭ್ಯಗಳು, ಆಗಬೇಕಾಗಿರುವ ವ್ಯವಸ್ಥೆಗಳ ಕುರಿತು ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಿ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.