ಹೊಳೆಹೊನ್ನೂರಿನಲ್ಲಿ ಇನ್ನೂ ನವೀಕರಣವಾಗದ ಗ್ರಾಮ ಠಾಣಾ ನಕ್ಷೆಗಳು

| Published : Feb 24 2025, 12:33 AM IST

ಹೊಳೆಹೊನ್ನೂರಿನಲ್ಲಿ ಇನ್ನೂ ನವೀಕರಣವಾಗದ ಗ್ರಾಮ ಠಾಣಾ ನಕ್ಷೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ಕಾಲದಲ್ಲಿ ತಯಾರಾದ ನಕ್ಷೆಗಳು ಇಂದಿಗೂ ದಾಖಲೆಯಲ್ಲಿ ಚಲಾವಣೆಯಲ್ಲಿವೆ. ಅಂದಿನ ಚಿಕ್ಕಪುಟ್ಟ ಗ್ರಾಮಗಳು ಇಂದು ಮೂರು ಪಟ್ಟು ಬೆಳೆದಿವೆ. ಗ್ರಾಮ ನಕ್ಷೆಯಿಂದ ಹೊರಗುಳಿದಿರುವ ಜನರ ಕಷ್ಟಗಳು ಕೊನೆಯಾಗಬೇಕಾದರೆ ಪ್ರಸ್ತುತ ಗ್ರಾಮ ನಕ್ಷೆಗಳ ಗಡಿ ನವೀಕರಣವಾಗಬೇಕಿದೆ. ಆದರೆ ಇದುವರೆಗೂ ಗ್ರಾಮ ಠಾಣಾ ನಕ್ಷೆಗಳು ಬದಲಾಗಿಲ್ಲ.

ಬ್ರಿಟಿಷರ ಕಾಲದಲ್ಲಿ ತಯಾರಾದ ನಕ್ಷೆಗಳು । ದಾಖಲೆಯಲ್ಲಿ ಇಂದಿಗೂ ಚಾಲ್ತಿ । ದೇಶ 75ನೇ ಸ್ವಾತಂತ್ರ್ಯ ದಿನ ಆಚರಿಸಿದರೂ ಬದಲಾವಣೆ ಇಲ್ಲ

ಅರಹತೊಳಲು ಕೆ.ರಂಗನಾಥ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಸ್ವಾತಂತ್ರ್ಯ ಪೂರ್ವದಲ್ಲಿ ತಯಾರಾದ ಗ್ರಾಮಗಳ ನಕ್ಷೆ ಇಂದಿಗೂ ಚಾಲ್ತಿಯಲಿದ್ದು, ಇದುವರೆಗೂ ಗ್ರಾಮ ಠಾಣಾ ನಕ್ಷೆ ಇನ್ನೂ ನವೀಕರಣಗೊಂಡಿಲ್ಲ.

ಬ್ರಿಟಿಷರ ಕಾಲದಲ್ಲಿ ತಯಾರಾದ ನಕ್ಷೆಗಳು ಇಂದಿಗೂ ದಾಖಲೆಯಲ್ಲಿ ಚಲಾವಣೆಯಲ್ಲಿವೆ. ಅಂದಿನ ಚಿಕ್ಕಪುಟ್ಟ ಗ್ರಾಮಗಳು ಇಂದು ಮೂರು ಪಟ್ಟು ಬೆಳೆದಿವೆ. ಗ್ರಾಮ ನಕ್ಷೆಯಿಂದ ಹೊರಗುಳಿದಿರುವ ಜನರ ಕಷ್ಟಗಳು ಕೊನೆಯಾಗಬೇಕಾದರೆ ಪ್ರಸ್ತುತ ಗ್ರಾಮ ನಕ್ಷೆಗಳ ಗಡಿ ನವೀಕರಣವಾಗಬೇಕಿದೆ. ಆದರೆ ಇದುವರೆಗೂ ಗ್ರಾಮ ಠಾಣಾ ನಕ್ಷೆಗಳು ಬದಲಾಗಿಲ್ಲ.

ಕಂದಾಯ ದಾಖಲೆಯಲ್ಲಿ ಸೇರಿಸದ ಮತ್ತು ಯಾವುದೇ ಆದಾಯವನ್ನು ಉತ್ಪಾದಿಸದ ಸಂಪೂರ್ಣ ವಸತಿ ಪ್ರದೇಶವನ್ನು ಗ್ರಾಮ ಠಾಣಾ ನಕ್ಷೆಯ ವ್ಯಾಪ್ತಿ ಪ್ರದೇಶ ಎಂದು ಕರೆಯಲಾಗುವುದು. ಗ್ರಾಮ ಸಮೀಕ್ಷೆಯಲ್ಲಿ ಜನವಸತಿ ಪ್ರದೇಶವನ್ನು ಪ್ರತ್ಯೇಕವಾಗಿ ಸರ್ವೇ ಮಾಡಿ ಗಡಿ ಗುರುತಿಸಿ ಸಿದ್ಧಪಡಿಸಿದ ನಕ್ಷೆಯೇ ಗ್ರಾಮ ಠಾಣಾ ನಕ್ಷೆಯಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸರ್ವೇ ನಂಬರ್ ಇರುವುದಿಲ್ಲ.

ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಮಠಾಣಾ ನಕ್ಷೆಯು ಬ್ರಿಟೀಷರ ಆಳ್ವಿಕೆಯಲ್ಲಿ ರಚಿಸಿದ ಗಡಿ ನಕ್ಷೆಯಾಗಿದೆ. ಆದರೆ ಇಂದು ಗ್ರಾಮ ಯೋಜನೆಯ ಗಡಿಯನ್ನು ಮೀರಿ ವಿಸ್ತರಿಸಿರುವ ವಸತಿ ಭೂಮಿಯ ಅಭಿವೃದ್ದಿ ಮತ್ತು ಉತ್ತರಾಧಿಕಾರದ ಬಗ್ಗೆ ಅನೇಕ ಸಮಸ್ಯೆಗಳಿವೆ.

ಆಸ್ತಿಯನ್ನು ಮಾರಾಟ ಮಾಡುವುದು ವಿವಿಧ ಕಾನೂನು ಸಂಕೀರ್ಣತೆಯನ್ನು ಒಳಗೊಂಡಿದೆ. ಪ್ರಮುಖವಾಗಿ ಗ್ರಾಮಠಾಣಾ ವ್ಯಾಪ್ತಿಯ ಉಪ ಗ್ರಾಮಗಳು, ಉಪ ನಗರಗಳು ಮತ್ತು ಗ್ರಾಮಠಾಣಾ ವ್ಯಾಪ್ತಿಯ ಹೊರಗಿನ ಕಂದಾಯ ಪ್ರದೇಶಗಳಲ್ಲಿ ಇರುವ ಆಸ್ತಿಗಳಿಗೆ ಸಂಬಂಧಿಸಿದ 9 ಮತ್ತು 11ಎ ಲಭ್ಯವಿಲ್ಲ. ಈ ಕಾರಣಕ್ಕಾಗಿ ಅಂತಹ ಆಸ್ತಿಗಳ ಮಾಲೀಕರು ತಮ್ಮ ಮನೆಗಳ ನಿರ್ಮಾಣ, ವಿಸ್ತರಣೆ ಮತ್ತು ದುರಸ್ತಿಗಾಗಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆಗಿನ ಜನನಾಯಕರು ಗ್ರಾಮ ಪಂಚಾಯಿತಿಗಳಲ್ಲಿ ಪ್ರಭಾವ ಬೀರಿ ಪಂಚಾಯಿತಿ ದಾಖಲೆಗಳಲ್ಲಿ ನಮೂದು ಮಾಡಿಸಿರುವುದು ಜಗಜ್ಜಾಹಿರ.

ಹಲವಾರು ವರ್ಷಗಳ ಹಿಂದೆ ಖರೀದಿಯಾದ ಆಸ್ತಿಗಳು ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ದಾಖಲಾಗಿಲ್ಲ. ಬದಲಾಗಿ ಒಪ್ಪಿಗೆ ಪತ್ರದ ಆಧಾರದ ಮೇಲೆ ಗ್ರಾಮ ಪಂಚಾಯಿತಿಯಲ್ಲಿ ಖಾತೆ ಮಾಡಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಪೋಲೀಸರು ತೀರ್ಮಾನ ಹೇಳುವುದು ಗೊಂದಲವಾಗಿ ಕೇಸ್‌ ಅನ್ನು ನ್ಯಾಯಾಲಯಕ್ಕೆ ವರ್ಗಾಯಿಸುವಂತಾಗಿದೆ.

ಬ್ರಿಟಷರ ಕಾಲದ ಗ್ರಾಮ ಠಾಣಾ ನಕ್ಷೆ

ಇಂದು ರಾಜ್ಯಾದಾಧ್ಯಂತ ಚಾಲ್ತಿಯಲ್ಲಿರುವುದು ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಆಳ್ವಿಕೆ ಕಾಲದ ಗ್ರಾಮಠಾಣಾ ನಕ್ಷೆ. ಬ್ರಿಟಿಷರು ಭಾರತೀಯರಿಂದ ಕಂದಾಯ ವಸೂಲಿ ಮಾಡಲು ಈ ಗ್ರಾಮಠಾಣಾ ನಕ್ಷೆಗಳನ್ನು ರಚಿಸಿದ್ದರು ಎಂಬುದು ವಾಡಿಕೆಯ ಮಾತು.

2016 ಆದೇಶಕ್ಕೆ ಬೇಕು ಕಾಯಕಲ್ಪ:

2016ರಲ್ಲಿ ಅಂದಿನ ಗ್ರಾಮೀಣಾಭಿವೃದ್ದಿ ಸಚಿವರು ಮತ್ತು ಹಣಕಾಸು ಸಚಿವರ ಅಧ್ಯಕ್ಷೆತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಠಾಣಾ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ದರಿಸಲಾಗಿತ್ತು. ಅದರಂತೆ ಈ ಕುರಿತು 10 ಅಂಶಗಳ ಸುತ್ತೋಲೆ ಹೊರಡಿಸಿ ನಿರ್ಣಯ ಜಾರಿಗೊಳಿಸಲು ಆದೇಶಿಸಲಾಗಿತ್ತು.

ಕೆಲವು ಕಡೆಗಳಲ್ಲಿ ಗ್ರಾಮದ ಶೇಕಡ 70 ಭಾಗ ಗ್ರಾಮಠಾಣಾ ನಕ್ಷೆಯಿಂದ ಹೊರಗಡೆ ಇದೆ. ಇದರಿಂದ ಆಸ್ತಿ ಮಾಲೀಕರ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಗ್ರಾಮ ಠಾಣಾ ನಕ್ಷೆಯ ನವೀಕರಣ ತುರ್ತಾಗಿ ಆಗಬೇಕಿದೆ.

ಕೆ.ಪಿ.ಶ್ರೀಪಾಲ್, ವಕೀಲ, ಶಿವಮೊಗ್ಗ.

ನಗರಗಳನ್ನು ಹೊರತುಪಡಿಸಿ ಉಳಿದಿರುವ ಕಡೆಗಳಲ್ಲಿ ಕೆಲಸಗಳು ನಡೆಯಬೇಕಿರುವುದರಿಂದ ಈ ಗ್ರಾಮ ಠಾಣಾ ನಕ್ಷೆಯ ನವೀಕರಣ ಅವಶ್ಯಕ. ಗ್ರಾಮೀಣ ಬಾಗದಲ್ಲಿ 94ಸಿ, ನಗರ ವ್ಯಾಪ್ತಿಯಲ್ಲಿ 94ಸಿಸಿ ಅಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ವಸತಿ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡುವ ಪ್ರಯತ್ನ ಮಾಡಲಾಯಿತು. ಕಾಲಕ್ಕನುಗುಣವಾಗಿ ಗ್ರಾಮ ಠಾಣಾ ವಿಸ್ತರಣೆ ಆಗಬೇಕು.

ಶಾರದಾ ಪೂರ್ಯಾ ನಾಯ್ಕ್. ಶಾಸಕಿ.