ಸಾರಾಂಶ
- ಕಡೂರು ಪಟ್ಟಣದ ಚೆಕ್‍ಪೋಸ್ಟ್ ನಲ್ಲಿರುವ ಶ್ರೀ ವೆಂಕಟೇಶ್ವರ ಆಟೋ ನಿಲ್ದಾಣವನ್ನು ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಕಡೂರುಕಷ್ಟಪಟ್ಟು ದುಡಿದು ತಿನ್ನುವ ಕಡೂರು-ಬೀರೂರು ಪಟ್ಟಣದ ಶ್ರಮಿಕ ವರ್ಗದ ಆಟೋ ಚಾಲಕರು ಮತ್ತು ಸೂರಿಲ್ಲದ ಬಡವರಿಗೆ ನಿವೇಶನ ನೀಡುವ ಪ್ರಯತ್ನ ಸಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.
ಕಡೂರು ಪಟ್ಟಣದ ಚೆಕ್‍ಪೋಸ್ಟ್ ನಲ್ಲಿರುವ ಶ್ರೀ ವೆಂಕಟೇಶ್ವರ ಆಟೋ ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಕಡೂರು-ಬೀರೂರು ಆಟೋ ಚಾಲಕರು ಹಾಗೂ ಮಾಲೀಕರು ಕಷ್ಟದಿಂದ ಜೀವನ ಸಾಗಿಸುತ್ತಿದ್ದು, ನಾನು ಕೂಡ ಬಡ ರೈತರ ಕುಟುಂಬದವನಾಗಿ ಯಾವುದೇ ರಾಜಕೀಯದ ಹಿನ್ನೆಲೆ ಇಲ್ಲದೆ ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ನನ್ನ ಮತ್ತು ಆಟೋ ಚಾಲಕರ ಅವಿನಾಭಾವ ಸಂಭಂದ ಕಳೆದ 20 ವರ್ಷಗಳಿಂದ ಇದೆ ಎಂದರು.ಪಟ್ಟಣದ ಕೆಲ ಭಾಗಗಳಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಇತ್ತು. ಬಸ್ ನಿಲ್ದಾಣ ಮತ್ತು ಚೆಕ್‍ಪೋಸ್ಟ್ ಸಮೀಪ ಆಟೋ ನಿಲ್ದಾಣಕ್ಕೆ 16 ಲಕ್ಷ ರು. ನೀಡಿದ್ದು ಕೆಆರ್‍ಐಡಿಎಲ್ ಸಂಸ್ಥೆ ಅತ್ಯುತ್ತಮವಾದ ಆಟೋ ನಿಲ್ದಾಣ ನಿರ್ಮಿಸಿ ಲೋಕಾರ್ಪಣೆ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಈ ಆಟೋ ನಿಲ್ದಾಣಕ್ಕೆ ಅನೇಕ ಪ್ರಭಾವಿಗಳ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ಹಣ ಮಂಜೂರು ಮಾಡಿಸಿ ಉದ್ಘಾಟನೆ ಮಾಡಿದ್ದೇನೆ. ಮರ ವಂಜಿ ವೃತ್ತ, ವೀರಭದ್ರೇಶ್ವರ ಆಟೋ ನಿಲ್ದಾಣ, ಕನಕ ವೃತ್ತದ ಬಳಿ ಮತ್ತು ಬೀರೂರಿನಲ್ಲಿ 2 ಆಟೋ ನಿಲ್ದಾಣಗಳಿಗೆ ಹಣ ನೀಡಿದ್ದು, ಶೀಘ್ರವೇ ಬಳಕೆಗೆ ಬರಲಿದೆ ಇನ್ನು ಚೇತನ ಆಸ್ಪತ್ರೆ ಮುಂಭಾಗಕ್ಕೆ ಬೇಡಿಕೆಯಿದ್ದು 2 ತಿಂಗಳ ಬಳಿಕ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಇನ್ನು ಪಟ್ಟಣದ ಆಸ್ಪತ್ರೆ ಮುಂಭಾಗ ವ್ಯಾನ್-ಕಾರು ಚಾಲಕರಿಗೆ ವ್ಯಾನ್ ನಿಲ್ದಾಣಕ್ಕೆ ಈಗಾಗಲೇ 20 ಲಕ್ಷ ರು. ನೀಡಿದ್ದು ಅವರ ಬೇಡಿಕೆಗೂ ಸ್ಪಂದಿಸಿದ್ದೇನೆ ಎಂದರು.
ಆಟೋ ನಿಲ್ದಾಣಗಳ ಸಂಘಗಳಿಗೆ ಜಾಗದ ದಾಖಲಾತಿ ನೀಡುವ ಪ್ರಕ್ರಿಯೆಗೆ ಇರುವ ತೊಡಕು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆಟೋ ಚಾಲಕರಿಗೆ ನನ್ನ ಅವಧಿಯಲ್ಲಿ ನಿವೇಶನ ನೀಡಲು ಮುಂದಾಗುತ್ತೇನೆ ಎಂದರು.ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ವಿರೋಧಗಳ ನಡುವೆಯೂ ಈ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಆನಂದ್ ಹೋರಾಟ ನಡೆಸಿ ನಿಮ್ಮ ಪರವಾಗಿ ನಿಂತು ನಿಲ್ದಾಣ ನೀಡಿದ್ದಾರೆ. ಯುವಕರಿಗೆ ಅನ್ನ ನೀಡುವುದೇ ಆಟೋ ನಿಲ್ದಾಣಗಳು. ಈಗ ನಿರ್ಮಿಸಿರುವ ನಿಲ್ದಾಣಗಳಿಗೆ ಪುರಸಭೆಯಿಂದ ನಿಲ್ದಾಣಗಳ ದಾಖಲೆಗಳನ್ನು ಶಾಸಕರು ಕಂದಾಯ ಕಟ್ಟಿಸಿ ಕೊಡಿಸಿದರೆ, ಮುಂದೆ ಅವರಿಗೆ ಖಾಸಗಿ ವ್ಯಕ್ತಿಗಳಿಂದ ಆಗುವ ತೊಂದರೆ ತಪ್ಪಿಸಲು ಸಾಧ್ಯ. ಇದಕ್ಕೆ ಶಾಸಕರು ಮುಂದಾಗಲಿ ಎಂದರು.
ಪುರಸಭೆ ಹಿರಿಯ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ. ಈ ಆಟೋ ನಿಲ್ದಾಣ ತೆರೆಯಲು ಸ್ಥಳಿಯರು ದೌರ್ಜನ್ಯ ಮಾಡಿ ನ್ಯಾಯಾಲಯದ ಮೊರೆ ಹೋದರೂ ಸಹ ಶಾಸಕರು ನಿಮ್ಮ ಪರವಾಗಿ ಹೋರಾಟ ಮಾಡಿದರು. ನೀವು ನಮ್ಮ ಮತ್ತು ಶಾಸಕರ ಬಗ್ಗೆ ಇಟ್ಟಿರುವ ಅಭಿಮಾನ ಪ್ರೀತಿಯೇ ಇದಕ್ಕೆ ಕಾರಣ ಎಂದರು.ಬೀರೂರು ಆಟೋ ಸಂಘದ ಅಧ್ಯಕ್ಷ ಶಶಿಧರ್ ಮಾತನಾಡಿ, ಶಾಸಕರು ಬೀರೂರಿನ ಆಟೋ ಚಾಲಕರ ಹಾಗೂ ಮಾಲೀಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಕಾರ್ಯಗಳನ್ನು ಶ್ಲಾಘಿಸುತ್ತೇವೆ ಎಂದರು.
ಶ್ರೀ ವೆಂಕಟೇಶ್ವರ ಆಟೋ ನಿಲ್ದಾಣ ಸಂಘದ ಅಧ್ಯಕ್ಷ ಶ್ರೀನಿವಾಸ್‍ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸತೀಶ್, ಗೌರವಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಗಣೇಶ್, ಕೃಷ್ಣ, ಲಕ್ಷ್ಣಣ್, ಮಂಜುನಾಥ್, ಸುರೇಶ್, ಲೋಕೇಶ್, ಯೋಗೀಶ್ ಹಾಗೂ ಕೋಟೆ ನಂದೀಶ್, ಇಂಜಿನಿಯರ್ ಅಶ್ವಿನಿ, ಹುಲ್ಲೇಹಳ್ಳಿ ಲೋಕೇಶ್, ರಮೇಶ್,ವೆಂಕಟೇಶ್ವರ ಆಟೋ ನಿಲ್ದಾಣದ ಚಾಲಕರು, ಮಾಲೀಕರು ಮತ್ತಿತರರು ಇದ್ದರು.14ಕೆಕೆಡಿಯು1.
ಕಡೂರು ಪಟ್ಟಣದ ಚೆಕ್‍ಪೋಸ್ಟಿನ ಶ್ರೀ ವೆಂಕಟೇಶ್ವರ ಆಟೋ ನಿಲ್ದಾಣವನ್ನು ಶಾಸಕ ಕೆ.ಎಸ್.ಆನಂದ್ ಲೋಕಾರ್ಪಣೆ ಮಾಡಿದರು.