ಹುಬ್ಬಳ್ಳಿ ನೋಂದಣಾಧಿಕಾರಿ ಕಚೇರಿಗೆ ದಂಡ, ಪರಿಹಾರಕ್ಕೆ ಆದೇಶ

| Published : Jul 15 2025, 01:45 AM IST

ಹುಬ್ಬಳ್ಳಿ ನೋಂದಣಾಧಿಕಾರಿ ಕಚೇರಿಗೆ ದಂಡ, ಪರಿಹಾರಕ್ಕೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ನೊಂದಣಾಧಿಕಾರಿಗಳ ಕಚೇರಿಗೆ ಅನಕ್ಷರಸ್ತರಾದ ರೈತರು ಹಾಗೂ ಸಾಮನ್ಯ ಜನರು ಇಂತಹ ದಾಖಲೆ ಕೊಡುವಂತೆ ಕೇಳಿಕೊಂಡು ಬರುತ್ತಾರೆ. ಒಬ್ಬ ವಕೀಲರಿಗೆ ತಪ್ಪು ದಾಖಲೆಯನ್ನು ಎದುರುದಾರರು ಕೊಟ್ಟಿರುವುದರಿಂದ ಸಾಮಾನ್ಯ ರೈತರ ಪರಿಸ್ಥಿತಿ ಏನು? ಎಂದು ಆಯೋಗ ಬೇಸರ ಸಹ ವ್ಯಕ್ತಪಡಿಸಿದೆ.

ಧಾರವಾಡ: ಸರಿಯಾದ ದಾಖಲೆ ನೀಡದ ಹುಬ್ಬಳ್ಳಿಯ ಉಪನೋಂದಾಣಾಧಿಕಾರಿ ಮತ್ತು ಅವರ ಸಿಬ್ಬಂದಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗವು ದಂಡ ಮತ್ತು ಪರಿಹಾರ ನೀಡಲು ಮಹತ್ತರ ಆದೇಶ ನೀಡಿದೆ.

ಹುಬ್ಬಳ್ಳಿಯ ಉಣಕಲ್‌ ನಿವಾಸಿ ಹಾಗೂ ನ್ಯಾಯವಾದಿ ನಾರಾಯಣರಾವ್ ಸಾಳುಂಕೆ ಸಿವಿಲ್ ಕೋರ್ಟಿನಲ್ಲಿ ಪೆಂಡಿಂಗ್ ಇರುವ ದಾವೆಯಲ್ಲಿ ತಮ್ಮ ಕಕ್ಷಿಗಾರರ ಪರ ಹಾಜರು ಪಡಿಸಲು ಜಮೀನೊಂದರ ಕ್ರಯ ಪತ್ರದ ದೃಢೀಕೃತ ನಕಲು ಕೊಡುವಂತೆ ಹುಬ್ಬಳ್ಳಿಯ ದಕ್ಷಿಣ ವಿಭಾಗದ ಉಪನೊಂದಣಾಧಿಕಾರಿಗಳ ಕಚೇರಿಗೆ ₹160 ಶುಲ್ಕ ನೀಡಿ ಅರ್ಜಿ ಸಲ್ಲಿಸಿದ್ದರು. ದೂರುದಾರರಿಗೆ ಬೇಕಾದ ಕ್ರಯ ಪತ್ರದ ನಕಲನ್ನು ಕೊಡಲಿಲ್ಲ. ವಿಚಾರಿಸಿದಾಗ ಕಂಪ್ಯೂಟರ್ ತೊಂದರೆ ಇದ್ದು, ಇನ್ನೊಮ್ಮೆ ಅರ್ಜಿ ಹಾಕಿ ಎಂದು ಹೇಳಿದರು.

ದೂರುದಾರರು ಮತ್ತೆ ₹160 ಶುಲ್ಕ ತುಂಬಿ ಮತ್ತೊಮ್ಮೆ ಕಂಪ್ಯೂಟರ್ ಮೂಲಕ ಆನಲೈನ್ ಅರ್ಜಿ ಹಾಕಿದರು. ಆಗ ಕಚೇರಿಯ ಸಿಬ್ಬಂದಿ ದೀಪಕ ಪತಂಗೆ ಮತ್ತು ಇತರೆ ಸಿಬ್ಬಂದಿ ಬೇರೆಯವರ ಜಮೀನಿನ ಮಾಹಿತಿಯುಳ್ಳ ಅಪೂರ್ಣ ದಸ್ತಾವೇಜಿನ ನಕಲನ್ನು ದೂರುದಾರರಿಗೆ ಕೊಟ್ಟರು. ಇದರಿಂದಾಗಿ ನ್ಯಾಯವಾದಿ ನಾರಾಯಣರಾವ್‌ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ಸರಿಯಾದ ಸಮಯಕ್ಕೆ ಸೂಕ್ತ ದಾಖಲೆ ಒದಗಿಸಲಾಗದೆ ಮುಜುಗರ ಪರಿಸ್ಥಿತಿ ಅನುಭವಿಸಬೇಕಾಯಿತು. ಇದರಿಂದ ಬೇಸತ್ತು ನಾರಾಯಣರಾವ್‌ ಆಯೋಗದ ಎದುರು ದೂರು ಸಲ್ಲಿಸಿದರು.

ದೂರು ವಿಚಾರಣೆ ಮಾಡಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ದೂರುದಾರರಿಗೆ ಬೇಕಾದ ದಸ್ತಾವೇಜಿನ ಸರಿಯಾದ ದೃಢೀಕೃತ ನಕಲು ಕೊಡುವುದು ಉಪ ನೋಂದಣಾಧಿಕಾರಿ ಸಿಬ್ಬಂದಿ ಕರ್ತವ್ಯ. ಆದರೆ, ಸಂಬಂಧಿಸದ ದಸ್ತಾವೇಜಿನ ಅಪೂರ್ಣ ದಾಖಲೆ ಒದಗಿಸಿ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಯೋಗ ತೀರ್ಪು ನೀಡಿದೆ.

ಅಪೂರ್ಣ ಹಾಗೂ ತಪ್ಪು ದಸ್ತಾವೇಜನ್ನು ತಯಾರಿಸಿ, ತಾಳೆ ನೋಡಿ ಸಹಿ ಮಾಡಿದ ಉಪ ನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿಗಳಾದ ರಾಜೇಶ್ವರಿ ಅರತಗಲಾ, ಹೀರಾಬಾಯಿ ಸೋನೆವಾನೆ ಹಾಗೂ ಗುಮಾಸ್ತ ದೀಪಕ ಪತಂಗೆರವರು ತಮ್ಮ ಸ್ವಂತ ಜೇಬಿನಿಂದ ದೂರುದಾರರು ಸಂದಾಯ ಮಾಡಿದ ಶುಲ್ಕದ ಹಣ ₹370 ದೂರುದಾರರಿಗೆ ಮರಳಿ ಕೊಡಬೇಕು ಹಾಗೂ ದೂರುದಾರರಿಗೆ ಮತ್ತು ಅವರ ಕಕ್ಷಿಗಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ಅನಾನುಕೂಲಕ್ಕೆ ₹50 ಸಾವಿರ ಪರಿಹಾರ ಮತ್ತು ಈ ಪ್ರಕರಣದ ಖರ್ಚು ವೆಚ್ಚ ₹10 ಸಾವಿರ ಕೊಡುವಂತೆ ಆಯೋಗ ಆದೇಶಿಸಿದೆ.

ನೊಂದಣಾಧಿಕಾರಿಗಳ ಕಚೇರಿಗೆ ಅನಕ್ಷರಸ್ತರಾದ ರೈತರು ಹಾಗೂ ಸಾಮನ್ಯ ಜನರು ಇಂತಹ ದಾಖಲೆ ಕೊಡುವಂತೆ ಕೇಳಿಕೊಂಡು ಬರುತ್ತಾರೆ. ಒಬ್ಬ ವಕೀಲರಿಗೆ ತಪ್ಪು ದಾಖಲೆಯನ್ನು ಎದುರುದಾರರು ಕೊಟ್ಟಿರುವುದರಿಂದ ಸಾಮಾನ್ಯ ರೈತರ ಪರಿಸ್ಥಿತಿ ಏನು? ಎಂದು ಆಯೋಗ ಬೇಸರ ಸಹ ವ್ಯಕ್ತಪಡಿಸಿದೆ. ಹೀಗಾಗಿ ಎದುರುದಾರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾಗಿ ಕೆಲಸ ಮಾಡುವಂತೆ ಸೂಕ್ತ ಮಾರ್ಗದರ್ಶನ ನೀಡುವಂತೆ ಆಯೋಗವು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿದೆ.