ಸಾರಾಂಶ
ತ್ರಿಭಾಷಾ ಸೂತ್ರ ಭಾತೃತ್ವ ಹಾಗೂ ಭಾಷಾ ವೈವಿದ್ಯತೆಯನ್ನು ಗೌರವಿಸುವ ಜತೆಗೆ ಸಂರಕ್ಷಣೆ ಮಾಡುತ್ತಿದೆ. ಹೀಗಿದ್ದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದರೆ, ಭಾಷಾ ಜ್ಞಾನದ ಕೊರತೆಯಿಂದಾಗಿ ಸಂವಹನಕ್ಕೆ ತೊಂದರೆಯಾಗುತ್ತದೆ.
ಹುಬ್ಬಳ್ಳಿ: ರಾಷ್ಟ್ರ ಭಾಷೆ ಹಿಂದಿಯನ್ನು ಉಳಿಸಲು ಮತ್ತು ರಾಜ್ಯದಲ್ಲಿರುವ 15 ಸಾವಿರ ಹಿಂದಿ ಶಿಕ್ಷಕರ ಮತ್ತವರ ಕುಟುಂಬದ ರಕ್ಷಣೆ ದೃಷ್ಟಿಯಿಂದ ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯತೆ ಏಕತೆಯ ದೃಷ್ಟಿಯಿಂದ ಹಾಗೂ ಬಹು ಭಾಷೆಗಳ ಕಲಿಕೆ ಉತ್ತೇಜಿಸಲು 1961 ತ್ರಿಭಾಷಾ ಸೂತ್ರವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಭಾಷೆಗಳ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವೇ ಹೊರತು ಅನಾನುಕೂಲವಿಲ್ಲ ಎಂಬುದು ಭಾಷಾ ತಜ್ಞರ ಅಭಿಪ್ರಾಯ. ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡಲು ಅನುವು ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅನ್ಯ ರಾಜ್ಯಗಳಲ್ಲಿ ವೃತ್ತಿನಿರತರಾಗಲು, ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿದೆ ಎಂದು ಹೇಳಿದ್ದಾರೆ.ತ್ರಿಭಾಷಾ ಸೂತ್ರ ಭಾತೃತ್ವ ಹಾಗೂ ಭಾಷಾ ವೈವಿದ್ಯತೆಯನ್ನು ಗೌರವಿಸುವ ಜತೆಗೆ ಸಂರಕ್ಷಣೆ ಮಾಡುತ್ತಿದೆ. ಹೀಗಿದ್ದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದರೆ, ಭಾಷಾ ಜ್ಞಾನದ ಕೊರತೆಯಿಂದಾಗಿ ಸಂವಹನಕ್ಕೆ ತೊಂದರೆಯಾಗುತ್ತದೆ. ಅಲ್ಲದೇ, ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬೀದಿಗೆ ಬರಲಿದ್ದಾರೆ. ಹಿಂದಿ ಭಾಷಾ ಶಿಕ್ಷಕರಾಗಬೇಕೆಂಬ ಕನಸಿನೊಂದಿಗೆ ಬಿ.ಇಡಿ ಪದವಿ ಮಾಡಿರುವ ಅನೇಕ ಭಾವಿ ಶಿಕ್ಷಕರು ನಿರುದ್ಯೋಗಿಗಳಾಗುತ್ತಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ 17,909ಕ್ಕೂ ಹೆಚ್ಚು ವಿದ್ಯಾರ್ಥಿಗಳು 100 ಅಂಕ ತೆಗೆದುಕೊಂಡು ಉತ್ತೀರ್ಣರಾಗಿದ್ದಾರೆ. ಆದರೆ, ಕೆಲವರು ಹಿಂದಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ವಿಶೇಷ ಎಂದರೆ, ಹಿಂದಿಯಲ್ಲಿ ಪಡೆದುಕೊಂಡ ಅಂಕಗಳಿಂದಲೇ ಅವರ ಒಟ್ಟಾರೆ ಫಲಿತಾಂಶ ಹೆಚ್ಚಾಗಲು ಕಾರಣವಾಗಿರುತ್ತದೆ. ಈಗಾಗಲೇ ತೃತೀಯ ಭಾಷೆ ಬದಲಾಗಿ ಎನ್‌ಎಸ್‌ಕ್ಯೂಎಫ್ ಜಾರಿಗೆ ತಂದಿರವುದರಿಂದ ದೇಶದ ಆಡಳಿತ ಭಾಷೆಗೆ ಹಿನ್ನಡೆ ಆಗಲಿದೆ. ಎನ್‌ಎಸ್‌ಕ್ಯೂಎಫ್ ವಿಷಯವನ್ನು ಹಿಂದಿಯ ಬದಲಾಗಿ ಎನ್ನುವ ಬದಲು ಇರುವ ವಿಷಯಗಳ ಜತೆಗೆ ಅದನ್ನು ಒಂದು ಪ್ರತ್ಯೇಕ ವಿಷಯವನ್ನಾಗಿ ಬೋಧನೆ ಮಾಡಿದರೆ ಎಲ್ಲ ಮಕ್ಕಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.ಕೆಲವೊಮ್ಮೆ ಕೇಂದ್ರ ಸಚಿವರು ಸಹ ಹಿಂದಿ ಕಲಿಯಲು ಶಿಕ್ಷಕರನ್ನು ನೇಮಿಸಿಕೊಳ್ಳುವಂಥ ಪರಿಸ್ಥಿತಿ ಬಂದಿರುವುದನ್ನು ನಾವು ಕಂಡಿದ್ದೇವೆ. ಹಾಗಾಗಿ ಇದೆಲ್ಲಾ ಆಗಬಾರದು ಮತ್ತು ನಮ್ಮ ಮುಂದಿನ ಪೀಳಿಗೆ ಬರುವ ಅವಕಾಶಗಳಿಂದ ವಂಚಿತಗೊಳ್ಳಬಾರದು. ಹಾಗಾಗಿ ಈಗಿರುವಂತೆ ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಕೈ ಬಿಡದೆ ಮುಂದುವರೆಸಿಕೊಡು ಹೋಗಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.