ಸಾರಾಂಶ
- ಉನ್ನತ ಹುದ್ದೆ ಕನಸು ಸಾಕಾರಗೊಳ್ಳದ ಬೇಸರದಿಂದ ಆತ್ಮಹತ್ಯೆ ಶಂಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿದ್ದ ಪ್ರತಿಭಾವಂತ ಯುವಕನೊಬ್ಬ ಮನೆಯಲ್ಲಿ ಹೆತ್ತವರು ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಸ್.ಎಸ್. ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ನಗರದ ಎಸ್.ಎಸ್. ಬಡಾವಣೆಯ 1ನೇ ತಿರುವು, 4ನೇ ಮುಖ್ಯರಸ್ತೆ ವಾಸಿ, ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಸಂಸ್ಥಾಪಕ, ಅವಿವಾಹಿತ ಜಿ.ಎನ್.ಶರತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬಿಎಸ್‌ಎನ್‌ಎಲ್ ನಿವೃತ್ತ ಎಜಿಎಂ ಜಿ.ನಾಗರಾಜ, ಜಾನಕಿ ದಂಪತಿ ಮದುವೆ ಸಮಾರಂಭಕ್ಕೆ ಹೋಗಿದ್ದರು. ಇತ್ತ ಮನೆಯಲ್ಲಿದ್ದ ಶರತ್ ನೇಣಿಗೆ ಕೊರಳೊಡ್ಡಿ, ಸಾವಿಗೆ ಶರಣಾಗಿದ್ದಾರೆ.ಎಂಸಿಸಿ ಬಿ ಬ್ಲಾಕ್‌ನ ಪಾಲಿಕೆ ಈಜುಕೊಳದ ಸಮೀಪದ ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಸ್ಥಾಪಿಸಿದ್ದ ಶರತ್ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದವು. ಸ್ವತಃ ತಾವೂ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳನ್ನು ಬರೆಯುತ್ತಿದ್ದರು. ಶರತ್ ಬಳಿ ತರಬೇತಿ ಪಡೆದ ಅದೆಷ್ಟೋ ಜನರು ಹುದ್ದೆಗೇರಿದ್ದು, ಈಗ ಎಲ್ಲರೂ ಅಗಲಿದ ತಮ್ಮ ಗುರುವಿನ ಫೋಟೋವನ್ನು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಹಾಕಿಕೊಂಡು, ಕಂಬನಿ ಮಿಡಿಯುತ್ತಿದ್ದಾರೆ.
ಪೋಷಕರು ಸಮಾರಂಭದಿಂದ ಮಧ್ಯಾಹ್ನ ಮರಳಿ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಎಷ್ಟು ಹೊತ್ತಾದರೂ ಶರತ್ ಬಾಗಿಲು ತೆಗೆದಿಲ್ಲ. ಮಗ ಮಲಗಿರಬೇಕೆಂದು ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ. ಅನಂತರ ಬಾಗಿಲನ್ನು ಚಿಲಕ ಒಡೆದು ನೋಡಿದಾಗ ಮಗ ನೇಣಿಗೆ ಶರಣಾಗಿರುವುದು ಕಂಡು ಜೋರಾಗಿ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಸಹಾಯಕ್ಕೆ ಬಂದು, ಪೊಲೀಸರಿಗೆ ವಿಷಯ ಮುಟ್ಟಿಸಿದರು.ಈ ಕುಟುಂಬಕ್ಕೆ ಹಣಕಾಸು, ಕೌಟುಂಬಿಕ ಸಮಸ್ಯೆಗಳು ಇರಲಿಲ್ಲ. ಶರತ್ ಆತ್ಮಹತ್ಯೆ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
- - - -22ಕೆಡಿವಿಜಿ13:ಜಿ.ಎನ್.ಶರತ್