ಸಾರಾಂಶ
ಬೆಂಗಳೂರು : ಯಲಹಂಕ ಲಾಡ್ಜ್‌ನಲ್ಲಿ ಯುವಕ-ಮಹಿಳೆ ಸಾವು ಪ್ರಕರಣದ ಹಿಂದೆ ಅನೈತಿಕ ಸಂಬಂಧ ಕಾರಣವಾಗಿದೆ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಲವು ದಿನಗಳಿಂದ ರಮೇಶ್ ಬಂಡಿವಡ್ಡರ್ ಜತೆ ವಿವಾಹಿತೆ ಕಾವೇರಿ ಸಲುಗೆ ಹೊಂದಿದ್ದಳು. ಈ ಸ್ನೇಹದ ಕಾರಣಕ್ಕೆ ಪತಿ ತೊರೆದು ನಗರಕ್ಕೆ ಆಕೆ ಬಂದಿದ್ದಳು. ಆದರೆ ಈ ಅಗ್ನಿ ಅವಘಡ ಹೇಗೆ ಸಂಭವಿಸಿದೆ ಎಂಬುದು ಖಚಿತವಾಗಿಲ್ಲ. ವೈಯಕ್ತಿಕ ವಿಚಾರವಾಗಿ ಪರಸ್ಪರ ಜಗಳವಾಡಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತನ್ನೂರಿನಲ್ಲಿ ಗದಗ ಜಿಲ್ಲೆ ಗಜೇಂದ್ರಗಢದ ರಮೇಶ್ ಬಂಡಿವಡ್ಡರ್ ಗಾರೆ ಕೆಲಸ ಮಾಡಿಕೊಂಡಿದ್ದ. ಬಾಗಲಕೋಟೆಯ ಹುನಗುಂದ ತಾಲೂಕಿನಲ್ಲಿ ರೈತನ ಜತೆ ಕಾವೇರಿ ವಿವಾಹವಾಗಿದ್ದಳು. ಈಕೆಗೆ ಮೂವರು ಮಕ್ಕಳಿದ್ದರು. ರಮೇಶ್ ಜತೆ ಸ್ನೇಹದ ವಿಚಾರವು ಆಕೆಯ ಪತಿಗೆ ಗೊತ್ತಾಗಿ ಗಲಾಟೆ ಸಹ ಆಗಿತ್ತು. ಈ ಕೌಟುಂಬಿಕ ಕಲಹ ಬಳಿಕ ಆಕೆಗೆ ಬೆಂಗಳೂರಿಗೆ ಬಂದು ಯಲಹಂಕ ಸಮೀಪದ ಸ್ಪಾನಲ್ಲಿ ಕೆಲಸಕ್ಕೆ ಸೇರಿದ್ದಳು ಎಂದು ತಿಳಿದು ಬಂದಿದೆ.
ಯಲಹಂಕ 4ನೇ ಹಂತದ ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್‌ನ ಕೋಣೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ರಮೇಶ್ ಬೆಂಕಿಯಲ್ಲಿ ಸುಟ್ಟು ಹಾಗೂ ಕಾವೇರಿ ಉಸಿರುಗಟ್ಟಿ ಮೃತಪಟ್ಟಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಮೃತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದ ಅಗ್ನಿ ಅವಘಡ ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.