ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ 320 ಕಿಲೋ ಮೀಟರ್ ಉದ್ದದ ಕರಾವಳಿಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವನ್ನಾಗಿಸುವುದು ಸೇರಿದಂತೆ ಕರಾವಳಿ ಭಾಗದ ಅಭಿವೃದ್ಧಿಗೆ ಮುಂದಾಗಿರುವ ಇಕೋ ರೆಸ್ಟೋರೇಷನ್ ಸೊಸೈಟಿ (ಕೆಇಆರ್‌ಎಸ್)ಯು ಕರ್ನಾಟಕ ಕರಾವಳಿ ಸ್ಥಿತಿಸ್ಥಾಪಕ ಆರ್ಥಿಕತೆಯನ್ನು ಬಲಪಡಿಸುವ (ಕೆ-ಶೋರ್) ಯೋಜನೆ ಅನುಷ್ಠಾನಗೊಳಿಸುತ್ತಿದೆ.ರಾಜ್ಯದ ಕರಾವಳಿಯನ್ನು ಮಾಲಿನ್ಯ ಮುಕ್ತವಾಗಿಸುವ ಸಲುವಾಗಿ ಅರಣ್ಯ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ (ಆರ್‌ಡಿಪಿಆರ್) ಇಲಾಖೆ ಕೆಇಆರ್‌ಎಸ್ ರೂಪಿಸಿ ಕೆ-ಶೋರ್ ಯೋಜನೆ ಅನುಷ್ಠಾನಗೊಳಿಸುತ್ತಿವೆ. ಅದರಂತೆ ಕರಾವಳಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದರ ಜತೆಗೆ ಆರ್ಥಿಕತೆಗೆ ಉತ್ತೇಜನ ನೀಡಿ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಅದರೊಂದಿಗೆ ಸಮುದ್ರ ಕೊರತ ತಡೆ, ಕರಾವಳಿಯುದ್ದಕ್ಕೂ ವಿಶೇಷ ಪ್ರಬೇಧದ ಆಮೆಗಳು, ಡಾಲ್ಫಿನ್ ಸೇರಿದಂತೆ ಇನ್ನಿತರ ಜಲಚರಗಳ ಸಂರಕ್ಷಣೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ವಿಶ್ವಬ್ಯಾಂಕ್‌ನಿಂದ 800 ಕೋಟಿಗೂ ಹೆಚ್ಚಿನ ಆರ್ಥಿಕ ನೆರವು ಪಡೆಯಲಾಗುತ್ತಿದ್ದು, ಅದಕ್ಕೆ ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆ ಅನುಮೋದನೆಯನ್ನೂ ನೀಡಿದೆ. ಅಲ್ಲದೆ, ಕಳೆದ ವರ್ಷವೇ ಈ ಯೋಜನೆ ಘೋಷಿಸಲಾಗಿದ್ದು, ಇದೀಗ ಕೆಇಆರ್‌ಎಸ್ ಯೋಜನೆ ಅಡಿ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಯೋಜನೆ ಅಡಿಯಲ್ಲಿ ಅರಬ್ಬಿ ಸಮುದ್ರಕ್ಕೆ ನದಿಗಳು ಸೇರ್ಪಡೆಯಾಗುವ ಪ್ರದೇಶ, ಸಮುದ್ರ ತೀರ ಹಾಗೂ ಇನ್ನಿತರ ಕಡೆಗಳಲ್ಲಿ ಮ್ಯಾಂಗ್ರೋವ್, ಬಿದಿರು ಸೇರಿದಂತೆ ಇನ್ನಿತರ ಸಸಿಗಳನ್ನು ನೆಡಲಾಗುತ್ತದೆ. ಅದರ ಜತೆಗೆ ಕ್ಲವರ್ಟ್‌ಗಳು, ಚೆಕ್‌ಡ್ಯಾಂ, ಕ್ಯಾಸ್‌ವೇಗಳನ್ನು ನಿರ್ಮಿಸಿ ಕಡಲ ಕೊರೆತ ಸೇರಿದಂತೆ ಸಮುದ್ರ ಮತ್ತು ಅದರ ತೀರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.ಅದರ ಜತೆಗೆ ನದಿ ಭಾಗದಲ್ಲಿ, ಸಮುದ್ರ ತೀರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ಕಸದ ತಡೆಗೋಡೆ ನಿರ್ಮಾಣ, ಮೀನುಗಾರರು ಮತ್ತು ಸ್ಥಳೀಯ ಸಮುದಾಯಗಳನ್ನು ಒಳಗೊಂಡಂತೆ ಕಡಲ ತೀರ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತದೆ. ಹಾಗೆಯೇ, ಸಮುದ್ರಕ್ಕೆ ಸಮೀಪದ ಮತ್ತು ಸಮುದ್ರ ಸೇರುವ ನದಿ ಪಾತ್ರದಲ್ಲಿನ ದೇವಸ್ಥಾನಗಳು, ಯಾತ್ರಾ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗೂ ಯೋಜನೆ ಮೂಲಕ ಗಮನ ಹರಿಸಲಾಗುತ್ತದೆ.