ವಾಯುಮಾಲಿನ್ಯದಿಂದ ಬಂಜೆತನ ಹೆಚ್ಚಳ: ಪ್ರಸಾದ್

| Published : Dec 03 2024, 12:31 AM IST

ಸಾರಾಂಶ

ಹೊಗೆ ಸೇವನೆಯಿಂದ ಮನುಷ್ಯನ ಶ್ವಾಸಕೋಶದ ಮೇಲೆ ಪರಿಣಾಮವಾಗಲಿದೆ. ಅಲ್ಲದೆ, ಕಣ್ಣು ಮಂಜಾಗಲಿವೆ. ಕ್ಯಾನ್ಸರ್, ಅಸ್ತಮಾ ಮತ್ತು ದಮ್ಮಿನಂತಹ ಕಾಯಿಲೆಗಳು ಬರುತ್ತವೆ. ಬಂಜೆತನಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಜನರು ವಾಹನಗಳಿಗೆ ಗುಣಮಟ್ಟದ ಇಂಧನ ಬಳಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಾಯುಮಾಲಿನ್ಯದಿಂದ ಬಂಜೆತನ ನಿವಾರಣಾ ಕೇಂದ್ರಗಳು ತಲೆ ಎತ್ತಿವೆ. ವಿಷಾನಿಲ ಸೇವನೆಯಿಂದಾಗಿ ಬಂಜೆತನ ಕಾಣಿಸಿಕೊಳ್ಳುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಎಂ.ಜಿ.ಎನ್.ಪ್ರಸಾದ್ ತಿಳಿಸಿದರು.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಮಂಗಲ, ಚಿಕ್ಕ ಮಂಡ್ಯ ಸರ್ಕಾರಿ ಪ್ರೌಢಶಾಲೆ ಸಹಯೋಗದೊಂದಿಗೆ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಹೊಗೆ ಸೇವನೆಯಿಂದ ಮನುಷ್ಯನ ಶ್ವಾಸಕೋಶದ ಮೇಲೆ ಪರಿಣಾಮವಾಗಲಿದೆ. ಅಲ್ಲದೆ, ಕಣ್ಣು ಮಂಜಾಗಲಿವೆ. ಕ್ಯಾನ್ಸರ್, ಅಸ್ತಮಾ ಮತ್ತು ದಮ್ಮಿನಂತಹ ಕಾಯಿಲೆಗಳು ಬರುತ್ತವೆ. ಬಂಜೆತನಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಜನರು ವಾಹನಗಳಿಗೆ ಗುಣಮಟ್ಟದ ಇಂಧನ ಬಳಸಬೇಕು ಎಂದು ಸಲಹೆ ನೀಡಿದರು.

ದೆಹಲಿ ಅಕ್ಕಪಕ್ಕದ ರಾಜ್ಯಗಳು ಭಾರೀ ಪ್ರಮಾಣದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದು ಹಾಗೂ ವಾಹನ ದಟ್ಟಣೆ ಹೆಚ್ಚಿರುವುದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ಸಣ್ಣಪುಟ್ಟ ವೈಯಕ್ತಿಕ ಬಳಕೆಗೆ ಗಾಡಿಗಳನ್ನು ಬಳಸುವುದನ್ನು ನಿಲ್ಲಿಸಿ ಸಮೂಹ ಸಾರಿಗೆಗಳನ್ನು ಬಳಸುವುದರಿಂದ ಅನಗತ್ಯ ವೆಚ್ಚ ತಪ್ಪಿಸಬಹುದು, ಜೊತೆಗೆ ವಾಯುಮಾಲಿನ್ಯವನ್ನೂ ತಡೆಗಟ್ಟಬಹುದು ಎಂದು ಹೇಳಿದರು.

ಮೈಸೂರಿನ ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ.ಪೂರ್ಣಿಮಾ ಅವರು ಮಾತನಾಡಿ, ವಾಯು ಮಾಲಿನ್ಯದ ಕಾರಣದಿಂದ ಓಜೋನ್ ಪದರವು ಕ್ಷೀಣಿಸುತ್ತಿದೆ. ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂದು ತಿಳಿಸಿದರು.

ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕುರಿತು ಚಿಕ್ಕಮಂಡ್ಯ ಗ್ರಾಮದಲ್ಲಿ ಸೈಕಲ್ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.

ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಜೆ.ಪಿ.ಪ್ರಕಾಶ್, ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್.ದೇವರಾಜು, ಪರಿಸರ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಎಂ.ಯೋಗೀಶ್, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಪರಿಸರ ರಮೇಶ್, ಕಲ್ಕುಣಿ ಲೋಕೇಶ್ ಇತರರಿದ್ದರು.