ಸೊರಬದ ಶಿಗ್ಗಾದಲ್ಲಿ ಕದಂಬರ ಅವಧಿಯ ಶಾಸನ ಪತ್ತೆ

| Published : Feb 23 2025, 12:32 AM IST

ಸಾರಾಂಶ

ತಾಲೂಕಿನ ಶಿಗ್ಗಾ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಬಳಿ ೬ನೇ ಶತಮಾನದ ಆದಿ ಕದಂಬರ ಅವಧಿಯ ಶಾಸನ ಪತ್ತೆಯಾಗಿದೆ.

ಕಲ್ಲೇಶ್ವರ ದೇವಾಲಯದ ಬಳಿ 6ನೆಯ ಶತಮಾನದ್ದು ಎನ್ನಲಾದ ಲಿಪಿ । ರಮೇಶ ಬಿ. ಹಿರೇಜಂಬೂರು, ಮಂಜಪ್ಪ ಚುರ್ಚಿ ಗುಂಡಿ ಶೋಧ

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಶಿಗ್ಗಾ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಬಳಿ ೬ನೇ ಶತಮಾನದ ಆದಿ ಕದಂಬರ ಅವಧಿಯ ಶಾಸನ ಪತ್ತೆಯಾಗಿದೆ.

ಕೆಲವು ವರುಷಗಳ ಹಿಂದೆ ಶ್ರೀ ಕಲ್ಲೇಶ್ವರ ದೇವಾಲಯದ ಮರು ನಿರ್ಮಾಣ ಕಾರ್ಯಕೈಗೊಂಡಾಗ ಶಾಸನದ ಜೊತೆ ಹಲವಾರು ವೀರಗಲ್ಲುಗಳೂ ದೊರಕ್ಕಿದ್ದವು. ಸ್ಥಳೀಯರು ಅವುಗಳನ್ನು ಸಂರಕ್ಷಿಸಿದ್ದರು. ಈಚೆಗೆ ಇತಿಹಾಸ ಸಂಶೋಧಕರಾದ ರಮೇಶ ಬಿ. ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿ ಗುಂಡಿ ಕ್ಷೇತ್ರ ಕಾರ್ಯಕ್ಕೆ ಹೋದಾಗ ಈ ಶಾಸನವನ್ನು ೬ನೇ ಶತಮಾನದ ಕದಂಬರ ಅವಧಿಯ ಶಾಸನವೆಂದು ಗುರುತಿಸಿದ್ದಾರೆ.

ದೇವಾಲಯ ನಿರ್ಮಾಣಕ್ಕೆ ಬಳಸಲಾದ ಚೌಕಾಕಾರದ ಕಂಬದ ಒಂದು ಮುಖದ ಮೇಲೆ ೨೦ ಸಾಲುಗಳನ್ನು ಹೊಂದಿದ್ದು ಪ್ರತಿ ಸಾಲಿನ ಎಡ ಮತ್ತು ಬಲಬದಿಯ ಹಲವು ಅಕ್ಷರಗಳು ದೊರಕುವುದಿಲ್ಲ. ಮೊದಲಿಗೆ ಹೆಚ್ಚು. ಅಗಲವಿದ್ದ ಈ ಕಂಬದ ಮೇಲೆ ಶಾಸನ ಬರೆದಿರಬೇಕು. ನಂತರ ಈ ಕಂಬದ ಎರಡೂ ಪಾರ್ಶ್ವಗಳನ್ನು ಕೆತ್ತಿ ದೇವಾಲಯದ ಮರುನಿರ್ಮಾಣಕ್ಕೆ ಚಿಕ್ಕದಾಗಿ ಮಾಡಿರಬಹುದಾಗಿದೆ. ಹಾಗಾಗಿ ಪೂರ್ಣ ಸಾಲಿನ ಅಕ್ಷರಗಳು ಕಂಡು ಬರುವುದಿಲ್ಲ. ಶಾಸನದ ಅಕ್ಷರಗಳು ೬ನೇ ಶತಮಾನದ ಕನ್ನಡ ಲಿಪಿಯನ್ನು ಹೋಲುತ್ತವೆ. ಶಾಸನದ ಮೇಲಿನ ಸಾಲುಗಳಲ್ಲಿ ಕದಂಬ ವಂಶದ ಕುರಿತಾದ ಮಾಹಿತಿ ಇದೆ. ಮಾತೃಗಣ, ಮಾನವಸ್ಯ ಗೋತ್ರ- ಚರ್ಚಾ ಪಾರಂಗತರು ಮುಂತಾದ ವರ್ಣನೆಗಳು ಕಂಡುಬರುತ್ತದೆ.

ಇದೇ ಸ್ಥಳದಲ್ಲಿ ೧೨-೧೩ನೇ ಶತಮಾನದ ಐದು ವೀರಗಲ್ಲುಗಳು ದೊರಕಿದ್ದು ಕಲ್ಯಾಣಿ ಚಾಲುಕ್ಯ ಹಾಗೂ ಸೇವುಣರ ಅವಧಿಗೆ ಸೇರಿವೆ. ಅವುಗಳಲ್ಲಿ ಎರಡು ಉದ್ದರೆಯ ಎಕ್ಕಲರಸನ ಉಲ್ಲೇಖ ಹೊಂದಿದ್ದು ತುರುಗೋಳ್ ವೀರಗಲ್ಲುಗಳಾಗಿವೆ. ರಾಷ್ಟ್ರಕೂಟರ ಅವಧಿಯ ಮೂರು ಗೋಸಾಸ ಕಲ್ಲುಗಳು ಹಾಗೂ ನಂತರ ಅವಧಿಯ ಹಲವಾರು ಮಹಾಸತಿ ಕಲ್ಲುಗಳು ಸಹ ಗ್ರಾಮದಲ್ಲಿ ಕಂಡು ಬರುತ್ತವೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.

ವಿಶೇಷ ಆತ್ಮಬಲಿ ಶಿಲ್ಪ:

ಶಿಗ್ಗ ಗ್ರಾಮದ ಹಳೆಯ ಹೊಂಡದ ಬಳಿ ನಾಲ್ಕು ಅಡಿ ಎತ್ತರದ ಸ್ಮಾರಕ ಶಿಲ್ಪವಿದ್ದು ಸಿಗ್ಗದ ಬಾವ ಗಾವುಂಡನು ಸೂರ್ಯಗ್ರಹಣದ ದಿನ ಅಗ್ನಿಗೆ ಆಹುತಿಯಾಗಿ ಆತ್ಮ ಬಲಿದಾನ ಹೊಂದಿದ್ದಾನೆ. ಊರಿನ ಒಳಿತಿಗೋ ಅಥವಾ ಇನ್ನಾರದೋ ಒಳಿತನ್ನ ಬಯಸಿ ಈ ರೀತಿಯ ಆತ್ಮ ಬಲಿಗಳು ಇತಿಹಾಸದಲ್ಲಿ ವಿಶೇಷವಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಶಿಲ್ಪದಲ್ಲಿ ಸೂರ್ಯನನ್ನು ಒಂದು ಸರ್ಪವು ನುಂಗಲು ಸಾಗುತ್ತಿರುವ ಚಿತ್ರಣ ಸೂರ್ಯಗ್ರಹಣದ ಸಂಕೇತವಾಗಿದೆ.

ಶೋಧನೆಗೆ ಶಿಗ್ಗ ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪ, ಲೋಕೇಶ ಬಂಗಾರಿ, ಮಲೆನಾಡು ಪ್ರೌಢ ಶಾಲೆ ಹಿರೇಜಂಬೂರಿನ ಮುಖ್ಯ ಶಿಕ್ಷಕರಾದ ತೇಜಪ್ಪ ಮತ್ತು ಬಿ.ಕೆ.ಶಿವಕುಮಾರ್ ಸಹಕಾರ ನೀಡಿರುತ್ತಾರೆ. ಅಧ್ಯಯನಕ್ಕೆ ಡಾ. ಶ್ರೀನಿವಾಸ್ ಪಾಡಿಗಾರ್, ಡಾ. ಜಗದೀಶ್ ಅಗಸಿಬಾಗಿಲು, ಡಾ ಶೇಜೇಶ್ವರ ನಾಯಕ್ ಮತ್ತು ಶ್ರೀಪಾದ್ ಬಿಚ್ಚುಗತ್ತಿ ಮಾರ್ಗದರ್ಶನ ನೀಡಿರುತ್ತಾರೆ.

ಶಿಗ್ಗಾ ಶಾಸನ ಅಪೂರ್ವವಾದುದು. ಚಂದ್ರಗುತ್ತಿ ತೆಲಗುಂದದಲ್ಲಿ ಕದಂಬ ಶಾಸನವೊಂದನ್ನು ಈ ಹಿಂದೆ ಧಾರವಾಡ ಕೆಐಆರ್ ಪ್ರೊ.ದಿ.ರಘುನಾಥ ಭಟ್ಟರು ಗುರುತಿಸಿದ್ದರು. ನಂತರ ಸಿಗ್ಗಾ ಸಮೀಪ ಕವಡಿಯಲ್ಲಿ ಕೂಡ ಕದಂಬ ಶಾಸನ ದೊರೆತಿದೆ. ಪ್ರಾಚ್ಯ ಇಲಾಖೆ ಅಧಿಕಾರಿ ಡಾ.ಶೇಜೇಶ್ವರ ಕೂಡ ಕದಂಬ ಕಾಲದ ಹಲವು ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಾಲಿಗೆ ಈಗ ಶಿಗ್ಗಾ ಶಾಸನ ಸೇರ್ಪಡೆಯಾಗಿದೆ.

ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ.