ಸಾರಾಂಶ
ಮಂಡ್ಯ ಮಂಜುನಾಥ
ಮಂಡ್ಯ : ಮೈಷುಗರ್ ಪುನಶ್ಚೇತನಗೊಳಿಸುವ, ಹೊಸ ಕಾರ್ಖಾನೆ ಸ್ಥಾಪನೆ ಮಾಡುವ ಮಾತುಗಳ ನಡುವೆಯೇ ತೆರೆಯ ಹಿಂದೆ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿರುವ ಬಗೆಗಿನ ಮಾಹಿತಿ ಎಲ್ಲೆಡೆ ಸಂಚಲನ ಸೃಷ್ಟಿಸಿದೆ.
ಕಾರ್ಖಾನೆಯನ್ನು ಗುತ್ತಿಗೆ ಪುನರ್ವಸತಿ ಕಾರ್ಯಾಚರಣೆ ಮತ್ತು ವರ್ಗಾವಣೆ (ಎಲ್‌ಆರ್‌ಒಟಿ) ಅಡಿಯಲ್ಲಿ ೪೦ ವರ್ಷಗಳ ಕಾಲ ಖಾಸಗಿಯಾಗಿ ಗುತ್ತಿಗೆ ನೀಡುವುದಕ್ಕೆ ಸರ್ಕಾರ ತರಾತುರಿಯ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಮೈಷುಗರ್ ಕಬ್ಬು ಅರೆಯುವಿಕೆಯನ್ನು ಎಲ್‌ಆರ್‌ಒಟಿ ಮಾದರಿಯಲ್ಲಿ ನಡೆಸುವುದಕ್ಕೆ ಟೆಂಡರ್ ಕರೆಯುವುದು ಮತ್ತು ಎಥೆನಾಲ್ ಘಟಕವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದಕ್ಕೆ ಆರ್ಥಿಕ ಇಲಾಖೆ ಚಿಂತನೆ ನಡೆಸಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಇದಕ್ಕೆ ಅನುಮೋದನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
೨೦೨೪-೨೫ನೇ ಸಾಲಿನಲ್ಲಿ ಆಯವ್ಯಯ ಘೋಷಣೆಗಳ ಕಂಡಿಕೆ ೩೨೭ರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದ ಆರ್ಥಿಕ ಇಲಾಖೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಭಿಪ್ರಾಯವನ್ನು ಆಡಳಿತ ಇಲಾಖೆಗೆ ನೀಡಿರುವುದನ್ನು ಆರ್ಥಿಕ ಇಲಾಖೆ ಉನ್ನತಾಧಿಕಾರಿಯೊಬ್ಬರು ಖಚಿತಪಡಿಸಿರುವುದಾಗಿ ತಿಳಿದುಬಂದಿದೆ.
35 ಹಂಗಾಮಿನಲ್ಲಿ 34,೭38 ಕೋಟಿ ರು. ನಷ್ಟ:
ಮೈಷುಗರ್ ಕಾರ್ಖಾನೆ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, 1950-51ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಒಟ್ಟು ೩೫ ಹಂಗಾಮುಗಳಲ್ಲಿ 34,738.90 ಲಕ್ಷ ರು.ಗಳ ಕ್ರೋಢೀಕೃತ ನಷ್ಟ ಅನುಭವಿಸಿತ್ತು. ಪ್ರಸ್ತುತ 273.48 ಕೋಟಿ ರು. ಸಾಲವನ್ನೂ ಹೊಂದಿತ್ತು. ಈ ಆರ್ಥಿಕ ಸಂಕಷ್ಟದಿಂದ ಚೆಸ್ಕಾಂಗೆ ಪಾವತಿಸಬೇಕಿದ್ದ53.46 ಕೋಟಿ ರು. ವಿದ್ಯುತ್ ಬಿಲ್ ಪಾವತಿಸಲು ಕಾರ್ಖಾನೆಗೆ ಸಾಧ್ಯವಾಗಿರಲಿಲ್ಲ . ಕಾರ್ಖಾನೆಯನ್ನು ನಷ್ಟದಿಂದ ಹೊರತರುವ ಸಲುವಾಗಿ ವಿದ್ಯುತ್ ಬಿಲ್ ಮನ್ನಾಗೆ ಸಚಿವ ಸಂಪುಟವೂ ಅನುಮೋದನೆ ನೀಡಿತ್ತು.
ಹಣ ಹೂಡಿಕೆ ಮಾಡಿರುವುದು ಬಹಿರಂಗ:
ವಿದ್ಯುತ್ ಬಾಕಿ ಮನ್ನಾ ಒಪ್ಪಿದರೆ ಆರ್ಥಿಕ ಪರಿಣಾಮಗಳು ಬೀರಲಿದೆ ಎಂಬ ಎಚ್ಚರಿಕೆಯನ್ನು ಆರ್ಥಿಕ ಇಲಾಖೆ ಸರ್ಕಾರಕ್ಕೆ ನೀಡಿತ್ತು. ಆದರೆ, ಸರ್ಕಾರ ಕಾರ್ಖಾನೆಗೆ ಆರ್ಥಿಕ ಸಹಾಯವನ್ನು ಮಾತ್ರ ಒದಗಿಸಿದ್ದು, ಸರ್ಕಾರ ಕಾರ್ಖಾನೆಯಲ್ಲಿ ಯಾವುದೇ ಹೂಡಿಕೆ ಮಾಡಿಲ್ಲವೆಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿತ್ತು.
ಆದರೆ, ವಾಸ್ತವದಲ್ಲಿ ಹಣಕಾಸು ಲೆಕ್ಕದಲ್ಲಿ 335.78 ಕೋಟಿ ರು. ಹಣವನ್ನು ಸರ್ಕಾರ ಹೂಡಿಕೆ ಮಾಡಿರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಬಹಿರಂಗಪಡಿಸಿದೆ. ಮೈಷುಗರ್ ಕಾರ್ಖಾನೆ 2016-17 ರ ಅಂತ್ಯಕ್ಕೆ 416.67 ಕೋಟಿ ರು., 2017-18ರಲ್ಲಿ 289.43 ಕೋಟಿ ರು., 2018 -19 ರಲ್ಲಿ 460.89 ಕೋಟಿ ರು. ನಷ್ಟ ಅನುಭವಿಸಿದ್ದು, 2019 - 20 ರಲ್ಲಿ ಸರ್ಕಾರ335.78 ಕೋಟಿ ರು. ಹಣವನ್ನು ಹೂಡಿಕೆ ಮಾಡಿರುವುದಾಗಿ ವರದಿಯಲ್ಲಿ ವಿವರಿಸಿತ್ತು.
೨೦೨೦ರಲ್ಲೇ ಖಾಸಗೀಕರಣಕ್ಕೆ ಬಿಜೆಪಿ ಸರ್ಕಾರ ಅನುಮತಿ:
ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸೆಪ್ಟೆಂಬರ್ 2020 ರಲ್ಲಿ ನೀಡಿರುವ ಉತ್ತರದಲ್ಲಿ ದುಡಿಯುವ ಬಂಡವಾಳ ಕೊರತೆಯಿಂದಾಗಿ ಕಂಪನಿ ನಷ್ಟವನ್ನು ಅನುಭವಿಸಿದೆ. 2015 - 16 ಮತ್ತು 2016 - 17ರ ಅವಧಿಯಲ್ಲಿ ಕಬ್ಬು ಅರೆಯುವಿಕೆ ನಿಲ್ಲಿಸಲಾಯಿತು. ಆ ವೇಳೆ ರೈತರ ಹಿತದೃಷ್ಟಿ ಮತ್ತು ಕಾರ್ಖಾನೆ ಘಟಕಗಳ ಪುನಶ್ಚೇತನ, ನೌಕರರ ಸಂಬಳ, ವೇತನ, ಪಿಂಚಣಿ ಪಾವತಿಗೆ ಸರ್ಕಾರ 2017 - 18 ರಲ್ಲಿ 57 ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ ಅದರಲ್ಲಿ 17 ಕೋಟಿ ರು.ಗಳನ್ನು ಸಾಲವಾಗಿ ಪರಿಗಣಿಸಲಾಗಿತ್ತು. ಕಂಪನಿಯನ್ನು ಗುತ್ತಿಗೆ ಪುನರ್ವಸತಿ, ಕಾರ್ಯಾಚರಣೆ ಮತ್ತು ವರ್ಗಾವಣೆ (ಎಲ್‌ಆರ್‌ಒಟಿ) ಅಡಿ 40 ವರ್ಷಗಳ ಕಾಲ ಖಾಸಗಿಯಾಗಿ ಗುತ್ತಿಗೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಕಾರ್ಖಾನೆಯ 285 ಖಾಯಂ ಸಿಬ್ಬಂದಿಯಲ್ಲಿ 208 ಜನರಿಗೆ ಸ್ವಯಂ ನಿವೃತ್ತಿ ನೀಡುವ ಪ್ರಸ್ತಾಪವಿರುವುದನ್ನು ತಿಳಿಸಲಾಗಿತ್ತು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಎಲ್‌ಆರ್‌ಓಟಿ ಆಧಾರದ ಮೇಲೆ 2021 -22 ನೇ ಸಾಲಿನಿಂದಲೇ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು 2020 ರ ನವೆಂಬರ್ 18 ರಂದು ಅನುಮತಿ ನೀಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಗುತ್ತಿಗೆದಾರರು 2021 - 22 ನೇ ಸಾಲಿನಿಂದ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು.
ಆದರೆ, ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಅವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವಕ್ಕೆ ಕಾರ್ಖಾನೆಯ ವ್ಯಾಪ್ತಿಯ ಕಬ್ಬು ಬೆಳೆಗಾರರು, ಕಂಪನಿಯ ಷೇರುದಾರರು ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.
ಬಿಜೆಪಿಯಲ್ಲೇ ಹಾದಿಯಲ್ಲೇ ಕಾಂಗ್ರೆಸ್ ಸರ್ಕಾರ:
2023 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪುನಶ್ಚೇತನಗೊಳಿಸುವ ಸಲುವಾಗಿ ೫೦ ಕೋಟಿ ರು. ಹಣ ಬಿಡುಗಡೆ ಮಾಡಿತು. 2024 ರಲ್ಲಿ ಸರ್ಕಾರದ ಹಣಕಾಸಿನ ನೆರವಿಲ್ಲದೆ ಕಬ್ಬು ಅರೆಯುವಲ್ಲಿ ಯಶಸ್ವಿಯೂ ಆಗಿತ್ತು. ತೆರಿಗೆ ಮನ್ನಾ. ವಿದ್ಯುತ್ ಬಾಕಿ ಮನ್ನಾ, ಸಹ ವಿದ್ಯುತ್ ಘಟಕದ ಸಮರ್ಥ ಕಾರ್ಯನಿರ್ವಹಣೆಯಿಂದ ಕಾರ್ಖಾನೆ ಒಂದು ಹಂತಕ್ಕೆ ಚೇತರಿಕೆ ಕಂಡುಬರುತ್ತಿರುವ ಸಮಯದಲ್ಲೇ ಆರ್ಥಿಕ ಇಲಾಖೆ ಎಚ್ಚರಿಕೆ ಹಾಗೂ ಸಿಎಜಿ ವರದಿಯಲ್ಲಿನ ಅಂಶಗಳು ಕಾರ್ಖಾನೆ ಪುನಶ್ಚೇತನದ ಮೇಲೆ ಕರಾಳ ಛಾಯೆ ಬೀರುವಂತಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನೇ ಎತ್ತಿಹಿಡಿಯಲು ಮುಂದಾಗಿರುವಂತೆ ಕಂಡುಬರುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಸರ್ಕಾರವು ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಅಂತಿಮ ತೀರ್ಮಾನ ಪ್ರಕಟಿಸಿದಲ್ಲಿ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಮೈಷುಗರ್ ಕಾರ್ಖಾನೆಯನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಸರ್ವ ಪ್ರಯತ್ನವನ್ನೂ ನಡೆಸಿದ್ದೇವೆ. ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎನ್ನುವುದು ಶುದ್ಧ ಸುಳ್ಳು. ಇದಕ್ಕೆಲ್ಲಾ ರೈತರು ಆತಂಕಪಡುವ ಅಗತ್ಯವಿಲ್ಲ. ಕಾರ್ಖಾನೆ ಈ ಸಾಲಿನಲ್ಲಿ ಸರ್ಕಾರದ ಹಣಕಾಸಿನ ನೆರವನ್ನು ಬಯಸದೆ ಸಮರ್ಥವಾಗಿ ಕಬ್ಬು ನುರಿಸಿದೆ. ಕಾರ್ಖಾನೆ ಮೇಲಿನ ಆದಾಯ ತೆರಿಗೆ, ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲಾಗಿದೆ. ಮೈಷುಗರ್ ಸಮರ್ಥ ಮುನ್ನಡೆಗೆ ಇಷ್ಟೆಲ್ಲಾ ಕ್ರಮಗಳನ್ನು ವಹಿಸಿರುವಾಗ ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಕಾರ್ಖಾನೆ ಪುನಶ್ಚೇತನ ಸಂಬಂಧ ಎರಡು ವರದಿಗಳು ಸರ್ಕಾರದ ಮುಂದಿದೆ. ಅದನ್ನು ಶೀಘ್ರದಲ್ಲೇ ಕ್ಯಾಬಿನೇಟ್ ಮುಂದಿಟ್ಟು ತೀರ್ಮಾನ ಕೈಗೊಳ್ಳಲಾಗುವುದು.
- ಎನ್.ಚಲುವರಾಯಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು
ಮೈಷುಗರ್ ಸರ್ಕಾರದ ಆಸ್ತಿ. ಸಾರ್ವಜನಿಕರ ಆಸ್ತಿ. ಕಾರ್ಖಾನೆ ವಿಷಯ ತೆರೆದ ಪುಸ್ತಕದಂತಿರಬೇಕು. ಕಬ್ಬು ಅರೆಯುವುದಕ್ಕೆ ಇನ್ನೂ ಯಾವುದೇ ಪೂರ್ವ ಸಿದ್ಧತೆಗಳು ಆರಂಭಗೊಂಡಿಲ್ಲ. ಬಾಯ್ಲರ್ ದುರಸ್ತಿಗೆ ಸರ್ಕಾರ ಹಣ ಬಿಡುಗಡೆಯಾಗಿಲ್ಲವೆಂದು ಅಧ್ಯಕ್ಷರು ಹೇಳುತ್ತಿದ್ದಾರೆ. ಇಂತಹ ಗೊಂದಲಗಳನ್ನು ಸೃಷ್ಟಿಸುವುದು ಬೇಡ. ಖಾಸಗೀಕರಣದ ಆಲೋಚನೆಗಳನ್ನು ಮಾಡಕೂಡದು. ಕಾರ್ಖಾನೆ ಸಕಾಲಕ್ಕೆ ಆರಂಭವಾಗುವ ಬಗ್ಗೆ ಕ್ರಮ ವಹಿಸಬೇಕು. ಈಗ ಬಂದಿರುವ ಸಿಎಜಿ ವರದಿಗೆ ಸ್ಪಷ್ಟೀಕರಣ ಕೊಡಬೇಕು.
- ಸುನಂದಾ ಜಯರಾಂ, ರೈತ ನಾಯಕಿ
ಮೈಷುಗರ್ ಖಾಸಗೀಕರಣದ ಬಗ್ಗೆ ಗೊಂದಲ ಮೂಡಿಸುವುದು ಸರಿಯಲ್ಲ. ಇದರಿಂದ ಜನರು ಮತ್ತು ರೈತರಲ್ಲಿ ಪದೇ ಪದೇ ಆತಂಕ ಸೃಷ್ಟಿಯಾಗುತ್ತದೆ. ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ತೆರೆದಿಡಲಿ. ಕಳೆದ ಸಾಲಿನಲ್ಲಿ ಸರ್ಕಾರದ ಹಣವನ್ನು ಬಯಸದೆ ಸ್ವಾವಲಂಬಿಯಾಗಿ ಕಬ್ಬು ನುರಿಸುವ ಮೂಲಕ ಕಾರ್ಖಾನೆಯ ಪುನಶ್ಚೇತನದ ಆಶಾಕಿರಣ ಮೂಡಿದೆ. ತೆರಿಗೆ ಮನ್ನಾ. ವಿದ್ಯುತ್ ಬಾಕಿ ಮನ್ನಾದಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ. ಆದರೂ ಖಾಸಗೀಕರಣದ ಗುಮ್ಮ ಕಾಡುತ್ತಿರುವುದು ಆತಂಕ ಮೂಡಿಸಿದೆ.
- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ