ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮುಂಗಾರು ಹಂಗಾಮು ಅರಣ್ಯಿಕರಣಕ್ಕೆ ಸೂಕ್ತ ಸಮಯ. ಸಾಮಾಜಿಕ ಅರಣ್ಯ ಇಲಾಖೆಯಿಂದ ಸದ್ದಿಲ್ಲದೇ ಸಸಿಗಳ ಪೋಷಣೆಯು ನಡೆದಿದೆ. ತುಮಕೂರು ಜಿಲ್ಲೆಯ ೧೦ ತಾಲೂಕಿನಲ್ಲಿ ೬ ಲಕ್ಷ ೮೨ಸಾವಿರ ಸಸಿಗಳ ನಾಟಿಗೆ ಸಿದ್ಧವಾಗಿವೆ. ಅದರಲ್ಲಿ ೩೩೩ ಗ್ರಾಪಂಗೆ ೩ ಲಕ್ಷ ೬೦ ಸಾವಿರ ಮೀಸಲಿಟ್ಟು ಹಸಿರು ಗ್ರಾಮ ಯೋಜನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದ ಈಗಾಗಲೇ ಚಾಲನೆ ಸಿಕ್ಕಿದೆ. ಹಸಿರು ಗ್ರಾಮ ಅಭಿಯಾನದ ಮೂಲಕ ಕಲ್ಪತರು ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಸೃಷ್ಟಿಸಲು ಜಿಲ್ಲಾಡಳಿತ, ಜಿಪಂ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆ ಸಜ್ಜಾಗಿದೆ.ತುಮಕೂರು ಜಿಲ್ಲೆಯಲ್ಲಿ ಕಳೆದ ೪೦ ವರ್ಷದಲ್ಲೇ ಇಲ್ಲದಿರುವ ಬಿಸಿಲಿನ ತಾಪ ಪ್ರಸ್ತುತ ವರ್ಷ ದಾಖಲಾಗಿದೆ. ಬಿಸಿಲಿನ ತಾಪ ಕಡಿಮೆ ಮಾಡುವ ಉದ್ದೇಶದಿಂದ ಹಸಿರು ಗ್ರಾಮ ಅಭಿಯಾನದಡಿ ಸರ್ಕಾರಿ ಶಾಲೆ, ಗೋಮಾಳ, ಅಂಗನವಾಡಿ ಕೇಂದ್ರ, ಸಂತೆ ಮೈದಾನ, ದೇವಾಲಯ, ಆಟದ ಮೈದಾನ, ಸರ್ಕಾರಿ ಕಚೇರಿ, ಸ್ಮಶಾನ ಮತ್ತು ರಸ್ತೆಯ ಎರಡು ಬದಿಗಳಲ್ಲಿ ಪ್ರತಿ ಗ್ರಾಪಂಗೆ ಕನಿಷ್ಠ ೧ ಸಾವಿರ ಸಸಿ ನೆಟ್ಟು ೩ ವರ್ಷಗಳ ಕಾಲ ಪೋಷಣೆಗೆ ವಿಶೇಷ ಕಾಳಜಿ ವಹಿಸಲಾಗಿದೆ.ಸಾಮಾಜಿಕ ವಲಯ ಅರಣ್ಯದಿಂದ ತುಮಕೂರು ಜಿಲ್ಲೆಯ ೧೦ ತಾಲೂಕಿನಲ್ಲಿ ೧೯ ಕಡೆ ಸಸಿ ಬೆಳೆಸುವ ನರ್ಸರಿಗಳಿವೆ. ೧೯ ನರ್ಸರಿಗಳಲ್ಲಿ ಹಲಸು, ಮಾವು, ಹೊಂಗೆ, ಬೇವು, ಜಮ್ಮು ನೆರಳೆ, ಬೆಟ್ಟದ ನೆಲ್ಲಿ, ಮಹಾಘನಿ, ಕಾಡು ಬಾದಾಮಿ, ಹೊನ್ನೆ, ಆಲ, ಶ್ರೀಗಂಧ, ಸಂಪಿಗೆ, ರಕ್ತಚಂಧನ, ಗೋಣಿ, ಮುತ್ತುಗ ಸೇರಿದಂತೆ ೪೭ ಬಗೆಯ ೬*೯, ೮*೧೨, ೧೦*, ೧೪*೨೦ಅಡಿ ಎತ್ತರದ ೬ ಲಕ್ಷದ ೬೨ ಸಾವಿರ ಸಸಿಗಳ ಫೋಷಣೆ ಮಾಡಿ ಸರ್ಕಾರಿ ಸ್ಥಳ ಮತ್ತು ರೈತರಿಗೆ ವಿತರಿಸಲು ಇಲಾಖೆ ಸಜ್ಜಾಗಿದೆ.ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಬೆಳೆಸಿರುವ ೬ ಲಕ್ಷ ೮೨ ಸಾವಿರ ಸಸಿಗಳಿಗೆ ನರೇಗಾ, ಕರ್ನಾಟಕ ಸಾಮಾಜಿಕ ಅರಣ್ಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಹಸಿರು ಕರ್ನಾಟಕ ಸೇರಿ ಪಂಚ ಯೋಜನೆಯ ಅನುದಾನದ ಆಸರೆಯಿದೆ. ಪಂಚ ಯೋಜನೆಯಿಂದ ೬ ಲಕ್ಷ ೮೨ ಸಾವಿರ ಸಸಿಗಳ ಸಮಗ್ರ ಪೋಷಣೆಗಾಗಿ ೧೨ ತಿಂಗಳ ಅವಧಿಯಲ್ಲಿ ೩ ಕೋಟಿ ರು. ಅಧಿಕ ಅನುದಾನ ಬಳಕೆಯಾಗಿ ಕಲ್ಪತರು ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಸೃಷ್ಟಿಸಲು ಅರಣ್ಯ ಇಲಾಖೆಗೆ ಸಿದ್ದವಾಗಿದೆ. ಗ್ರಾಮೀಣಾಭಿವೃದ್ದಿ-ಪಂಚಾಯತ್ ರಾಜ್ ಮತ್ತು ಸಾಮಾಜಿಕ ವಲಯ ಅರಣ್ಯ ಸಹಯೋಗದಲ್ಲಿ ೪೭ ವಿವಿಧ ಜಾತಿಯ ೩ ಲಕ್ಷ ೬೮ ಸಾವಿರ ಸಸಿಗಳನ್ನು ಸರ್ಕಾರಿ ಶಾಲೆ, ಕಟ್ಟಡ, ಆಟದ ಮೈದಾನ, ಸಂತೆ ಆವರಣ, ದೇವಸ್ಥಾನ, ಸ್ಮಶಾನ, ಘನತಾಜ್ಯ ಘಟಕ, ಆಶ್ರಯ ಬಡಾವಣೆ, ಸರ್ಕಾರಿ ಒಡೆತನದ ಜಾಗದಲ್ಲಿ ಪ್ರತಿ ಗ್ರಾಪಂಗೆ ೧ಸಾವಿರ ಸಸಿಗಳನ್ನು ಬೆಳೆಸುವ ಹಸಿರು ಗ್ರಾಮ ಯೋಜನೆಗೆ ಕೊರಟಗೆರೆಯಲ್ಲಿ ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ. ಪ್ರತಿ ತಿಂಗಳು ಸಸಿಗಳ ಆರೈಕೆಯ ವರದಿ ಸಲ್ಲಿಸುವಂತೆ ಜಿಪಂ ಸಿಇಒಗೆ ಸೂಚಿಸಿದ್ದಾರೆ.ಪ್ರತಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಆವರಣದಲ್ಲಿ ಕನಿಷ್ಠ ೩೦೦ ಸಸಿಗಳು ಜವಾಬ್ದಾರಿ ಗ್ರಾಪಂಯದ್ದು. ಸರ್ಕಾರಿ ಕಟ್ಟಡ ಮತ್ತು ಸರ್ಕಾರಿ ಒಡೆತನದ ಜಾಗದಲ್ಲಿ ೨೦೦ ಸಸಿಗಳ ಜವಾಬ್ದಾರಿ ಆಯಾ ಇಲಾಖೆ ಮುಖ್ಯಸ್ಥರು ವಹಿಸಬೇಕು. ಸಂತೆ ಮೈದಾನ, ಆಟದ ಮೈದಾನ ಮತ್ತು ಸ್ಮಶಾನ ಮತ್ತು ರಸ್ತೆ ಬದಿ-೫೦೦ ಸಸಿ ಸೇರಿ ಒಟ್ಟು ೧ ಸಾವಿರ ಸಸಿಗಳ ಪೋಷಣೆಯ ಜವಾಬ್ದಾರಿ ಮತ್ತು ಮೇಲುಸ್ತುವಾರಿಯು ೩ ವರ್ಷಗಳ ತನಕ ಸಾಮಾಜಿಕ ವಲಯ ಅರಣ್ಯಗೆ ಸೇರಿದೆ. ಸಸಿಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಫಲಶೃತಿಗೆ ಹಸಿರು ಗ್ರಾಮ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹಸಿರು ಗ್ರಾಮ ಅಭಿಯಾನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ. ಕೊರಟಗೆರೆಯ ೨೪ ಗ್ರಾಪಂಗಳಿಗೆ ತಲಾ ೧ ಸಾವಿರದಂತೆ ಸಸಿಗಳ ಹಸ್ತಾಂತರ ಮಾಡಿ ನಾಟಿ ಕೆಲಸ ಪ್ರಾರಂಭವಾಗಿದೆ. ಉಳಿದಂತೆ ಸರ್ಕಾರಿ ಗೋಮಾಳ, ರಸ್ತೆಯ ಬದಿ ಮತ್ತು ಕೆರೆ ಅಂಗಳದಲ್ಲಿ ಇಲಾಖೆಯಿಂದ ಸಸಿಗಳ ನಾಟಿಗೆ ರೂಪುರೇಷು ಸಿದ್ದವಾಗಿದೆ.ಶಿಲ್ಪಾ.ಎನ್.ಇ. ವಲಯ ಅರಣ್ಯಾಧಿಕಾರಿ. ಕೊರಟಗೆರೆ ನರೇಗಾದಲ್ಲಿ ಸಸಿಗಳ ಪಡೆಯುವ ರೈತರು ಕಡ್ಡಾಯವಾಗಿ ಪೋಷಣೆ ಮಾಡಬೇಕಿದೆ. ತುಮಕೂರು ಜಿಲ್ಲೆಯ ೭೪ ಗ್ರಾಪಂಯಲ್ಲಿ ಕಳೆದ ಎರಡು ವರ್ಷದಿಂದ ಗ್ರಾಮಕ್ಕೊಂದು ಹಸಿರು ಗ್ರಾಮ ಯೋಜನೆಯಡಿ ಸಸಿಗಳ ಪೋಷಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದು ಗ್ರಾಪಂಯ ಸುಂದರ ಉದ್ಯಾನವನ ಆಗಲಿದೆ. ಸಾಮಾಜಿಕ ವಲಯ ಅರಣ್ಯ ವಾಪ್ತಿಯಲ್ಲಿ ೬ ಲಕ್ಷ ೮೨ ಸಾವಿರ ಸಸಿಗಳ ಪೋಷಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. -ದೇವರಾಜು.ವಿ. ಉಪ ಅರಣ್ಯ ಸಂರಕ್ಷಣಾಧಿಕಾರಿ. ತುಮಕೂರುಹಸಿರು ಕ್ರಾಂತಿ ಸೃಷ್ಟಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯ ೩೩೩ ಗ್ರಾಪಂಗಳಿಗೆ ೩ ಲಕ್ಷ ೬೦ ಸಸಿಗಳ ಮೀಸಲಿದೆ. ೩ ವರ್ಷ ಪೋಷಣೆಗೆ ಆಯಾ ಇಲಾಖೆಗೆ ಒಪ್ಪಿಸಿ ಪ್ರತಿ ತಿಂಗಳ ಪೋಷಣೆಯ ಮಾಹಿತಿಗೆ ಸೂಚಿಸಲಾಗಿದೆ. ಗ್ರಾಪಂಗೊಂದು ಉದ್ಯಾನವನ ನಿರ್ಮಾಣಕ್ಕೆ ರೂಪುರೇಷಕ್ಕೆ ಸಿದ್ದತೆ ನಡೆದಿದೆ. ಸಾಮಾಜಿಕ ಅರಣ್ಯ ಮತ್ತು ಗ್ರಾಪಂ ಅಧಿಕಾರಿ ಪ್ರತಿ ಸಸಿಯ ಪೋಷಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.ಪ್ರಭು.ಜಿ. ಜಿಪಂ ಸಿಇಒ ತುಮಕೂರು