ಜೆಸ್ಕಾಂಗೆ ಶಾಕ್ ನೀಡಿದ ಕಾರಟಗಿ ಪುರಸಭೆ

| Published : Aug 29 2025, 01:00 AM IST

ಜೆಸ್ಕಾಂಗೆ ಶಾಕ್ ನೀಡಿದ ಕಾರಟಗಿ ಪುರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ಪಟ್ಟಣದಲ್ಲಿ ಹಗಲು-ರಾತ್ರಿ ಬೀದಿದೀಪ ಉರಿಯುತ್ತವೆ. ಇವುಗಳ ಬಿಲ್‌ ಕಟ್ಟುವರು ಯಾರು?, ಇನ್ನು ಕೆಲ ವಿದ್ಯುತ್‌ ಕೈಕೊಟ್ಟರೆ ಪವರ್‌ಮನ್‌ ಬರುವುದಿಲ್ಲ ಎಂದು ಜೆಸ್ಕಾಂ ಅಧಿಕಾರಿ ಖಾದರ್‌ಭಾಷಾ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಕಾರಟಗಿ:

ಸಾರ್ವಜನಿಕ ಸೇವೆ ಸಲ್ಲಿಸುವ ಕೆಲ ಇಲಾಖೆಗಳ ಕಾರ್ಯಕ್ಷಮತೆ ವೈಫಲ್ಯ ಎದ್ದು ಕಾಣುತ್ತಿದ್ದು, ತಮ್ಮ ಕಾರ್ಯ ಮತ್ತು ನಿರ್ಲಕ್ಷ್ಯ ಧೋರಣೆ ಬದಲಾಯಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಪುರಸಭೆ ಸಾಮಾನ್ಯ ಸಭೆ ಸ್ಪಷ್ಟ ನಿರ್ದೇಶನ ನೀಡಿತು.

ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಸ್ಕಾಂ, ಆರೋಗ್ಯ ಇಲಾಖೆ, ರಾಜ್ಯ ಸಾರಿಗೆ ಸಂಸ್ಥೆ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಪಶು ಆಸ್ಪತ್ರೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸದಸ್ಯರು ಪಕ್ಷಭೇದ ಮರೆತು ತರಾಟೆ ತೆಗೆದುಕೊಂಡರು. ಇನ್ಮುಂದೆ ಕೆಲಸವನ್ನು ಎಚ್ಚರದಿಂದ ಮತ್ತು ದೂರು ಬಾರದಂತೆ ನಿಗಾ ವಹಿಸುವಂತೆ ತಾಕೀತು ಮಾಡಿದರು.

ಜೆಸ್ಕಾಂ ಇಲಾಖೆ ವಿಷಯ ಪ್ರಸ್ಥಾಪಿಸಿದ ಸದಸ್ಯರು, ಪಟ್ಟಣದಲ್ಲಿ ಹಗಲು-ರಾತ್ರಿ ಬೀದಿದೀಪ ಉರಿಯುತ್ತವೆ. ಇವುಗಳ ಬಿಲ್‌ ಕಟ್ಟುವರು ಯಾರು?, ಇನ್ನು ಕೆಲ ವಿದ್ಯುತ್‌ ಕೈಕೊಟ್ಟರೆ ಪವರ್‌ಮನ್‌ ಬರುವುದಿಲ್ಲ ಎಂದು ಜೆಸ್ಕಾಂ ಅಧಿಕಾರಿ ಖಾದರ್‌ಭಾಷಾ ಅವರನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆ ಸಂಪರ್ಕಿಸಿದರೆ ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ನಿಮಗೆ ಜನ ಸೇವೆ ಮಾಡಲು ಆಗದಿದ್ದರೆ ಇಲ್ಲಿಂದ ಹೊರಡಿ ಅಥವಾ ನಿಮ್ಮ ನಡವಳಿಕೆ, ಕೆಲಸದ ಪದ್ಧತಿ ತಿದ್ದಿಕೊಳ್ಳಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ತಾಕೀತು ಮಾಡಿದರು.

ಹೊಸ ಮೀಟರ್‌ ಉಚಿತವಾಗಿ ಅಳವಡಿಸದೆ ಕೆಲ ವಾರ್ಡ್‌ಗಳಲ್ಲಿ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿವೆ. ಈ ಪದ್ಧತಿ ಬಿಡದಿದ್ದರೆ ನಿಮಗೆ ಶಾಕ್‌ ನೀಡಬೇಕಾಗುತ್ತದೆ ಎಂದು ಸದಸ್ಯರು ಎಚ್ಚರಿಸಿದರು.

ಸಭೆಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಬರದೆ ಸಿಬ್ಬಂದಿ ಆಪ್ತ ಸಮಾಲೋಚಕ ಹನುಮಂತಪ್ಪ ಜೂರಟಗಿ ಆಗಮಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ವೈದ್ಯರನ್ನು ಬಿಟ್ಟು ನಿವೇಕೆ ಬಂದಿದ್ದೀರಿ. ಎಷ್ಟು ವೈದ್ಯರಿದ್ದಾರೆ, ಆಸ್ಪತ್ರೆಗೆ ಬಂದ ರೋಗಿಗಳನ್ನು ಬೇರೆಡೆ ಏಕೆ ಕಳುಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲು ಜೂರಟಗಿ ತಡವರಿಸಿದರು. ಆಗ ಒಂದು ದಿನ ನಿಗದಿಪಡಿಸಿ ಸದಸ್ಯರು, ಮುಖ್ಯಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಲು ತಿರ್ಮಾನಿಸಿದರು.

ಸದಸ್ಯರಿಗೆ ಮಾಹಿತಿ ನೀಡಿ:

ಪಟ್ಟಣದ ೬-೭ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳೆ ಬರುತ್ತಿಲ್ಲ. ಆದರೂ ಸಹ ಸರ್ಕಾರದಿಂದ ಎಲ್ಲ ಸೌಲಭ್ಯ ಸರಬರಾಜುತ್ತಿವೆ. ಈ ಧಾನ್ಯಗಳೆಲ್ಲ ಎಲ್ಲಿಗೆ ಪೂರೈಕೆ ಆಗುತ್ತದೆ. ಈ ಕುರಿತು ವಾರ್ಡ್‌ ಸದಸ್ಯರಿಗೆ ಮಾಹಿತಿ ನೀಡುವುದೇ ಇಲ್ಲವೆಂದು ಶಿಶು ಅಭಿವೃದ್ಧಿ ಅಧಿಕಾರಿಯನ್ನು ಸದಸ್ಯರಾದ ರಾಮಣ್ಣ ಮತ್ತು ಸಂಗನಗೌಡ ಪ್ರಶ್ನಿಸಿದರು.

ಪ್ರಮುಖ ವೃತ್ತ, ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ದೇವಿಕ್ಯಾಂಪ್‌ನಲ್ಲಿ ಪಾರ್ಕ್ ಹಾಗೂ ಜಿಮ್ ನಿರ್ಮಾಣ, ಕಾಲುವೆ ಮೇಲೆ ಸುಗಮ ಓಡಾಟಕ್ಕೆ ಸೇತುವೆ, ಹೊಸದಾಗಿ ಟ್ರ್ಯಾಕ್ಟರ್‌ ಖರೀದಿಸುವುದು, ಸ್ವಚ್ಛ ಭಾರತ ಅಭಿಯಾನ ೨.೦ ಅಡಿ ಐಇಸಿ ಚಟುವಟಿಕೆ ಕೈಗೊಳ್ಳಲು, ವಾಹನಗಳಿಗೆ ೫ ಚಾಲಕರನ್ನು ನೇಮಿಸಿಕೊಳ್ಳುವ ಕುರಿತು ಸೇರಿದಂತೆ ಹೊಸ ವಸತಿ, ವಾಣ್ಯಿಜ್ಯ ವಿನ್ಯಾಸಗಳಿಗೆ ಅನುಮೋದನೆ ನೀಡುವ ಕುರಿತು ಮತ್ತು ಪೌರ ಕಾರ್ಮಿಕರಿಗೆ ನೀಡುವ ಬೆಳಗಿನ ಲಘು ಉಪಹಾರದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್‌ನಿಂದ ಪೂರೈಸಲು ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ವೇಳೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ್, ರಾಜಶೇಖರ ಸಿರಿಗೇರಿ, ಕೆ.ಎಚ್ ಸಂಗನಗೌಡ, ರಾಮಣ್ಣ, ಮಂಜುನಾಥ್ ಮೇಗೂರು, ಬಸವರಾಜ ಕೊಪ್ಪದ, ಶ್ರೀನಿವಾಸ್ ಕಾನುಮಲ್ಲಿ, ದೊಡ್ಡ ಬಸವರಾಜ ಬೂದಿ, ಆನಂದ ಮ್ಯಾಗಳಮನಿ, ಸುರೇಶ್, ಸೌಮ್ಯ ಕಂದಗಲ್, ಮೋನಿಕಾ ಧನಂಜಯ್, ಹುಸೇನಬೀ, ಸುಜಾತಾ ನಾಗರಾಜ್, ಅರುಣಾದೇವಿ, ಲಕ್ಷ್ಮೀ ಎತ್ತಿನಮನಿ, ಫಕೀರಪ್ಪ ನಾಯಕ, ಸಿದ್ದಪ್ಪ ಬೇವಿನಾಳ, ವೀರೇಶ ಗದ್ದಿ ಮುದಗಲ್, ಸೋಮಶೇಖರ ಗ್ಯಾರೇಜ್, ಹನುಮಂತರಡ್ಡಿ, ವರಲಕ್ಷ್ಮೀ ನಾಗರಾಜ್, ಎಂಜಿನಿಯರ್ ಮಂಜುನಾಥ್, ವ್ಯವಸ್ಥಾಪಕ ಪರಮೇಶ್ವರಪ್ಪ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಇನ್ನಿತರರು ಇದ್ದರು.