ಮಂಗಳೂರಿನಲ್ಲಿ ಆಳ ಸಮುದ್ರ ಸಂಪನ್ಮೂಲ ಪರಿಶೋಧನೆ ಮತ್ತು ಅಳಿವಿನಂಚಿನಲ್ಲಿರುವ ಸಂರಕ್ಷಿತ ಪ್ರಬೇಧಗಳ ಸಂರಕ್ಷಣೆ ಕುರಿತ ಕಾರ್ಯಾಗಾರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮೀನುಗಾರಿಕೆ ನಿಷೇಧದ ಅವಧಿಯನ್ನು ವಿಸ್ತರಿಸುವುದು, ಮೀನು ಸಂತತಿ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ರಚಿಸಿರುವ ತಾಂತ್ರಿಕ ಸಮಿತಿಯು ಡಿಸೆಂಬರ್- ಜನವರಿ ವೇಳೆಗೆ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಸಿಎಂಎಫ್‌ಆರ್‌ಐ (ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ) ನಿರ್ದೇಶಕ ಡಾ. ಗ್ರಿನ್ಸನ್ ಜಾರ್ಜ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಆಳ ಸಮುದ್ರ ಸಂಪನ್ಮೂಲ ಪರಿಶೋಧನೆ ಮತ್ತು ಅಳಿವಿನಂಚಿನಲ್ಲಿರುವ ಸಂರಕ್ಷಿತ ಪ್ರಬೇಧಗಳ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶಾದ್ಯಂತ ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆ ಮಾಡುವ ಕುರಿತು ತಾಂತ್ರಿಕ ಸಮಿತಿಯು ಸಂಬಂಧಿಸಿದ ಎಲ್ಲ ರಾಜ್ಯಗಳ ಜತೆ ಸಮಾಲೋಚಿಸಿ ವರದಿ ಸಲ್ಲಿಸುವ ಮೊದಲು ಒಮ್ಮತದ ತೀರ್ಮಾನಕ್ಕೆ ಬರಲಿದೆ. ನಿಷೇಧದ ಅವಧಿ ವಿಸ್ತರಿಸುವುದರಿಂದ ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸಲು ನೆರವಾಗಲಿದೆ. ನಿಷೇಧದ ಅವಧಿ ಹೆಚ್ಚಿಸಲು ಗುಜರಾತ್ ಒಪ್ಪಿಕೊಂಡಿದೆ. ಕರ್ನಾಟಕವೂ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಿನ್ನ ಅಭಿಪ್ರಾಯಗಳಿವೆ ಎಂದರು.

ಪ್ರಸ್ತುತ 61 ದಿನಗಳ ಮೀನುಗಾರಿಕೆ ನಿಷೇಧ ಜಾರಿಯಲ್ಲಿದೆ. ಮೀನುಗಾರರು ದೇಶಾದ್ಯಂತ ಏಕರೂಪದ ನಿಷೇಧದ ಅವಧಿಗಾಗಿ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ನಿಷೇಧದ ಅವಧಿಯನ್ನು ಹೆಚ್ಚಿಸಲು ಸಿದ್ಧರಿದ್ದಾರೆ ಎಂದು ಗ್ರಿನ್ಸನ್‌ ಜಾರ್ಜ್‌ ಹೇಳಿದರು.

ಪ್ರಸ್ತುತ ಆಳ ಸಮುದ್ರದಲ್ಲಿ ಮೀನು ಸಂಪನ್ಮೂಲ ಗುರುತಿಸುವಿಕೆಗೆ ಎಕೋ ಸೌಂಡರ್‌ಗಳನ್ನು ಬಳಸಲಾಗುತ್ತದೆ. ಆದರೂ ಕೆಲವೊಮ್ಮೆ ಇದು ನಿಖರವಾಗಿ ಉಪಯೋಗಕ್ಕೆ ಬಾರದೆ ಇರಬಹುದು. ಈ ಸಮಸ್ಯೆಯನ್ನು ಪರಿಹರಿಸಬಹುದಾದ ಅಕೌಸ್ಟಿಕ್ ಯಂತ್ರಗಳಿಗೆ ಸುಮಾರು 70 ಲಕ್ಷ ರು. ವೆಚ್ಚವಾಗುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಅಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯಲಿದೆ ಎಂದು ಅವರು ಹೇಳಿದರು.ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳು ಕೇಂದ್ರ ಸಮಿತಿಯ ಪ್ರಸ್ತಾವನೆಗೆ ಒಪ್ಪಿಕೊಂಡರೆ, ಕರ್ನಾಟಕ ಸರ್ಕಾರ ಮೀನುಗಾರಿಕೆ ನಿಷೇಧ ಅವಧಿಯನ್ನು 61 ದಿನಗಳಿಂದ 90 ದಿನಗಳವರೆಗೆ ವಿಸ್ತರಿಸಲು ಸಿದ್ಧವಾಗಿದೆ ಎಂದು ಕರ್ನಾಟಕ ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದರು.-------------ಟ್ರಾಲ್‌ ಬಲೆಯಿಂದ ಆಮೆ ರಕ್ಷಣೆಗೆ ಸಾಧನ

ಆಳ ಸಮುದ್ರ ಮೀನುಗಾರಿಕೆಗೆ ಬಳಸುವ ಟ್ರಾಲ್ ಬಲೆಗಳಲ್ಲಿ ಅಳಿವಿನಂಚಿನಲ್ಲಿರುವ ಆಮೆಗಳು ಸಿಲುಕದಂತೆ ಮಾಡುವ ಸಾಧನ ಬಳಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಸಾಧನ ಬಳಕೆಯಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಳಿವಿನಂಚಿನ ಪ್ರಬೇಧವಾದ ಆಲಿವ್ ರಿಡ್ಲಿ ಆಮೆಗಳನ್ನು ಉಳಿಸಲು ಸಹಾಯವಾಗಲಿದೆ. ಸರ್ಕಾರ ಶೀಘ್ರದಲ್ಲೇ ಟ್ರಾಲ್ ಬೋಟ್‌ಗಳಲ್ಲಿ ಈ ಸಾಧನ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಿದೆ. ಕರ್ನಾಟಕ ಕರಾವಳಿಯಲ್ಲಿ ಸುಮಾರು 3,000 ಟ್ರಾಲ್ ಬೋಟ್‌ಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.----------

ವರ್ಷದೊಳಗೆ ಸಮುದ್ರ ಆಂಬ್ಯುಲೆನ್ಸ್ ಸಿದ್ಧ

ಸಮುದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಸಿಲುಕಿಕೊಂಡಿರುವ ಅಥವಾ ಗಾಯಗೊಂಡ ವ್ಯಕ್ತಿಗಳನ್ನು ಸ್ಥಳಾಂತರಿಸಲು ಪೂರಕವಾದ 7.85 ಕೋಟಿ ರು. ವೆಚ್ಚದ ಸಮುದ್ರ ಆಂಬ್ಯುಲೆನ್ಸ್‌ ನಿರ್ಮಿಸಲು ಇನ್ನೊಂದು ವಾರದೊಳಗೆ ಕಾರ್ಯಾದೇಶ ನೀಡಲಾಗುತ್ತದೆ ಎಂದು ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದರು.

ಸಮುದ್ರ ಆಂಬ್ಯುಲೆನ್ಸ್‌ನಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿ, ನಾಲ್ಕೈದು ಹಾಸಿಗೆಗಳ ಸೌಲಭ್ಯದೊಂದಿಗೆ 800 ಎಚ್‌ಪಿ ಎಂಜಿನ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಮುಂದಿನ ಮೀನುಗಾರಿಕೆ ಋತುವಿನ ವೇಳೆಗೆ ಸಮುದ್ರ ಆಂಬ್ಯುಲೆನ್ಸ್ ಸಿದ್ಧವಾಗುವ ನಿರೀಕ್ಷೆಯಿದೆ ಎಂದರು.

ಟೆಂಡರ್ ನಿಯಮಗಳ ಪ್ರಕಾರ, ಸಮುದ್ರ ಆಂಬ್ಯುಲೆನ್ಸ್‌ನಲ್ಲಿ ಹೈಡ್ರಂಟ್‌ಗಳು, ಅಗ್ನಿಶಾಮಕ ವ್ಯವಸ್ಥೆಗಳು, 20 ಲೈಫ್ ಜಾಕೆಟ್‌ಗಳು, ಎರಡು ರಾಫ್ಟ್‌, ಆಮ್ಲಜನಕ ಸಿಲಿಂಡರ್‌ ಮತ್ತಿತರ ಅತ್ಯಾಧುನಿಕ ವೈದ್ಯಕೀಯ ಸಾಧನಗಳು ಇರುತ್ತವೆ ಎಂದು ತಿಳಿಸಿದರು.