ಸಾರಾಂಶ
ತಲಕಾವೇರಿ: ಮಧ್ಯಾಹ್ನ 1.44ಕ್ಕೆ ತೀರ್ಥೋದ್ಭವ । ಭಕ್ತರ ಹರ್ಷೋದ್ಘಾರ ನಡುವೆ ಕಾವೇರಿ ದರ್ಶನ
ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ತಲಕಾವೇರಿ
ಉಕ್ಕಿ ಬಾ... ಉಕ್ಕಿ ಬಾ... ಕಾವೇರಿ ಮಾತಾ ಉಕ್ಕಿ ಬಾ... ಎಂದು ಭಕ್ತರ ಜಯಘೋಷದ ನಡುವೆ ಕನ್ನಡ ನಾಡಿನ ಜೀವನದಿ ಕಾವೇರಿ ತವರು ತಲಕಾವೇರಿಯಲ್ಲಿ ನಿಗದಿಯಂತೆ ಶುಕ್ರವಾರ ಮಧ್ಯಾಹ್ನ 1.44ಕ್ಕೆ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ದರ್ಶನ ನೀಡಿದಳು.ತಲಕಾವೇರಿಯ ಅರ್ಚಕ ಟಿ.ಎಸ್. ಗುರುರಾಜ್ ಆಚಾರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಯಿಂದ ಪೂಜಾ ಕೈಂಕರ್ಯ ನೆರವೇರಿತು. 15ಕ್ಕೂ ಅಧಿಕ ಅರ್ಚಕರು ಕುಂಕುಮಾರ್ಚನೆ, ಪುಪ್ಪಾರ್ಚನೆ ಮೂಲಕ ಕಾವೇರಿಗೆ ಪೂಜೆ ಸಲ್ಲಿಕೆ ಮಾಡಿದರು. ತೀರ್ಥೋದ್ಭವ ಆಗುತ್ತಿದ್ದಂತೆ ಅರ್ಚಕ ವೃಂದದವರಿಂದ ಭಕ್ತರ ಮೇಲೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಮೊದಲು ತೀರ್ಥವನ್ನು ಸಂಗ್ರಹಿಸಿ ಅಭಿಷೇಕ ಮಾಡಲಾಯಿತು.
ತೀರ್ಥೋದ್ಭವ ಸಮಯ ಸಮೀಪಿಸುತ್ತಿದ್ದಂತೆ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಭಕ್ತರಿಂದ ನೂಕುನುಗ್ಗಲು ಉಂಟಾಯಿತು. ಭಕ್ತರು ಬ್ಯಾರಿಕೇಡ್ ಭೇದಿಸಿ ಕುಂಡಿಕೆ ಮುಂದೆ ತೀರ್ಥಕ್ಕಾಗಿ ಕಾತರದಿಂದ ಕಾದರು. ಮಧ್ಯಾಹ್ನದ ವೇಳೆ ತೀರ್ಥೋದ್ಭವಾದ್ದರಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಭಕ್ತರು ಮಾತೆ ಕಾವೇರಿ ದರ್ಶನವನ್ನು ಪಡೆದರು.ಶಾಸಕ, ಸಂಸದರ ಪಾದಯಾತ್ರೆ:
ಭಾಗಮಂಡಲದಿಂದ ಅಸಂಖ್ಯಾತ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾದಯಾತ್ರೆಯ ಮೂಲಕ 9 ಕಿ.ಮೀ. ನಷ್ಟು ಕ್ರಮಿಸಿ ತಲಕಾವೇರಿಗೆ ಆಗಮಿಸಿದರು. ಶಾಸಕ ಕೆ.ಎಸ್. ಪೊನ್ನಣ್ಣ ಅವರು ಕೂಡ ಹೆಜ್ಜೆ ಹಾಕಿದರು. ಸಂಸದ ಒಡೆಯರ್ ಅವರು ಭಕ್ತರೊಂದಿಗೆ ಬರಿ ಕಾಲಿನಲ್ಲಿ ಪಾದಯಾತ್ರೆ ಮೂಲಕ ತಲಕಾವೇರಿಗೆ ಆಗಮಿಸಿದರು.ಪಾದಯಾತ್ರೆಯಲ್ಲಿ ಆಗಮಿಸಿದ ಕೊಡವರು ತಮ್ಮನ್ನು ಪವಿತ್ರ ಕುಂಡಿಕೆ ಸಮೀಪ ಬಿಡುವಂತೆ ಹೇಳಿದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ದೀಪ ಹಿಡಿದು ಬಂದ ಮಹಿಳೆಯರಿಗೆ ಕಲ್ಯಾಣಿಯ ಮೆಟ್ಟಿಲಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಯಿತು. ಭಕ್ತರು ಕಲ್ಯಾಣಿಗೆ ಇಳಿಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತಾದರೂ ತೀರ್ಥೋದ್ಭವದ ಸಮಯ ಸಮೀಪಿಸುತ್ತಿದ್ದಂತೆ ಬಿಂದಿಗೆ ಹಿಡಿದಿದ್ದ ಭಕ್ತರು ಕಲ್ಯಾಣಿಗೆ ಧುಮಿಕಿದರು.
ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಸಾಮಾನ್ಯ ಭಕ್ತರಂತೆ ಕಲ್ಯಾಣಿಯ ಮೆಟ್ಟಿಲಿನಲ್ಲಿ ಕುಳಿತು ಕಾವೇರಿ ಮಾತೆಯನ್ನು ನಮಿಸಿದರು.ಮಗಳು ತ್ರಿವೇದಿ ಪೊನ್ನಕ್ಕರೊಂದಿಗೆ ನಟಿ ಹರ್ಷಿಕ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಜಾತ್ರೆಯಲ್ಲಿ ಪಾಲ್ಗೊಂಡರು.
ಭಾಗಮಂಡಲದಲ್ಲಿ ಜಾತ್ರೆ:ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಲ್ಲಿ ಕೂಡ ಕಾವೇರಿ ಸಂಕ್ರಮಣದ ಅಂಗವಾಗಿ ವಿಶೇಷ ಪೂಜೆ ಜರುಗಿತು. ದೇವಾಲಯ ದೀಪಾಲಂಕಾರದಿಂದ ಕಂಗೊಳಿಸಿತು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತರು ಪಿಂಡ ಪ್ರದಾನ ಮಾಡಿದರು. ಪುಣ್ಯ ಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡಿದರು. ಭಾಗಮಂಡಲದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಅಂಗಡಿ ಮಳಿಗೆಗಳನ್ನು ತೆರೆಯಲಾಗಿತ್ತು. ಭಕ್ತರು ಕೇಶ ಮುಂಡನ ಮಾಡಿಸಿಕೊಂಡರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೇವಾಲಯದ ಮುಂಭಾಗದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೇಂದ್ರವನ್ನು ತೆರೆಯಲಾಗಿತ್ತು.
ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಚ್.ಅರುಣ್ ಮಾಚಯ್ಯ, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಕಾಳನ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಎಂ.ಜಿ.ಮೋಹನ್ ದಾಸ್, ಕೊಡವ ಅರೆ ಭಾಷೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಶ್ರೀಧರ, ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್, ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಸಿ.ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಯು. ಮೋಟಯ್ಯ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಭಕ್ತರ ಅನುಕೂಲಕಕ್ಕಾಗಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಬೃಹತ್ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಉದಕ್ಕೂ ಮೊಬೈಲ್ ಶೌಚಾಲಯ ವ್ಯವಸ್ಥೆ ಇತ್ತು. ಭಾಗಮಂಡಲದಿಂದ ತಲಕಾವೇರಿಗೆ ಸಂಚರಿಸಲು ಸುಮಾರು 25 ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು...........
ಸಾವಿರಾರು ಲೀಟರ್ ತೀರ್ಥ ತೆಗೆದರೂ ಬತ್ತದ ಪವಿತ್ರ ಕುಂಡಿಕೆ!ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಪವಿತ್ರ ಬ್ರಹ್ಮ ಕುಂಡಿಕೆಯಿಂದ ಭಕ್ತರಿಗೆ ವಿತರಿಸಲು ಶುಕ್ರವಾರ ಸಾವಿರಾರು ಲೀಟರ್ ತೀರ್ಥವನ್ನು ತೆಗೆಯಲಾಯಿತು. ಆದರೂ ಕೂಡ ಪುಟ್ಟ ಪವಿತ್ರ ತೀರ್ಥ ಕುಂಡಿಕೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಜಿಲ್ಲೆ ಸೇರಿದಂತೆ, ಮೈಸೂರು, ಬೆಂಗಳೂರಿನ ಭಕ್ತರಿಗೆ ವಿತರಣೆ ಮಾಡಲು ಸಾವಿರಾರು ಲೀಟರ್ ಸಿಂಟೆಕ್ಸ್, ಡ್ರಮ್‌ಗಳಲ್ಲಿ ತೀರ್ಥವನ್ನು ತುಂಬಿಸಿಕೊಂಡು ವಿತರಿಸಲು ಹತ್ತಾರು ಅಲಂಕೃತ ಪಿಕ್ ಅಪ್ ವಾಹನಗಳು, ಟ್ಯಾಕ್ಟರ್‌ಗ:ಇದ್ದವು.
.......31ನೇ ವರ್ಷದ ಅನ್ನಸಂತರ್ಪಣೆ
ಕಾವೇರಿ ತುಲಾ ಸಂಕ್ರಮಣ ಅಂಗವಾಗಿ ಕೊಡಗು ಏಕೀಕರಣ ರಂಗದಿಂದ ತಲಕಾವೇರಿಯಲ್ಲಿ 31ನೇ ವರ್ಷದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಇಡ್ಲಿ, ವಡೆ, ಚಿತ್ರನ್ನ, ಕೇಸರಿಬಾತ್, ಉಪ್ಪಿಟ್ಟು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಅನ್ನ, ಸಾಂಬಾರ್, ಪಾಯಸ ಮಾಡಲಾಗಿತ್ತು. ಇನ್ನು ಒಂದು ತಿಂಗಳು ಅನ್ನ ಸಂತರ್ಪಣೆ ಕಾರ್ಯಕ್ರಮ ಇರಲಿದೆ. ತಲಕಾವೇರಿ ಸಮೀಪದ ಕೈಲಾಸ ಮಠದಲ್ಲೂ ಭಕ್ತರಿಗೆ ಪಲಾವ್, ಅನ್ನ-ಸಂಬಾರ್ ನೀಡಲಾಯಿತು. ಭಾಗಮಂಡಲದ ಗಜಾನನಾ ಯುವಕ ಸಂಘದಿಂದ ಭಾಗಮಂಡಲದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು......
ಕೊಡವರಿಂದ ಪಾದಾಯಾತ್ರೆಕಾವೇರಿ ತೀರ್ಥೋದ್ಭವ ಅಂಗವಾಗಿ ವಿವಿಧ ಕೊಡವ ಸಂಘಟನೆಗಳಿಂದ ಭಾಗಮಂಡಲದಿಂದ ತಲಕಾವೇರಿಯ ವರೆಗೆ ಪಾದಾಯಾತ್ರೆ ನಡೆಯಿತು. ಕೊಡವ ಪುರುಷರು ದುಡಿ ಹಿಡಿದು ಸಾಗಿದರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಪಿನೊಂದಿಗೆ ದೀಪ ಹಿಡಿದು ಹೆಜ್ಜೆಯಾಕಿದರು. ಪಾದಾಯಾತ್ರೆ ವೇಳೆ ಭಾಗಮಂಡಲದಿಂದ ತಲಕಾವೇರಿಯ ಅಲ್ಲಲ್ಲಿ ತಂಪು ಪಾನೀಯ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
...........ಸಾಂಸ್ಕೃತಿಕ ಕಾರ್ಯಕ್ರಮ
ತಲಕಾವೇರಿಯಲ್ಲಿ ತೀರ್ಥೋದ್ಭವ ಅಂಗವಾಗಿ ಕ್ಷೇತ್ರದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ವೇದಿಕೆಯಲ್ಲಿ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮವನ್ನು ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅರೆ ಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವೊಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ಚಿ. ನಾ.ಸೋಮೇಶ್, ವಾರ್ತಾಧಿಕಾರಿಗಳಾದ ಚಿನ್ನಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಕೊಡವ ಸಾಂಪ್ರದಾಯಿಕ ದುಡಿ ಕೊಟ್ಟುಪಾಟ್ ಹಮ್ಮಿಕೊಳ್ಳಲಾಗಿತ್ತು ನಂತರ ಬಾಳೆಲೆಯ ವತ್ಸಲಾ ನಾರಾಯಣರವರ ಕಾವೇರಿ ಕಲಾ ತಂಡದಿಂದ ಭಜನೆ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು.
............ಪ್ಲಾಸ್ಟಿಕ್ ಬಿಂದಿಗೆ ಎಸೆತ!
ತೀರ್ಥ ಸಂಗ್ರಹಕ್ಕಾಗಿ ತಲಕಾವೇರಿಗೆ ಕುಂಡಿಕೆ ಬಳಿ ತಂದಿದ್ದ ಪ್ಲಾಸ್ಟಿಕ್ ಬಿಂದಿಗೆಯನ್ನು ಡಿವೈಎಸ್ಪಿ ಸೂರಜ್ ಅವರು ಎಸೆದರು. ಕಳೆದ ಕೆಲವು ವರ್ಷಗಳಿಂದ ತಲಕಾವೇರಿಯಲ್ಲಿ ತೀರ್ಥ ಸಂಗ್ರಹಕ್ಕೆ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿತ್ತು. ಕೆಲವು ಭಕ್ತರು ಗಾಜಿನ ಬಾಟಲಿಗಳನ್ನೂ ಕೂಡ ತಂದಿದ್ದು, ಕುಂಡಿಕೆಯ ಬಳಿ ಹಾಗೂ ಭಕ್ತರು ಕುಳಿತುಕೊಳ್ಳುವ ಸ್ಥಳದಲ್ಲಿ ತೀರ್ಥ ಸಂಗ್ರಹದ ಸಂದರ್ಭ ಬಾಟಲಿ ಬಿದ್ದು, ಗಾಜಿನ ಚೂರುಗಳು ಕಂಡುಬಂದವು.........
ಡಿಸಿಎಂ ಭೇಟಿ ರದ್ದುತಲಕಾವೇರಿಯ ತೀರ್ಥೋದ್ಭವಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಭೇಟಿ ರದ್ದಾಯಿಯಿತು. ಬೆಂಗಳೂರಿನಿಂದ ಭಾಗಮಂಡಲಕ್ಕೆ ಹೆಲಿಕ್ಯಾಪ್ಟರ್ ಮೂಲಕ ಅವರು ಆಗಮಿಸಬೇಕಿತ್ತು. ಆದರೆ ಅಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ದೇವಾಲಯ ಭೇಟಿಯನ್ನುರದ್ದುಗೊಳಿಸಲಾಯಿತು. ಕಾವೇರಿ ಮಾತೆ ಎಲ್ಲರಿಗೂ ಒಳಿತುಂಟು ಮಾಡಲಿ ಎಂದು ಡಿಕೆಶಿ ಸಂದೇಶದ ಮೂಲಕ ಭಕ್ತರಿಗೆ ಶುಭ ಹಾರೈಸಿದರು.