ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆಯ ನೆಲೆ ಕೊಟ್ಟೂರಿನ ಕೋಗಳಿ

| Published : Nov 05 2024, 12:39 AM IST

ಸಾರಾಂಶ

ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಕನ್ನಡದ ಮೊದಲ ಗದ್ಯಕೃತಿ ಬರೆದ ಶಿವಕೋಟ್ಯಾಚಾರ್ಯ ಕೋಗಳಿ ನಾಡಿನವರು ಎಂಬುದು ನಮಗೆ ಇತಿಹಾಸದಿಂದ ತಿಳಿದು ಬರುತ್ತದೆ. ವಡ್ಡಾರಾಧನೆಯು ಶಿವಕೋಟ್ಯಾಚಾರ್ಯ ಬರದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ ಕಥೆಗಳ ಸಂಗ್ರಹವಾಗಿದೆ.

ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ. ಇಂತಹ ಕೖತಿ ಅಂದಿನ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಈಗಿನ ವಿಜಯನಗರ ಜಿಲ್ಲೆ ಅಖಂಡ ಕೂಡ್ಲಿಗಿ ತಾಲೂಕಿಗೆ ಸೇರಿದ ಅಂದರೆ ಇಂದಿನ ಕೊಟ್ಟೂರು ತಾಲೂಕಿಗೆ ಸೇರಿದ ಕೋಗಳಿ ನೆಲದಲ್ಲಿ ರಚನೆಯಾಗಿರುವುದು ಗಮನಾರ್ಹ.

ವಡ್ಡಾರಾಧನೆ ಕೖತಿಯ ರಚನೆಯ ಕಾಲ ಅಂದಾಜು ಕ್ರಿ.ಶ. 920 ಇರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಸಂಶೋಧಕ ಹಂಪಾ ನಾಗರಾಜಯ್ಯ ವಡ್ಡಾರಾಧನೆ ರಚನೆ 11ನೇ ಶತಮಾನ ಇರಬಹುದು ಎಂದು ದಾಖಲಿಸಿದ್ದಾರೆ. ಹಲವು ವಿಷಯದಲ್ಲಿ ಈ ಕೃತಿ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದರೂ ವಡ್ಡರಾಧನೆ ಕನ್ನಡದ ಮೊದಲ ಗದ್ಯಕೃತಿ, ಇದನ್ನು ರಚಿಸಿದ ಶಿವಕೋಟ್ಯಾಚಾರ್ಯ ಕೋಗಳಿ ನಾಡಿನವರು ಎಂಬುದನ್ನು ಹಲವರು ದೃಢಪಡಿಸಿದ್ದಾರೆ.

ಜೈನರ ಮುಖ್ಯಆಡಳಿತ ಕೇಂದ್ರವಾಗಿದ್ದ ಕೋಗಳಿಯಲ್ಲಿ ಈಗಲೂ ಜೈನರ ಬಸದಿಗಳು, ತುಂಡಾದ ದೇವರ ಮೂರ್ತಿಗಳು, ಶಾಸನಗಳು ಅವಶೇಷಗಳನ್ನು ಗ್ರಾಮದ ಸುತ್ತಮುತ್ತ ಕಾಣಬಹುದು. ಚಾಲುಕ್ಯರ ಕಾಲದ ಸುಂದರ ದೇವಾಲಯ ಆಗಿನ ಕೋಗಳಿ ಪಟ್ಟಣ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ ಬಾಗಳಿ, ಈಗಿನ ಕೊಟ್ಟೂರು ತಾಲೂಕಿನ ಹರಾಳು ಕಲ್ಲೇಶ್ವರ, ಅಂಬಳಿ ಕಲ್ಲೇಶ್ವರ ದೇವಾಲಯಗಳು ಈಗಲೂ ಇತಿಹಾಸ ಸಂಶೋಧಕರನ್ನು ಕೈಬೀಸಿ ಕರೆಯುವಂತಿವೆ.

ಕೋಗಳಿಯಲ್ಲಿ ದೊರೆತ ಕ್ರಿ.1055ರ ಶಾಸನವೊಂದರಲ್ಲಿ ಇಂದ್ರಕೀರ್ತಿ ಮುನೀಂದ್ರನು ಜೈನ ಬಸದಿಯ ಮಾಣಿಗಳ ಶಿಕ್ಷಣಕ್ಕಾಗಿ ದತ್ತಿಯನ್ನು ನೀಡಿದ ಬಗ್ಗೆ ಹೇಳಿದೆ. ಜೈನ ಬಸದಿಯನ್ನು ಮೊದಲು ನಿರ್ಮಿಸಿದವನು ಗಂಗರ ರಾಜ ದುರ್ವೀನೀತ. ಈತನಿಂದ ಹಿಡಿದು ಕ್ರಿ.ಶ. 555-606ರ ವರೆಗೆ ಹೊಯ್ಸಳರ ಅಂತ್ಯದವರೆಗೆ ಪುಣ್ಯಕ್ಷೇತ್ರ, ಜೈನಧರ್ಮದ ಆರಾಧನಾ ಕೇಂದ್ರಸ್ಥಾನವಾಗಿತ್ತು.

ಒಂದು ಶಾಸನದಲ್ಲಿ ಕೋಗಳಿ ತೀರ್ಥವೆಂದು ಕರೆದಿದೆ. ಕ್ರಿ.ಶ.897ರ ಶಾಸನದಲ್ಲಿ 500 ನಾಡಿನ ಬಗ್ಗೆ ವಿಚಾರವಿದೆ. ಕ್ರಿ.ಶ.997 ರ ಶಾಸನದಲ್ಲಿ ಕೋಗಳಿ 4 ಯುಗದ ಪೊಳಲ್ ಎಂದು ತಿಳಿಸಿದೆ. ಮುಳಗುಂದ, ಕೊಪಣ, ಶ್ರವಣಬೆಳಗೊಳದಂತೆ ಕೋಗಳಿ ಪ್ರಸಿದ್ಧ ಪವಿತ್ರ ಕ್ಷೇತ್ರವಾಗಿತ್ತು. ಎಲ್ಲ ನಾಡಿಗಿಂತಲೂ ಕೋಗಳಿ ನಾಡು ಅಧಿಕ ಸೊಗಸಾಗಿತ್ತೆಂದು ಎಂದು ಹೇಳಲಾಗಿದೆ.

ಕೋಗಳಿ ಹೆಸರು ಹೇಗೆ ಬಂತು?:

ಕ್ರೌಂಚನೆಂಬ ರಾಜ ಕೋಗಳಿಯನ್ನು ಆಳಿದ್ದರಿಂದ ಕೌಗಳಿ ನಂತರ ಕೋಗಳಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಕ್ರಿ.ಶ.1045ರಲ್ಲಿ ಹೂವಿನಹಡಗಲಿ ತಾಲೂಕು ಮೋರಿಗೇರಿಯಲ್ಲಿ ದೊರೆತ ಚಾಲುಕ್ಯ ಅರಸ ಒಂದನೇ ಸೋಮೇಶ್ವರ ಶಾಸನದಲ್ಲಿ ಕೆವಗಳಿ ನಾಡೋಳ್ ಎಂದಿದೆ. ಕೆವಗಳಿ ಎಂದರೆ ಕೇವಲಿಗಳ ನಾಡು ಎಂದು, ಕೇವಲಿಗಳು ಎಂದರೆ ಜೈನಯೋಗಿಗಳು ಅಥವಾ ಸನ್ಯಾಸಿಗಳು ಎಂದರ್ಥ. ಕೇವಲಿಗಳು ಉಳಿದುಕೊಂಡಿದ್ದರಿಂದ ಕೇವಗಳಿಯಾಗಿದೆ. ನಂತರ ಕೇವಗಳಿ ಕೌಗಳಿ, ಕೋಗಳಿ ಆಗಿರಬೇಕೆಂದು ಸಂಶೋಧಕರು ನಿರ್ಧಾರಕ್ಕೆ ಬಂದಿದ್ದಾರೆ. ಕನ್ನಡನಾಡಿಗೆ ಕಳಶದಂತೆ ಕಂಗೊಳಿಸಿದ್ದ ಕೋಗಳಿ ಪಟ್ಟಣ ಈಗ ಕೇವಲ ಒಂದು ಹಳ್ಳಿಯಾಗಿ ಉಳಿದುಕೊಂಡಿದೆಯಷ್ಟೇ.