ಅನುದಾನದ ಕೊರತೆ; ಸಸಿ ವಿತರಣೆ ಸ್ಥಗಿತ

| Published : Mar 29 2024, 12:47 AM IST

ಸಾರಾಂಶ

ಅನುದಾನದ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಸಸಿಗಳ ಬೆಳೆಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆ ಪ್ರತಿವರ್ಷ ರೈತರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದ ಸಸಿಗಳನ್ನು ಈ ಬಾರಿ ವಿತರಣೆ ಮಾಡುತ್ತಿಲ್ಲ.

ಗಂಗಾಧರ ಹಿರೇಮಠ

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಅನುದಾನದ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಸಸಿಗಳ ಬೆಳೆಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆ ಪ್ರತಿವರ್ಷ ರೈತರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದ ಸಸಿಗಳನ್ನು ಈ ಬಾರಿ ವಿತರಣೆ ಮಾಡುತ್ತಿಲ್ಲ.

ಪ್ರತಿವರ್ಷ ಉತ್ಕೃಷ್ಟ ಗುಣಮಟ್ಟದ 176ಕ್ಕೂ ವಿವಿಧ ಜಾತಿಯ 10 ಲಕ್ಷ ಸಸಿಗಳನ್ನು ಬೆಳೆಸಿ ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ರೈತರಿಗೆ ಆಲಮಟ್ಟಿಯ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆ ಸಸಿಗಳನ್ನು ಮಾರುತ್ತಿತ್ತು. ಪ್ರತಿವರ್ಷ ಜೂನ್‌ನಲ್ಲಿ ಸಸಿಗಳ ವಿತರಣೆ ನಡೆಯುತ್ತಿತ್ತು. ರಾತ್ರಿಯಿಡಿ ಸರದಿಯಲ್ಲಿ ಕಾದು ಇಲ್ಲಿಯ ಸಸಿಗಳನ್ನು ರೈತರು ಒಯ್ಯುತ್ತಿದ್ದರು. ಇಲ್ಲಿಯ ಸಸಿಗಳಿಗೆ ಬೇಡಿಕೆಯೂ ಹೆಚ್ಚಿತ್ತು. ಅರಣ್ಯ ಇಲಾಖೆಯ ಸಸಿಗಳಿಗಷ್ಟೇ ಸೀಮಿತಗೊಳ್ಳದೇ, ಅರಣ್ಯ ಸಸಿಗಳ ಜತೆ ಹಣ್ಣು, ತೋಟಗಾರಿಕೆ, ಅಲಂಕಾರಿಕ, ಔಷಧೀಯ, ಕೃಷಿ, ಧಾರ್ಮಿಕ ಮಹತ್ವದ ಸಸಿಗಳು ಸೇರಿ 150ಕ್ಕೂ ಅಧಿಕ ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳು ಕಡಿಮೆ ಬೆಲೆಗೆ ದೊರೆಯುವುದರಿಂದ ಬೇಡಿಕೆ ಹೆಚ್ಚಿತ್ತು.

ಸಸಿಗಳನ್ನು ದೇಶದ ನಾನಾ ನರ್ಸರಿಗಳಿಂದ ತರಿಸಿ ಇಲ್ಲಿ ಮಣ್ಣು, ಗೊಬ್ಬರ, ಗೋಮೂತ್ರ ಸೇರಿ ವಿಶೇಷ ಆರೈಕೆಯೊಂದಿಗೆ ಇಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿತ್ತು. ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಯ ಆಲಮಟ್ಟಿಯ ಮೂರು, ರೋಡಲ್ ಬಂಡಾ ಹಾಗೂ ಬೀಳಗಿ ತಾಲೂಕಿನ ಕುಂದರಗಿ ಸೇರಿ ಐದು ನರ್ಸರಿಗಳಲ್ಲಿ ಇವುಗಳನ್ನು ಬೆಳೆಸಿ ರೈತರಿಗೆ ಕಡಿಮೆ ಬೆಲೆ ಮಾರಲಾಗುತ್ತಿತ್ತು.

ನಿರಂತರ ಮಾರಾಟ:

2017-18 ರಿಂದ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ಇಲ್ಲಿ ಬೆಳೆಸಿ ಮಾರಲಾಗಿದೆ. ಒಂದು ಸಸಿಗೆ ₹1ದಿಂದ 10ವರೆಗೂ ಇರುತ್ತಿದ್ದವು. ಹೀಗಾಗಿ ಬೇಡಿಕೆ ಹೆಚ್ಚಿತ್ತು. ಆದರೆ ಕಳೆದ ವರ್ಷ ಸಸಿಗಳ ಬೆಲೆ ₹30ಗೆ ಹೆಚ್ಚಳ ಮಾಡಲಾಗಿತ್ತು. ಇದರಿಂದ ಕಳೆದ ವರ್ಷ ಬೆಳೆಸಲಾದ 6 ಲಕ್ಷ ಸಸಿಗಳಲ್ಲಿ 50 ಸಾವಿರಕ್ಕೂ ಅಧಿಕ ಸಸಿಗಳು ಮಾರಾಟವಾಗದೇ ಉಳಿದಿವೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಮಾಹಿತಿ ನೀಡಿದರು. 2017-18 ರಿಂದ ಇಲ್ಲಿಯವರೆಗೆ 60.67 ಲಕ್ಷ ಸಸಿಗಳನ್ನು ಬೆಳೆಸಿ ಮಾರಲಾಗಿದೆ.ಸಸಿಗಳನ್ನು ಬೆಳೆಸಲು ಕನಿಷ್ಠ 200 ಕ್ಕೂ ಅಧಿಕ ಅರಣ್ಯ ದಿನಗೂಲಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂದು ಮಾಹಿತಿ ನೀಡಿದರು.ಈ ಬಾರಿ ಹೊಸ ಸಸಿಗಳ ಬೆಳೆಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಯ ಅರಣ್ಯೀಕರಣದಲ್ಲಿ ಯಾವುದೇ ಪ್ಲ್ಯಾಂಟೇಶನ್ ಬೆಳೆಸಲಾಗುತ್ತಿಲ್ಲ. ಜತೆಗೆ ಪ್ರತಿವರ್ಷ ರೈತರಿಗೆ ವಿತರಿಸುತ್ತಿದ್ದ ಸಸಿಗಳು ಕೂಡ ವಿತರಿಸುತ್ತಿಲ್ಲ.ಕಳೆದ ವರ್ಷ ಉಳಿದ ಸಸಿಗಳನ್ನು ಮಾರಲಾಗುತ್ತದೆ.

-ರಾಜಣ್ಣ ನಾಗಶೆಟ್ಟಿ ಆಲಮಟ್ಟಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ

-------

ರಾತ್ರಿ ಪಾಳೆ ಹಚ್ಚಿ ಇಲ್ಲಿ ಹಣ್ಣು, ತೆಂಗು ಸೇರಿದಂತೆ ನಾನಾ ವಿಧದ ಸಸಿಗಳನ್ನು ಖರೀದಿಸಿ ಹಚ್ಚಿದ್ದೇನೆ. ಉತ್ಕೃಷ್ಟ ಗುಣಮಟ್ಟದ ಸಸಿ ಇದ್ದು, ಬಹಳ ಚೆನ್ನಾಗಿ ಗಿಡಗಳು ಹತ್ತಿವೆ.

-ನಾಗಪ್ಪ ಭಾವಿಕಟ್ಟಿ ಹಾಗೂ ಬೇನಾಳದ ಶಾಂತಪ್ಪ,
ರೈತರು

------

ಅತೀ ಕಡಿಮೆ ಬೆಲೆಗೆ ರೈತರೇ ಹೆಚ್ಚಾಗಿ ಖರೀದಿಸುತ್ತಿದ್ದ ಸಸಿಗಳನ್ನು ಈ ವರ್ಷವೂ ನೀಡಬೇಕಿತ್ತು. ಇದು ಅವಳಿ ಜಿಲ್ಲೆಯ ರೈತರಿಗೆ ನಿರಾಶೆ ತಂದಿದೆ.

-ಸಿದ್ರಾಮ ಏಳಗಂಟಿ

ಕೊಲ್ಹಾರದ ರೈತ.