ಸಾರಾಂಶ
ಸಂಗೀತದ ಪರಂಪರೆಯಲ್ಲಿ ಮುನ್ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಹೂವಿನಹಡಗಲಿ: ಕಲಾರಾಧನೆಯೇ ಬದುಕು ಎಂಬ ಧ್ಯೇಯದೊಂದಿಗೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಸಂಗೀತ ಕಲಾವಿದರು, ನಿರಂತರವಾಗಿ ಕಲಾ ಸೇವೆ ಮಾಡುತ್ತಿದ್ದು, ಅಂತವರನ್ನು ಗುರುತಿಸುವ ಜತೆಗೆ ಪಂಚಾಕ್ಷರಿ ಗವಾಯಿಗಳ ಸಂಗೀತ ಪರಂಪರೆ ಹೀಗೆ ಮುಂದುವರೆಯಲಿ ಎಂದು ಮಲ್ಲನಕೇರಿ ಮಠದ ಅಭಿನವ ಚೆನ್ನ ಬಸವ ಸ್ವಾಮೀಜಿ ಹೇಳಿದರು.
ಇಲ್ಲಿನ ಮಲ್ಲಿಗೆ ಕಲಾ ಸಂಸ್ಥೆಯಿಂದ ಮಲ್ಲನಕೇರಿ ಮಠದಲ್ಲಿ ಜರುಗಿದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಲ್ಲಿಗೆ ಗಾನ ಕಲಾ ಸೌರಭ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಸಂಗೀತ ಕ್ಷೇತ್ರದಲ್ಲಿ ಸಂಗೀತ ಸೇವೆ ಹಾಗೂ ಸಾಧನೆ ಮಾಡಿರುವ ಹಿರಿ ಕಿರಿಯ ವಯಸ್ಸಿನ ಪ್ರತಿಭೆಗಳನ್ನು ಸೇರಿಸಿ, ಅವರ ಪ್ರತಿಭೆಗಳಿಗೆ ಮನ್ನಣೆ ನೀಡಿ ಕಾರ್ಯಕ್ರಮ ನೀಡುತ್ತಿರುವುದು ಸಂತೋಷದ ವಿಚಾರ ಎಂದರು.
ಮಲ್ಲನಕೇರಿ ಮಠವು ಹಾನಗಲ್ಲ ಶ್ರೀ, ಪುಟ್ಟರಾಜ ಕವಿ ಗವಾಯಿ, ಪಂಚಾಕ್ಷರಿ ಗವಾಯಿ ಸಂಗೀತದ ಪರಂಪರೆಯಲ್ಲಿ ಮುನ್ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಲ್ಲನಕೇರಿ ಮಠವು ಯಾವತ್ತೂ ಮಲ್ಲಿಗೆ ಕಲಾ ಸಂಸ್ಥೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇವೆಂದು ಹೇಳಿದರು.ಮಲ್ಲಿಗೆ ಕಲಾ ಸಂಸ್ಥೆಯ ಗೌರವಾಧ್ಯಕ್ಷ ಎಚ್.ಎಂ. ಬೆಟ್ಟಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಲ್ಲಿಗೆ ಕಲಾ ಸಂಸ್ಥೆಯು 24 ವರ್ಷಗಳಲ್ಲಿ ಸಂಗೀತ ಕಲಾವಿದರನ್ನು ಗೌರವಿಸುತ್ತಾ ಬಂದಿದೆ. ಇದು ಮುಂದುವರೆಯಬೇಕೆಂದು ಹೇಳಿದರು.
ಮಲ್ಲಿಗೆ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಖಾದರ್ ಬಾಷಾ ಪ್ರಾಸ್ತಾವಿಕ ಮಾತನಾಡಿದರು.ಯುವರಾಜ್ ಗೌಡ್ರ ಮೋರಗೇರಿ, ಕೆ.ಬನ್ನಪ್ಪ, ಕೆ.ಚಂದ್ರಪ್ಪ, ಜಡೆಸಿದ್ದೇಶ್ವರ ಮರೋಳ ಇವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕ ಶಿವಕುಮಾರ್ ಗಡ್ಡಿ, ವಿ.ಬಿ. ಜಗದೀಶ್, ಜಿ.ಜಗದೀಶ್, ಹಡಲಿ ಬಸವರಾಜ, ಯುವರಾಜ ಗೌಡ ಇದ್ದರು.