ಸಾರಾಂಶ
ಕುಂದುಕೊರತೆಗಳ ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಈ.ಟಿ. ಚಂದ್ರಶೇಖರ ಕನ್ನಡಪ್ರಭ ವಾರ್ತೆ ಯಲಬುರ್ಗಾ
ಸಾರ್ವಜನಿಕರ ಹಿತದೃಷ್ಟಿಯಿಂದ ಅವರಿಗೆ ನ್ಯಾಯ ದೊರಕಿಸಿಕೊಡುವ ಆತ್ಮವಿಶ್ವಾಸವುಳ್ಳ ಸಂಸ್ಥೆ ಯಾವುದಾದರೂ ಇದ್ದರೆ ಅದು ಲೋಕಾಯುಕ್ತ ಸಂಸ್ಥೆಯಾಗಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಈ.ಟಿ. ಚಂದ್ರಶೇಖರ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನತೆ ಲೋಕಾಯುಕ್ತದ ಮೇಲೆ ನಂಬಿಕೆಯಿಟ್ಟು ನಮಗೆ ನ್ಯಾಯ ದೊರೆಯುತ್ತದೆಂಬ ಆಶಾಭಾವನೆಯಿಂದ ನಾನಾ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಈಗಲೂ ಲೋಕಾಯುಕ್ತ ಜನರ ಹಿತ ಕಾಯಲು ಬದ್ಧವಾಗಿದೆ ಎಂದರು.ಸಾರ್ವಜನಿಕರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗಾಗಿ ಇಲಾಖೆಗಳಿಗೆ ಬಂದರೆ ಅವರೊಂದಿಗೆ ಗೌರವಯುತವಾಗಿ ನಡೆದುಕೊಂಡು ಅರ್ಜಿಗಳನ್ನು ಪಡೆದು ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅವರು ಸಲ್ಲಿಸುವ ಅರ್ಜಿ ತಮ್ಮ ವ್ಯಾಪ್ತಿಯಲ್ಲಿ ಬರುತ್ತಿದ್ದರೆ ಮಾಡಿಕೊಡಿ, ಇಲ್ಲದ್ದಿದ್ದರೆ ಅವರ ಸಮಸ್ಯೆ ಇತ್ಯರ್ಥವಾಗುವ ವ್ಯಾಪ್ತಿಗೆ ಹೋಗುವಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಲಹೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಹಣ ಪಡೆಯುವುದಾಗಲಿ, ಆಮೀಷವೊಡ್ಡುವುದಾಗಲಿ ಯಾವ ಅಧಿಕಾರಿಗಳು ಮಾಡಬಾರದು. ಅಂತಹ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಮುಲಾಜಿಯಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂತಹ ಕೆಟ್ಟ ವ್ಯವಸ್ಥೆಗೆ ಯಾರು ಕೂಡ ಅವಕಾಶ ಕೊಡದಂತೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಸಾರ್ವಜನಿಕರಿಂದ ಅಹವಾಲು ಸ್ವೀಕಾರ:
ಪಟ್ಟಣದ ಛಲವಾದಿ ಸಮಾಜದ ಮುಖಂಡರಾದ ಸಿದ್ದಪ್ಪ ಕಟ್ಟಿಮನಿ, ಶಂಕರ ಜಕ್ಕಲಿ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ನಮ್ಮ ಸಮುದಾಯಕ್ಕೆ ಸೂಕ್ತ ರುದ್ರಭೂಮಿಯಿಲ್ಲ. ಹೀಗಾಗಿ ಸ.ನಂ. ೧೯೪ ವಿಸ್ತೀರ್ಣದ ೨ ಎಕರೆ ೦೬ ಗುಂಟೆ ಒತ್ತುವರಿ ಜಮೀನಿನಲ್ಲಿ ರುದ್ರಭೂಮಿ ಕಲ್ಪಿಸಿಕೊಡುವಂತೆ ಕೇಳಿಕೊಂಡರು. ಆಗ ಸ್ಥಳದಲ್ಲಿದ್ದ ತಹಸ್ಹೀಲ್ದಾರ್ ಬಸವರಾಜ ತೆನ್ನೆಳ್ಳಿ ಪ್ರತಿಕ್ರಿಯಿಸಿ ಈ ಜಮೀನು ಬೇರೆ ಸರ್ಕಾರಿ ಕಟ್ಟಡಕ್ಕೆ ನಿಗದಿಯಾಗಿದೆ. ಸಮಾಜ ಕಲ್ಯಾಣಾಧಿಕಾರಿ ಹಾಗೂ ಪಪಂ ಮುಖ್ಯಾಧಿಕಾರಿ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಡುವುದಾಗಿ ಭರವಸೆ ನೀಡಿದರು.ತಾಲೂಕಿನ ಯರೇಹಂಚಿನಾಳದ ಗ್ರಾಮದ ಶಿವಪ್ಪ ಹೊಟ್ಟಿನ, ಬೇವೂರು ಗ್ರಾಮದ ಶರಣಪ್ಪ ಪೋಳಟಗಿ, ಬಸಣ್ಣ ಅಂಗಡಿ, ಸಂಗನಾಳ ಸೇರಿದಂತೆ ಒಟ್ಟು ಸೇರಿ ೧೨ ನಾನಾ ಅರ್ಜಿಗಳು ಬಂದಿದ್ದು, ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಡಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐಗಳಾದ ರಾಜೇಶ ಬಟರ್ಗುಕಿ, ಸುನೀಲಕುಮಾರ, ವಿಜಯಕುಮಾರ, ಯಲಬುರ್ಗಾ ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಕುಕನೂರ ತಹಸೀಲ್ದಾರ್ ಅಶೋಕ ಶಿಗಾಂವಿ ಸೇರಿದಂತೆ ತಾಲೂಕು ಅಧಿಕಾರಿಗಳು, ಪಿಡಿಒ ಮತ್ತಿತರರು ಇದ್ದರು.