ಸಾರಾಂಶ
ಮುರುಘಾಮಠದಲ್ಲಿ ಬಿಬ್ಬಿಬಾಚಯ್ಯ ಜಯಂತಿ । ವಚನಗಳ ಗಾಯನ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಹನ್ನೆರಡನೆಯ ಶತಮಾನದ ಶರಣರೆಲ್ಲರೂ ತತ್ವನಿಷ್ಠೆಯ ಕಟಿಬದ್ಧ ಕಾಯಕದವರಾಗಿದ್ದು, ಯಾವುದಾದರೊಂದು ಸತ್ಯವನ್ನು ನಂಬಿದರೆ ಅದನ್ನು ಮಾಡಿ ಪೂರೈಸುವುದು ಅವರ ಧ್ಯೇಯವಾಗಿತ್ತು ಎಂದು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಕರ್ತೃವಿನ ಲೀಲಾವಿಶ್ರಾಂತಿ ಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಶಿವಶರಣ ಬಿಬ್ಬಿಬಾಚಯ್ಯ ಜಯಂತಿ ಆಚರಣೆ ಸಾನಿಧ್ಯವಹಿಸಿ ಮಾತನಾಡಿ, ಹಸಿದವರಿಗೆ ಅನ್ನ ನೀಡುವಂತಹ ಮಾದರಿ ಕೆಲಸವನ್ನು ಕಂತಿ ಭಿಕ್ಷೆಯ ಮೂಲಕ ಬೇಡಿ ತಂದು ಹಸಿವನ್ನು ನೀಗಿಸುವ ಉದಾತ್ತ ತತ್ವವನ್ನು 12ನೇ ಶತಮಾನದಲ್ಲಿ ಬಿಬ್ಬಿಬಾಚಯ್ಯ ಶರಣರು ಮಾಡಿದ್ದಾರೆ. ಆ ಮೂಲಕ ದಾಸೋಹ ತತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆಂದರು.ಬಿಬ್ಬಿಬಾಚಯ್ಯ ಜೀವನ ಬಹುಮುಖ ವ್ಯಕ್ತಿತ್ವದ್ದಾಗಿತ್ತು. ಹಸಿವು ನೀಗಿಸುವುದರೊಂದಿಗೆ ಶಿವಾನುಭವ ಗೋಷ್ಠಿಗಳ ಮೂಲಕ ಅನುಭಾವ ಹಂಚುವ, ಹಾಸ್ಯಗೋಷ್ಠಿಗಳನ್ನು ನಡೆಸುತ್ತಾ ನಗಿಸುವ ಕಾಯಕ ಮಾಡುತ್ತಿದ್ದರು. ಇದರಿಂದ ಅವರು ಶರಣಗಣದಲ್ಲಿ ವಿಶಿಷ್ಟ ಎಂದು ಅವರ ನಡೆಯಿಂದ ಗೊತ್ತಾಗುತ್ತದೆ ಎಂದರು.
ಗುರುಮಠಕಲ್‍ನ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಬಿಬ್ಬಿಬಾಚಯ್ಯ ಶರಣರು ಪವಾಡ ಮಾಡದಿದ್ದರೂ ಆ ಕಾಲಕ್ಕೆ ಅಂದಿನ ಜನತೆ ಅವರನ್ನು ಪವಾಡ ಪುರಷ ಎಂದೇ ನಂಬಿದ್ದರು. ಶರಣರು ಮಾಡುತ್ತಿದ್ದುದು ಸತ್ಯಶುದ್ಧ ಕಾಯಕವಾಗಿದ್ದರಿಂದ ಅವರು ಮಾಡಿದ್ದೆಲ್ಲವೂ ಪರಿಣಾಮ ಮತ್ತು ಪ್ರಭಾವ ಬೀರುವಂತಹ ಕೆಲಸಗಳಾಗಿದ್ದರಿಂದ ಅವು ಪವಾಡಸದೃಶ ಎಂದೇ ಬಿಂಬಿತವಾಗುತ್ತಿದ್ದವು ಎಂದರು.ಕರ್ನಾಟಕದಲ್ಲಿ ಕಾಯಕ ಮತ್ತು ದಾಸೋಹ ಸಂಸ್ಕೃತಿ 12ನೇ ಶತಮಾನದ ಅಮೂಲ್ಯ ಕೊಡುಗೆಗಳು. ಆ ಸಂಸ್ಕೃತಿ ಮುಂದುವರಿದ ಭಾಗವಾಗಿ ಸರ್ಕಾರ ಮಧ್ಯಾಹ್ನದ ಬಿಸಿಯೂಟದ ದಾಸೋಹದ ಮೂಲಕ ಗೋಚರಿಸಿದೆ. ಮಠ, ಆಶ್ರಮಗಳಲ್ಲಿ ದಾಸೋಹ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಅದು ಇನ್ನು ಹೆಚ್ಚು ಬೆಳಗಬೇಕು. ಬಿಬ್ಬಿಬಾಚಯ್ಯ ಶರಣರು ಕಂತಿ ಭಿಕ್ಷೆಯನ್ನು ಸ್ವತಃ ಬಂಡಿಯಲ್ಲಿ ಪಾತ್ರೆಗಳನ್ನಿಟ್ಟುಕೊಂಡು, ಅವರೇ ಸ್ವತಃ ಎಳೆದುಕೊಂಡು ಹೋಗುವ ಮಾನವೀಯ ಅಂತಃಕರಣ ಹೊಂದಿದ್ದರು. ಅಹಿಂಸಾವಾದಿ ತತ್ವ ಅವರಲ್ಲಿತ್ತು ಎಂದು ಬಣ್ಣಿಸಿದರು.
ಶಿರಸಂಗಿ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಬುದ್ಧ ರಾಜ್ಯವನ್ನು ತ್ಯಾಗ ಮಾಡಿದ ನಂತರ ಹಸಿವಿಗಾಗಿ ಭಿಕ್ಷೆ ಬೇಡಿದ ವಿಷಯ ಬರುತ್ತದೆ. ಕಂತಿ ಭಿಕ್ಷೆ ಮಾಡಿಕೊಂಡು ತಂದು ಶಿವಭಕ್ತ ಗಣಗಳಿಗೆ ಆರೋಹಣ ಮಾಡುವ ಸಮರ್ಪಣಾ ಭಾವ ಬಿಬ್ಬಿಬಾಚಯ್ಯ ಶರಣರಲ್ಲಿತ್ತು ಎಂದರು.ಸಾದರಹಳ್ಳಿಯ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ, ಬಿಬ್ಬಿಬಾಚಯ್ಯ ತಮ್ಮ ಕಾಯಕವನ್ನು ಎದೆಯುಬ್ಬಿಸಿ ಮಾಡುತ್ತಿದ್ದುದರಿಂದ ಅವರಿಗೆ ಬಿಬ್ಬಿಬಾಚಯ್ಯ ಎನ್ನುವ ಹೆಸರು ಬಂತು ಎಂದು ಉಲ್ಲೇಖಿಸಿದರು.
ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದ ತಿಪ್ಪೇರುದ್ರ ಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಪ್ರಾಚಾರ್ಯ ಎಸ್.ವಿ ರವಿಶಂಕರ್, ನಿವೃತ್ತ ಪ್ರಾಚಾರ್ಯ ಟಿ.ಪಿ ಸುಜ್ಞಾನಮೂರ್ತಿ, ಡಾ.ನವೀನ್ ಮಸ್ಕಲ್, ಎಸ್ ಜೆಎಂ ಬ್ಯಾಂಕಿನ ವ್ಯವಸ್ಥಾಪಕ ರಾಜಶೇಖರ್, ಪ್ರಾಧ್ಯಾಪಕಿ ಪ್ರತಿಮಾ ಜೆ. ಇದ್ದರು.ಜಮುರಾ ಸಂಗೀತ ಕಲಾವಿದ ಉಮೇಶ್ ಪತ್ತಾರ್ ಬಿಬ್ಬಿಬಾಚಯ್ಯರ ವಚನಗಳನ್ನು ಹಾಡಿದರು. ಐಟಿಐ ಕಾಲೇಜಿನ ಎಂ.ವಿಶ್ವನಾಥ್ ಸ್ವಾಗತಿಸಿದರು. ಎಸ್.ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವನಜಾಕ್ಷಿ ಜಗದೀಶ್ ಶರಣು ಸಮರ್ಪಣೆ ಮಾಡಿದರು. ಎಸ್ ಜೆಎಂ ಮುದ್ರಣಾಲಯದ ಬಿ.ಲೋಕೇಶ್, ಎಚ್.ಎಸ್ ಕೊಟ್ರೇಶ್‌ರನ್ನು ಸನ್ಮಾನಿಸಲಾಯಿತು.