ಸಾರಾಂಶ
ಆರ್ಥಿಕ ಸಂಕಷ್ಟವಿಲ್ಲ, ಅಗತ್ಯ ಪ್ರಾಧ್ಯಾಪಕರು ಸಿಬ್ಬಂದಿಯೂ ಇದ್ದಾರೆ, ಯಾವುದೇ ಸಮಸ್ಯೆ ಇಲ್ಲದಿದ್ದರೂ ‘ಮಹಾರಾಣಿ ವಿಶ್ವವಿದ್ಯಾಲಯ’ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಿತ್ಯ ನಡೆಯುವ ಅಬ್ಬರದ ಪ್ರತಿಭಟನೆ, ಹೋರಾಟ, ಚಳವಳಿಗಾರರ ಆಕ್ರೋಶದ ಕೂಗು, ಘೋಷಣೆ, ಭಾಷಣಗಳೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಲಿಂಗರಾಜು ಕೋರಾ
ಬೆಂಗಳೂರು : ಆರ್ಥಿಕ ಸಂಕಷ್ಟವಿಲ್ಲ, ಅಗತ್ಯ ಪ್ರಾಧ್ಯಾಪಕರು ಸಿಬ್ಬಂದಿಯೂ ಇದ್ದಾರೆ, ಶೈಕ್ಷಣಿಕ ಚಟುವಟಿಕೆಗೆ ಬೇರೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ’ಕ್ಕೆ ಪಕ್ಕದಲ್ಲೇ ಇರುವ ಸ್ವಾತಂತ್ರ್ಯ ಉದ್ಯಾನದಲ್ಲಿ ನಿತ್ಯ ನಡೆಯುವ ಅಬ್ಬರದ ಪ್ರತಿಭಟನೆ, ಹೋರಾಟ, ಚಳವಳಿಗಾರರ ಆಕ್ರೋಶದ ಕೂಗು, ಘೋಷಣೆ, ಭಾಷಣಗಳೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಪ್ರತಿಭಟನಾಕಾರರ ಕೂಗು ಸರ್ಕಾರಕ್ಕೆ ಮುಟ್ಟುವ ಮೊದಲು ಈ ವಿವಿಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು, ಬೋಧಕರು ಅಧಿಕಾರಿಗಳ ಕಿವಿಗೆ ಅಪ್ಪಳಿಸುತ್ತವೆ. ಇದರಿಂದ ತರಗತಿ ಚಟುವಟಿಕೆಯಲ್ಲಿ ಪ್ರಾಧ್ಯಾಪಕರು ಗಂಟಲು ಹರಿದುಕೊಂಡು ಪಾಠ ಮಾಡಬೇಕಾಗಿದೆ. ಬಹುತೇಕ ಪ್ರತಿಭಟನೆಯಲ್ಲಿ ಧ್ವನಿವರ್ಧಕ ಬಳಸುವುದರಿಂದ ಹೋರಾಟಗಾರರ ಕಿಚ್ಚು ಹೆಚ್ಚಿದ್ದಾಗ ಬೋಧಕರು ಎಷ್ಟು ಕಿರುಚಿದರೂ ಮಕ್ಕಳಿಗೆ ಪಾಠ ಕೇಳಿಸದೆ ತರಗತಿಯನ್ನೇ ಮುಂದೂಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.
ಪ್ರತಿಭಟನೆ ನಡೆಸುವವರ ಬಗ್ಗೆ ನಮ್ಮ ಯಾವ ಆಕ್ಷೇಪವೂ ಇಲ್ಲ. ಪ್ರತಿಭಟನೆ ಎಲ್ಲರ ಹಕ್ಕು. ಆದರೆ, ತರಗತಿ ಚಟುವಟಿಕೆಗಳಿಗೆ ಅಡಚಣೆ ಆಗದ ರೀತಿಯಲ್ಲಿ ಧ್ವನಿವರ್ಧಕ ಬಳಸದಂತೆ ಅಥವಾ ಕಡಿಮೆ ಧ್ವನಿ ಬಳಕೆ ಮಾಡಬೇಕು ಎನ್ನುವುದು ನಮ್ಮ ಮನವಿ. ತರಗತಿ ಬೋಧನೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಪೊಲೀಸರಿಗೂ ದೂರು ನೀಡಿದ್ದೇವೆ. ನಮ್ಮ ವಿವಿಗೆ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವ ಜನಪ್ರತಿನಿಧಿಗಳೆಲ್ಲರ ಗಮನಕ್ಕೂ ತಂದಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ವಿವಿಯ ಅಧಿಕಾರಿಗಳು.
ಸರ್ಕಾರ ಕನಿಷ್ಠ ಪಕ್ಷ ಪ್ರತಿಭಟನಾಕಾರ ಆಕ್ರೋಶದ ಕಿಚ್ಚು, ಘೋಷಣೆ, ಭಾಷಣಗಳು ವಿವಿಯ ಆವರಣ ತಲುಪದಂತೆ ಸ್ವಾತಂತ್ರ್ಯ ಉದ್ಯಾನದ ರಸ್ತೆ ಪಕ್ಕದಲ್ಲಿ ಒಂದು ತಡೆ ಗೋಡೆ ನಿರ್ಮಿಸುವ ಅಥವಾ ಧ್ವನಿವರ್ಧಕ ಬಳಸದಂತೆ, ಬಳಸಿದರೂ ತೀರಾ ಕಡಿಮೆ ಶಬ್ದ ಬಳಸುವಂತೆ ಷರತ್ತು ವಿಧಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಅಧಿಕಾರಿಗಳು, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ಮನವಿಯಾಗಿದೆ.
ಸಂಶೋಧನಾ ಚಟುವಟಿಕೆಗೆ ಗ್ರಹಣ:
ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲೂ ಐದು ವರ್ಷಗಳಾದರೂ ಸಂಶೋಧನಾ ಚುಟವಟಿಕೆಗಳು ಆರಂಭವಾಗಿಲ್ಲ. ವಿವಿಯಲ್ಲಿ ಉತ್ತಮ ಮೂಲಸೌಕರ್ಯ, ಏಳು ಸ್ನಾತಕೋತ್ತರ ಪದವಿ, 34 ಪದವಿ ಕೋರ್ಸುಗಳಿಗೆ ಸುಮಾರು 5000 ವಿದ್ಯಾರ್ಥಿಗಳ ದಾಖಲಾತಿ, 150ಕ್ಕೂ ಹೆಚ್ಚು ಕಾಯಂ ಪ್ರಾಧ್ಯಾಪಕರು, 80 ಅತಿಥಿ ಉಪನ್ಯಾಸಕರು, ಸಂಶೋಧನಾ ಚಟುವಟಿಕೆಗೆ ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ನುರಿತ ಮಾರ್ಗದರ್ಶಕರು, ನ್ಯಾಕ್ ಎ+ ಶ್ರೇಣಿಯ ಮಾನ್ಯತೆ. ಯುಜಿಸಿಯಿಂದ 12 ಬಿ ಮಾನ್ಯತೆ ಸೇರಿ ಎಲ್ಲವೂ ಇದ್ದರೂ ಸಂಶೋಧನಾ ಚಟುವಟಿಕೆಗಳಿಗೆ ಮಾತ್ರ ಗ್ರಹಣ ಆವರಿಸಿದೆ.
ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿದ ಬಳಿಕ ಇಲ್ಲಿನ ಪ್ರಾಧ್ಯಾಪಕರನ್ನು ಈ ವಿವಿಗಳಲ್ಲಿ ವಿಲೀನಗೊಳಿಸದ ಕಾರಣ ಅವರೆಲ್ಲರೂ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲೇ ಇದ್ದಾರೆ. ವಿವಿಯಲ್ಲೇ ಉಳಿಯುವ ಅಥವಾ ಬೇರೆ ಕಡೆ ವರ್ಗಾವಣೆಯಾಗಿ ಹೋಗಲೂ ಅವರಿಗೆ ಅವಕಾಶವನ್ನೂ ನೀಡಿಲ್ಲ. ಈ ಪ್ರಕ್ರಿಯೆ ನಡೆಯದೆ ಯಾರನ್ನೂ ಸಂಶೋಧನಾ ಮಾರ್ಗದರ್ಶಕರಾಗಿ ನೇಮಿಸಲೂ ಸಾಧ್ಯವಾಗುವುದಿಲ್ಲ. ಇನ್ನು, ಪಿಎಚ್.ಡಿ ಅಧ್ಯಯನ ಆರಂಭಿಸಲು ಅಗತ್ಯ ನಿಯಮಗಳನ್ನು ರೂಪಿಸಿ ರಾಜ್ಯಪಾಲರಿಗೆ ಕಳುಹಿಸಿ ವರ್ಷವಾಗಿದೆ. ನಿಯಮಗಳಲ್ಲಿ ಕೆಲ ಬದಲಾವಣೆಗೆ ಸೂಚಿಸಿ ಎರಡು ಮೂರು ಬಾರಿ ವಾಪಸ್ ಕಳುಹಿಸಿದ್ದ ಕಡತವನ್ನು ಪರಿಷ್ಕರಿಸಿ ವಿವಿಗಳು ರಾಜಭವನಕ್ಕೆ ಮತ್ತೆ ಸಲ್ಲಿಸಿವೆ. ಆದರೆ, ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಇದಕ್ಕೆ ಅನುಮೋದನೆ ದೊರೆತು ಪ್ರಾಧ್ಯಾಪಕರ ವಿಲೀನ ಆದ ಕೂಡಲೇ ಸಂಶೋಧನಾ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ವಿವಿಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ರೂಸಾ ಯೋಜನೆಯಡಿ 55 ಕೋಟಿ ಅನುದಾನ:
ಮಹಾರಾಣಿ ಕ್ಲಸ್ಟರ್ ವಿವಿಗೆ ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ ಈ ಹಿಂದೆ 55 ಕೋಟಿ ರು. ಅನುದಾನ ಲಭಿಸಿದೆ. ಕಳೆದ ವರ್ಷ ಕೂಡ ಪಿಎಂ ಉಷಾ ಯೋಜನೆಯಡಿ ಹೆಚ್ಚುವರಿ 19 ಕೋಟಿ ರು. ಅನುದಾನ ದೊರಕಿದೆ. ರಾಜ್ಯ ಸರ್ಕಾರ ಕೂಡ 1.5 ಕೋಟಿ ರು. ಅನುದಾನ ನೀಡಿತ್ತು. ಈ ಅನುದಾನದಲ್ಲಿ ಮಹಾರಾಣಿ ವಿವಿಯು ಆಡಳಿತ ವಿಭಾಗದ ಕಟ್ಟಡ ಮತ್ತು 1000 ಮಂದಿ ಉಳಿಯಬಹುದಾದ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕದಿಂದ ಪ್ರತಿ ವರ್ಷ ಐದು ಕೋಟಿ ರು.ಗಳಿಗೂ ಹೆಚ್ಚು ಆದಾಯ ಬರುತ್ತದೆ. ಆ ಹಣದಲ್ಲೇ ವಿವಿಯನ್ನು ನಿರ್ವಹಿಸಲಾಗುತ್ತಿದೆ. ಕಾಯಂ ನೌಕರರಿಗೆ ಸರ್ಕಾರವೇ ವೇತನ ನೀಡುತ್ತಿದೆ. ಉಳಿದ ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರಿಗೆ ವಿವಿಯ ಆಂತರಿಕ ಸಂಪನ್ಮೂಲದಿಂದಲೇ ವೇತನ ನೀಡಲಾಗುತ್ತಿದೆ. ಆದರೆ, 87 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ವಿವಿಯ ಆವರಣದ ಹಳೆಯ ಕಟ್ಟಡಗಳ ದುರಸ್ತಿಗೆ ವಿವಿಯು ಹಣಕಾಸು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರದ ನೆರವಿಗೆ ಬೇಡಿಕೆ ಇಟ್ಟಿದೆ.
ಕಾಯಂ ಕುಲಪತಿ ಇಲ್ಲ:
ವಿವಿಯ ನಿರ್ಗಮಿತ ಕುಲಪತಿ ಪ್ರೊ.ಗೋಮತಿ ದೇವಿ ಅವರು ನಿವೃತ್ತರಾಗಿ ತಿಂಗಳು ಕಳೆದರೂ ಹೊಸ ಕುಲಪತಿಗಳ ನೇಮಕವಾಗಿಲ್ಲ. ಪ್ರಭಾರ ಕುಲಪತಿಯಾಗಿ ಪ್ರೊ.ಸಿ.ಉಷಾದೇವಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಐತಿಹಾಸಿಕ ಕಾಲೇಜು ವಿವಿಯಾಗಿದ್ದು ಹೇಗೆ?:
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ಮೂಲಸೌಕರ್ಯ, ಶ್ರೇಷ್ಠ ಅಧ್ಯಾಪಕ ವೃಂದ ಸೇರಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ಉನ್ನತ ಗ್ರೇಡ್ ಪಡೆದ ದೇಶದ ಹಲವು ಕಾಲೇಜುಗಳಿಂದ ವಿಶ್ವವಿದ್ಯಾಲಯದ ಸ್ಥಾನಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ, ಅರ್ಜಿ ಸಲ್ಲಿಸಿದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ (1938ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ವಾಣಿ ವಿಲಾಸ ಸನ್ನಿಧಾನ ಕೆಂಪನಂಜಮ್ಮಣಿ ಅವರ ಸ್ಮರಣಾರ್ಥ ಉದಾತ್ತ ಧ್ಯೇಯದೊಂದಿಗೆ ಸ್ಥಾಪಿಸಿದ್ದು) ಅವಕಾಶ ಸಿಕ್ಕಿತು. ರೂಸಾ ಯೋಜನೆಯಡಿ ತಲಾ 55 ಕೋಟಿ ರು. ಅನುದಾನ ಸಹ ದೊರೆಯಿತು. ಹಾಗಾಗಿ ರಾಜ್ಯ ಸರ್ಕಾರ 2018ರಲ್ಲಿ ಕಾಯ್ದೆ ರೂಪಿಸಿ, 2019ರಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಜೊತೆಗೆ ಪಕ್ಕದಲ್ಲೇ ಇರುವ ವಿಎಚ್.ಡಿ ಕೇಂದ್ರ, ಗೃಹ ವಿಜ್ಞಾನ ಕಾಲೇಜು, ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳನ್ನು ಸೇರಿಸಿ ಮಹಾರಾಣಿ ಕ್ಲಸ್ಟರ್ ವಿವಿಯಾಗಿ ಅಸ್ತಿತ್ವಕ್ಕೆ ತರಲಾಯಿತು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಹೊರತುಪಡಿಸಿ ಉಳಿದೆಲ್ಲ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರಾಧ್ಯಾಪಕರ ವಿಲೀನ, ಸ್ಟ್ಯಾಚ್ಯೂಟ್‌ಗೆ ಅನುಮೋದನೆ ಸಿಕ್ಕ ಕೂಡಲೇ ಸಂಶೋಧನಾ ಚಟುವಟಿಕೆಗಳನ್ನು ಆರಂಭಿಸಲಾಗುವುದು. ವಿವಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸರ್ಕಾರದ ಆರ್ಥಿಕ ಸಹಕಾರವೂ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಪ್ರತಿಭಟನೆಗಳಿಂದ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಸರ್ಕಾರ ಪರಿಹಾರ ಕಲ್ಪಿಸಬೇಕು.
- ಪಿ.ವಿ. ಉಷಾದೇವಿ, ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ (ಪ್ರಭಾರ)