ಬಾಲ್ಯ ವಿವಾಹ ನಡೆಯದಂತೆ ಕಟ್ಟೆಚ್ಚರ ವಹಿಸಿ

| Published : Jul 25 2024, 01:15 AM IST

ಬಾಲ್ಯ ವಿವಾಹ ನಡೆಯದಂತೆ ಕಟ್ಟೆಚ್ಚರ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಕಟ್ಟೆಚ್ಚರವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಕಟ್ಟೆಚ್ಚರವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಹಿಳೆ ಮತ್ತು ಅಪ್ರಾಪ್ತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮ ಮತ್ತು ಕಟ್ಟು ನಿಟ್ಟಿನ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.ಬಾಲ್ಯ ವಿವಾಹ ನಿಷೇಧ ಕಾಯ್ದೆ ಯೋಜನೆಯಡಿ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಬಸವ ಜಯಂತಿ, ಮತ್ತಿತರ ಸಂದರ್ಭಗಳಲ್ಲಿ ವೈಯಕ್ತಿಕ ವಿವಾಹ ಹಾಗೂ ಸಾಮೂಹಿಕ ವಿವಾಹಗಳು ನಡೆಯುವ ಸಾಧ್ಯತೆಯಿರುತ್ತದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜರುಗುವ ಸಾಮೂಹಿಕ ವಿವಾಹ ಅಥವಾ ವೈಯಕ್ತಿಕ ವಿವಾಹಗಳ ಸಂದರ್ಭದಲ್ಲಿ ಯಾವುದೇ ಬಾಲ್ಯವಿವಾಹಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ 2024ರ ಏಪ್ರಿಲ್ ಮಾಹೆಯಿಂದ ಜೂನ್ ಅಂತ್ಯದವರೆಗೆ 4763 ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡಿರುವ ಬಗ್ಗೆ ಮಾಹಿತಿ ಪಡೆದ ಅವರು ಗುರಿ ಸಾಧನೆಯಲ್ಲಿ ಹಿಂದುಳಿದ ಶಿರಾ ಹಾಗೂ ತುಮಕೂರು ತಾಲೂಕು ಅಧಿಕಾರಿಗಳಿಗೆ ಒಂದು ವಾರದೊಳಗೆ ಗುರಿ ಸಾಧಿಸುವಂತೆ ಸೂಚನೆ ನೀಡಿದರು.ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು, ಮೊದಲ ತ್ರೈಮಾಸಿಕದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿದ್ದ 68 ಪ್ರಕರಣಗಳಲ್ಲಿ 40 ಪ್ರಕರಣಗಳನ್ನು ಸಮಾಲೋಚನೆ ಮೂಲಕ ಇತ್ಯರ್ಥಪಡಿಸಲಾಗಿದೆ. ಉಳಿದಂತೆ ನ್ಯಾಯಾಲಯದಲ್ಲಿ 11 ಹಾಗೂ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ 17 ಸೇರಿ ಒಟ್ಟು 28 ಪ್ರಕರಣಗಳು ಬಾಕಿಯಿವೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಸ್ವಾಂತ್ವನ ಕೇಂದ್ರಗಳಲ್ಲಿ ಒಟ್ಟು 350 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 331 ಪ್ರಕರಣಗಳು ಇತ್ಯರ್ಥಗೊಂಡು 19 ಪ್ರಕರಣಗಳು ಬಾಕಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ 2024ರ ಜನವರಿ ಮಾಹೆಯಿಂದ ಜೂನ್ ಮಾಹೆಯವರೆಗೆ ಒಟ್ಟು 63 ಪ್ರಕರಣಗಳು ದಾಖಲಾಗಿದ್ದು, 25 ಪ್ರಕರಣಗಳು ವಿಲೇವಾರಿಯಾಗಿ 38 ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಅತ್ಯಾಚಾರ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಸಮಾಲೋಚನೆ ವೈದ್ಯಕೀಯ, ಕಾನೂನು ಸಲಹೆ, ಪೊಲೀಸ್ ನೆರವನ್ನು ಒಂದೇ ಸೂರಿನಡಿ ಒದಗಿಸಲು ತೆರೆಯಲಾದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯಡಿ 154 ಪ್ರಕರಣಗಳು ದಾಖಲಾಗಿವೆ ಎಂದರು. ಜಿಲ್ಲೆಯಲ್ಲಿ ಪೋಷಣ್ ಅಭಿಯಾನ ಯೋಜನೆ ಮೂಲಕ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆ, ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಹಾಗೂ 15 ರಿಂದ 49 ವರ್ಷದ ಕಿಶೋರಿ/ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆಯನ್ನು ಕಡಿಮೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.