ವೃತ್ತಿ ರಂಗಭೂಮಿ ಗತವೈಭವ ಮರುಕಳಿಸಲಿ: ಡಾ. ಲಕ್ಷ್ಮಣ ದಾಸ್‌

| Published : Nov 08 2024, 12:34 AM IST

ವೃತ್ತಿ ರಂಗಭೂಮಿ ಗತವೈಭವ ಮರುಕಳಿಸಲಿ: ಡಾ. ಲಕ್ಷ್ಮಣ ದಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಗುರುವಾರ ವೃತ್ತಿ ರಂಗಭೂಮಿ ರಂಗಾಯಣ ಹಮ್ಮಿಕೊಂಡಿದ್ದ ರಂಗ ಸಂಗೀತ: ವೃತ್ತಿ ರಂಗ ಗೀತೆಗಳ ಕಲಿಕಾ ಕಾರ್ಯಾಗಾರ ಸಮಾರೋಪದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಮಕೂರಿನ ಹಿರಿಯ ರಂಗಕರ್ಮಿ ಡಾ.ಲಕ್ಷ್ಮಣ ದಾಸ್ ಮಾತನಾಡಿದರು

- ಶ್ರೀ ಶಿವಯೋಗಿ ಮಂದಿರದಲ್ಲಿ ವೃತ್ತಿ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಸಮಾರೋಪ- ಅಭಿನಯ ಸಂಗೀತ ಪ್ರದರ್ಶನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೃತ್ತಿ ರಂಗಭೂಮಿ ಪರಂಪರೆ ಮತ್ತೆ ಮುಂದುವರಿಯುವ ಜೊತೆಗೆ ಭೂಮಿ ಎಂಬ ಹಿರಿಮೆ ಹೊಂದಿರುವ ಏಕೈಕ ಕ್ಷೇತ್ರವಾದ ರಂಗಭೂಮಿಯು ಮತ್ತೆ ಗತವೈಭವ ಕಾಣುವಂತಾಗಲಿ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಮಕೂರಿನ ಹಿರಿಯ ರಂಗಕರ್ಮಿ ಡಾ.ಲಕ್ಷ್ಮಣ ದಾಸ್ ಹೇಳಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯಿಂದ ಹಮ್ಮಿಕೊಂಡಿದ್ದ ರಂಗ ಸಂಗೀತ: ವೃತ್ತಿ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಸಮಾರೋಪ ಹಾಗೂ ಅಭಿನಯ ಸಂಗೀತ ಪ್ರದರ್ಶನದಲ್ಲಿ ಅವರು ಮಾತನಾಡಿದರು. ನಾಟಕ ಕಂಪನಿಗಳ ಗೀತೆಗಳು ಒಂದು ಕಾಲದಲ್ಲಿ ರೋಮಾಂಚನ ತರುತ್ತಿದ್ದವು. ಅಂತಹ ವೃತ್ತಿ ರಂಗಭೂಮಿ ಪರಂಪರೆ ಮತ್ತೆ ಮುಂದುವರಿಯಬೇಕು ಎಂದರು.

ವೃತ್ತಿ ರಂಗಭೂಮಿ ಮತ್ತು ರಂಗ ಗೀತೆಗಳು ಮತ್ತೆ ಹಳೆಯ ಲಯಕ್ಕೆ ಮರಳಬೇಕು. ಸಾಹಿತ್ಯವೂ ಒಳಗೊಂಡಂತೆ ಯಾವುದೇ ಕ್ಷೇತ್ರಕ್ಕೆ ಭೂಮಿ ಎಂಬ ಪರಂಪರೆ ಇಲ್ಲ. ಅಪರೂಪದ ರಂಗಭೂಮಿಯನ್ನು ಪ್ರೇಕ್ಷಕರು ಸಹ ಉಳಿಸಿ, ಬೆಳೆಸಬೇಕು. ನಾಟಕದ ಆರಂಭಿಕ ಹಾಡುವುದು ಹೆಚ್ಚು ಸಂತಸವನ್ನು ಮೂಡಿಸಿದೆ. ವರನಟ ಡಾ.ರಾಜಕುಮಾರ, ಮಾಸ್ಟರ್ ಹಿರಣ್ಣಯ್ಯ ಮುಸುರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಪ್ರಸ್ತುತಪಡಿಸುತ್ತಿದ್ದ ನಾಂದಿ ಗೀತೆಗಳು ಮನೋಹರವಾಗಿರುತ್ತಿದ್ದವು. ಕನ್ನಡ ವೃತ್ತಿ ರಂಗಭೂಮಿಯಲ್ಲಿನ ಅನೇಕ ಹಾಡುಗಳನ್ನು ಯೋಗಾನರಸಿಂಹ ನೀಡಿದ್ದಾರೆ. ಯೋಗಾನರಸಿಂಹರು ರಂಗಗೀತೆಗಳನ್ನು ನೀಡಿದರೆ, ಡಾ.ರಾಜಕುಮಾರ, ಹೊನ್ನಪ್ಪ ಭಾಗವತರ್ ಮತ್ತಿತರೆ ಹಿರಿಯ ಕಲಾವಿದರು ಬೇಡರ ಕಣ್ಣಪ್ಪ ಪಾತ್ರವನ್ನು ಅಕ್ಷರಶಃ ಜೀವಂತಗೊಳಿಸಿದರು ಎಂದು ಅವರು ಸ್ಮರಿಸಿದರು.

ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಆರಂಭದಲ್ಲೇ ರಂಗಗೀತೆಗಳ ಶಿಬಿರ ಏರ್ಪಡಿಸಿದ್ದು ಮಾದರಿ ಕಾರ್ಯ. ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಇಲ್ಲಿ ಜವಾಬ್ದಾರಿ ವಹಿಸಿಕೊಂಡಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಡಾ. ಲಕ್ಷ್ಮಣದಾಸ್ ಮನವಿ ಮಾಡಿದರು.

ಹಿರಿಯ ಸಾಹಿತಿ, ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ಹರಿಹರ ತಾಲೂಕು ಕೊಂಡಜ್ಜಿ ಗುಡ್ಡಕ್ಕೂ, ರಂಗಭೂಮಿಗೂ ಅವಿನಾಭಾವ ಸಂಬಂಧವಿದೆ. ಬಿ.ವಿ.ಕಾರಂತರು ಕೊಂಡಜ್ಜಿ ಗುಡ್ಡಕ್ಕೆ ಭೇಟಿ ನೀಡಿದ್ದ ವೇಳೆ ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಸಮನ್ವಯ ಆಗಬೇಕು ಎಂಬುದಾಗಿ ಹೇಳಿದ್ದರು. ಆಗಿನ ರಾಜಕಾರಣದ ಹಿನ್ನೆಲೆ ರಂಗಾಯಣವು ಮೈಸೂರಿನಲ್ಲಿ ಸ್ಥಾಪನೆಯಾಯಿತು ಎಂದು ಮೆಲಕು ಹಾಕಿದರು.

ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಹಾಡಿನ ಮಾಧುರ್ಯವನ್ನು ಮರುರೂಪಿಸುವ ಕಾರ್ಯವನ್ನು ಇಲ್ಲಿ ಮಾಡಿದ್ದೇವೆ. 39 ಜನರಲ್ಲಿ 18 ಕಲಾವಿದರನ್ನು ಮೊದಲ ಸಲ ಆಯ್ಕೆ ಮಾಡಿಕೊಂಡೆವು. ವೃತ್ತಿ ರಂಗಭೂಮಿ ಸಂಗೀತದ ಪರಂಪರೆ, ನಾಟ್ಯ ಪರಿಚಯ ಮಾಡಿ ಅಭಿನಯ ಕಲಿಸಲಾಗಿದೆ. ನಿರ್ಮಾಣ ಹಂತದ ರಂಗಮಂದಿರದ ಮಧ್ಯ ಭಾಗದ ಪಿಲ್ಲರ್ ತೆಗೆದು ಹಾಕಬೇಕು. ಸ್ಮಾರ್ಟ್ ಸಿಟಿಯಡಿ ಶೀರ್ಘ ಕಾಮಗಾರಿ ಮುಗಿಸಿ ರಂಗಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ವೃತ್ತಿ ರಂಗಭೂಮಿ ರಂಗಾಯಣದ ವಿಶೇಷ ಅಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಸಾವಿತ್ರಿ ರಿತ್ತಿ, ಧಾರವಾಡದ ಹಿರಿಯ ರಂಗ ನಿರ್ದೇಶಕ ರಂಗಕರ್ಮಿ ಪ್ರಕಾಶ ಗರುಡ, ಕಲಾವಿದ ರಾಘವ ಕಮ್ಮಾರ ಇತರರು ಇದ್ದರು. ಡಾ. ಶೃತಿ ರಾಜ್ ನಿರೂಪಿಸಿದರು.

.