ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
"ಏನ್ ಕರ್ಮರೀ ನನ್ನದು ಎಲ್ಲ ಕೆಲಸವನ್ನು ನಾನೇ ಹೇಳಬೇಕಾ, ನಾನೇನು ನನ್ನ ಸ್ವಂತ ಕೆಲಸವನ್ನು ಮಾಡಲು ಹೇಳುತ್ತೇನಾ ಸಾರ್ವಜನಿಕರ ಕೆಲಸ ಮಾಡುವುದಿಲ್ಲ ಎಂದರೆ ಹೇಗೆ? " ಇದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಪರಿ.ಲೋಕೋಪಯೋಗಿ ಇಲಾಖೆ ಸೇರಿದ ರಸ್ತೆಗಳನ್ನೆ ಒತ್ತುವರಿ ಮಾಡಿ ಬೇಲಿ ನಿರ್ಮಿಸಿದರೂ ಕೇಳುವುದಿಲ್ಲ. ಮಳೆ ನೀರು ಹರಿಯಲು ಕಾಲುವೆ ನಿರ್ಮಿಸಿ ರಸ್ತೆಗೆ ಬಾಗಿರುವ ಮರಗಳನ್ನು ತೆರವುಗೊಳಿಸಿ ಎಂದು ಕಳೆದ ಸಭೆಯಲ್ಲಿ ಹೇಳಿದ್ದರೂ ಯಾವುದೇ ಕೆಲಸವಾಗಿಲ್ಲ. ತಿಳಿದು ಕೆಲಸ ಮಾಡುವುದು ಬೇಡ. ನಾನು ಹೇಳಿದರೂ ಕೆಲಸ ಮಾಡುವುದಿಲ್ಲ ಎಂದರೆ ಹೇಗೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
ಬೆಟ್ಟದ ಬೈರವೇಶ್ವರ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಿಂದಿನ ಸಭೆಯಲ್ಲೆ ಹೇಳಿದ್ದೆ. ಇನ್ನೊಂದು ವಾರದಲ್ಲಿ ಕೆಲಸವಾಗಲಿದೆ ಎಂದು ಹೇಳಿಕೆ ನೀಡಿದ್ದಿರಿ. ಆರು ತಿಂಗಳಾದರೂ ಇನ್ನೂ ಕಥೆ ಹೇಳುತ್ತಿದ್ದೀರ. ಕೆಲಸ ಮಾಡುವ ಮನಸ್ಸಿದ್ದರೆ, ಕಾಮಗಾರಿ ನಡೆಸಲು ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದಿರಿ. ನಿಮಗೆ ಕೆಲಸ ಮಾಡುವ ಮನಸ್ಸೆ ಇಲ್ಲ. ಹೀಗಾದರೆ ಹೇಗೆ ಎಂದು ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್ ವಿರುದ್ಧ ಹರಿಹಾಯ್ದರು.ತಾಲೂಕಿನಲ್ಲಿ ಸಾಕಷ್ಟು ಶಾಲೆಗಳ ಜಮೀನು ದಾನಿಗಳ ಹೆಸರಿನಲ್ಲೆ ಇದೆ. ತಕ್ಷಣವೆ ಈ ಎಲ್ಲ ಶಾಲಾ ಜಾಗಗಳನ್ನು ಕಾಲಮಿತಿಯಲ್ಲಿ ಶಾಲೆಗಳ ಹೆಸರಿಗೆ ನೋಂದಾಯಿಸಿ ಎಂದು ಹಿಂದಿನ ಸಭೆಯಲ್ಲೆ ಸೂಚನೆ ನೀಡಿದ್ದರೂ ಇಂದಿಗೂ ಅದೇ ಉತ್ತರ ನೀಡುತ್ತಿದ್ದೀರಿ. ಇದ್ಯಾಕೆ ಹೀಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಅವರನ್ನು ಪ್ರಶ್ನಿಸಿದರು. ಮುಂದಿನ ಸಭೆಯ ಒಳಗಾದರೂ ಹೇಳಿದ ಕೆಲಸ ಮಾಡಿ ಎಂದರು.
ಎತ್ತಿನಹೊಳೆ ಎಂಬುದು ಸಕಲೇಶಪುರ ಹಾಗೂ ಆಲೂರು ತಾಲೂಕಿಗೆ ಶಾಪವಾಗಿ ಕಾಡುತ್ತಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಸದ ಪರಿಣಾಮ ಸಾಕಷ್ಟು ಗ್ರಾಮಸ್ಥರು ಸಮಸ್ಯೆ ಎದುರಿಸುತಿದ್ದಾರೆ. ಸಮಸ್ಯೆ ಉದ್ಭವಿಸದಂತೆ ಕೆಲಸ ಮಾಡಿ ಎಂದರೆ "ಎಮ್ಮೆ ಮೇಲೆ ಮಳೆ ಬಿದ್ದಂತೆ ಕೆಲಸ ಮಾಡುತ್ತೀರ " ಎಂದು ಎತ್ತಿನಹೊಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕಾನೂನಿನ ಹೆಸರು ಹೇಳಿಕೊಂಡು ರಸ್ತೆ, ದೇವಸ್ಥಾನ, ಶಾಲೆಗಳ ನಿರ್ಮಾಣಕ್ಕೂ ತೊಂದರೆ ನೀಡುತ್ತಿದ್ದಿರ. ಈ ಹಿಂದಿನಿಂದಲೂ ಹಲವು ಬಾರಿ ಸರ್ಕಾರಿ ಕಾಮಗಾರಿಗೆ ಅಡ್ಡಿಪಡಿಸಬೇಡಿ ಎಂದು ಹೇಳಿದರೂ ಕೇಳುವುದಿಲ್ಲ. ಹೀಗಾದರೆ ನಮಗೇನು ಬೆಲೆ ಬಂತು. ಅಗತ್ಯವಿರುವ ಕೆಲಸವನ್ನು ಬಿಟ್ಟು ಬೇಡದ ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೀರ ಎಂದು ಯಸಳೂರು ಹಾಗೂ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಅಸಮಧಾನ ಹೊರಹಾಕಿದರು. ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ವಿಪರೀತಗೊಂಡಿದ್ದು ಒಂಟಿಯಾಗಿ ಸಂಚರಿಸುವುದು ದುಸ್ತರ ಎಂಬಂತಾಗಿದೆ. ಬೀದಿ ನಾಯಿ ನಿಯಂತ್ರಣ ಯಾವ ಇಲಾಖೆಗೆ ಬರಲಿದೆ ಎಂಬುದು ತಿಳಿಯದಾಗಿದೆ ಎಂದರು. ಈ ವೇಳೆ ಪುರಸಭೆ ಮುಖ್ಯಾದಿಕಾರಿ ನಟರಾಜ್ ಮಾಹಿತಿ ನೀಡಿ ಬೀದಿನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಮೂರು ಬಾರಿ ಟೆಂಡರ್ ಕರೆದರೂ ಯಾರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ. ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದರು.
ಸಾವಿರಕ್ಕಿಂತ ಹೆಚ್ಚು ಕಾರ್ಡ್‌ಗಳಿರುವ ಐದು ಗ್ರಾಮಗಳಲ್ಲಿ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಅಂಜಲಿ ಮಾಹಿತಿ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಮೇಘನಾ, ತಾಲೂಕು ಪಂಚಾಯತ್ ಇಒ ಗಂಗಾಧರ್, ಎಡಿ ಅಧಿತ್ಯಾ ಉಪಸ್ಥಿತರಿದ್ದರು.