ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕುಲಾಂತರಿ ನಿರ್ಮೂಲನೆ ಸೇರಿದಂತೆ ವಿವಿಧ ಭೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಸ್ವಾಮಿ ಬಣ) ವತಿಯಿಂದ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಆರ್. ಲಕ್ಷ್ಮೀ ನಾರಾಯಣ್, ದೇಶದ ಕೃಷಿ ವ್ಯವಸ್ಥೆಯ ಮೇಲೆ ಮತ್ತು ಜನ ಸಮುದಾಯದ ಮೇಲೆ ದುಷ್ಪರಿಣಾಮ ಬೀರಬಲ್ಲ ಕುಲಾಂತರಿ ಬೆಳೆಗಳನ್ನು ಬೆಳಸುವ ಮೂಲಕ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಮುಂದಾದ ವಿದೇಶಿ ಬಂಡವಾಳಶಾಹಿ ಕಂಪನಿಗಳ ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.
ಕೃಷಿ ವ್ಯವಸ್ಥೆಯೇ ಹಾಳಾಗಲಿದೆಕುಲಾಂತರಿ ತಳಿಗೆ ಹಿಂದಿನಿಂದಲೂ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ನೂರಾರು ಚಳವಳಿಗಳು ನಡೆದಿವೆ. ಇಷ್ಟಾದರೂ ಲಾಭಕೋರ ಸಂಸ್ಥೆಗಳು ತಮ್ಮ ಪಟ್ಟನ್ನು ಬಿಡುತ್ತಿಲ್ಲ. ಇವುಗಳ ಜತೆ ಸರ್ಕಾರದ ಕೆಲವು ನೀತಿ ನಿರೂಪಕರು ಕೂಡ ಸೇರಿಕೊಂಡಿದ್ದಾರೆ. ಕುಲಾಂತರಿಯಿಂದ ದೇಶದ ಆಹಾರದ ಭದ್ರತೆ, ಉತ್ತಮ ಪೌಷ್ಟಿಕ ಆಹಾರ, ಕೀಟ ಭಾದೆಯಿಂದ ರಕ್ಷಣೆ ಮತ್ತು ರೈತರಿಗೆ ಹೆಚ್ಚಿನ ಇಳುವರಿ ಬರುತ್ತದೆ ಎಂಬಿತ್ಯಾದಿ ಸುಳ್ಳು ಕಥೆಗಳನ್ನು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ. ಇದರ ವಿರುದ್ಧ ಎಚ್ಚರ ವಹಿಸದಿದ್ದರೆ ದೇಶದ ಆಹಾರ ಪೂರೈಕೆ ವ್ಯವಸ್ಥೆ ಮತ್ತು ಕೃಷಿ ಪರಿಸರದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇದೆ ಎಂದರು.
ಕುಲಾಂತರಿ ಪರವಾಗಿರುವವರು ಏನೇ ಗುಣಗಾನ ಮಾಡಿದರೂ ವಾಸ್ತವದಲ್ಲಿ, ಚಾಲ್ತಿಯಲ್ಲಿರುವ ಶೇಕಡ 99ರಷ್ಟು ಕುಲಾಂತರಿ (ಜಿಎಂ)ಬೆಳೆಗಳು ಎರಡು ರೀತಿಯ ಲಕ್ಷಣಗಳನ್ನು ಮಾತ್ರ ಹೊಂದಿವೆ. ಒಂದು ಸಸ್ಯದೊಳಗೇ ಕೀಟನಾಶಕ ಉತ್ಪಾದನೆ ಮಾಡುವುದು. ಎರಡು ಅಪಾಯಕಾರಿ ಕಳೆನಾಶಕ ಸಿಂಪಡಿಸಿದರೂ ಬೆಳೆಗೆ ಏನು ಆಗದಂತೆ ವಿಷಗಳ ಪ್ರತಿರೋಧ ಕತೆ ಹೊಂದಿರುವಂತಹದು. ಅಂತರಾಷ್ಟ್ರೀಯ ಪರಿಸರಪರ ಸಂಘಟನೆಗಳು `ಜಿ.ಎಂ. ಆಹಾರದ ವಿರುದ್ಧ ಈಗಾಗಲೇ ದನಿ ಎತ್ತಿ ಹೋರಾಟವನ್ನು ಮಾಡುತ್ತಿವೆ ಎಂದರು.ಪ್ರಯೋಗ ಪಶುವಲ್ಲ ಚಳವಳಿ
ಕುಲಾಂತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವುಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗಳದಲ್ಲಯೇ ಕಾಯುತ್ತ ನಿಂತಿವೆ. ಇಂತಹ ಕುಲಾಂತರಿಯ ಪ್ರಯೋಗ ಫಲಿತಾಂಶ ನಮಗೆ ಬೇಡ. ಸರ್ಕಾರಗಳ ಈ ಕ್ರಮವನ್ನು ಖಂಡಿಸಿ, ಸುರಕ್ಷಿತ, ಸುಸ್ಥಿರ ಮತ್ತು ಆರೋಗ್ಯಕರ ಭಾರತಕ್ಕಾಗಿ ಕುಲಾಂತರಿ ನಿರ್ಮೂಲನೆಗಾಗಿ ಬೃಹತ್ ಜನಾಂದೋಳನ ಪ್ರತಿಭಟನೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ವಿದ್ಯುತ್ ಇಲಾಖೆ ರೈತರ ಕೃಷಿ ಬೊರೆವಲ್ ಗಳಿಗೆ ಅಧಾರ್ ಜೊಡಣೆ ತಕ್ಷಣ ಸರ್ಕಾರ ಕೈಬಿಡಬೇಕು. ಮಳೆಯ ಪ್ರಮಾಣ ಕಡಿಮೆಯಾಗಿ ಬಿತ್ತಿರುವ ಬೀಜಗಳು ಮೊಳಕೆಯಲ್ಲಿಯೇ ಓಣಗುತ್ತಿವುದರಿಂದ ಸರ್ಕಾರ ಬರ ಘೋಷಿಸಿ, ಸೂಕ್ತ ಪರಿಹಾರ ನೀಡಬೇಕು. ಶಿಡ್ಲಘಟ್ಟ ತಾಲೂಕಿನಲ್ಲಿ ಫಲವತ್ತಾದ ಕೃಷಿ ಜಮೀನು ಕೆಎಐಡಿಬಿ ಭೂಸ್ವಾಧೀನ ದಿಂದ ಕೈ ಬಿಡಬೇಕು. ಕೆಎಐಡಿಬಿ ಭೂಸ್ವಾಧೀನ ಮಾಡಿಕೊಂಡಿರುವ ರೈತರ ಭೂಮಿಗೆ ಪರಿಹಾರಗಳನ್ನು ನೀಡ ಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರಭಟನೆಯಲ್ಲಿ ರೈತ ಸಂಘದ ಲೋಕೇಶ್ ಗೌಡ,ಸನತ್ ಕುಮಾರ್, ರಮೇಶ್, ಮುನೇಗೌಡ, ಹುಸೇನ್ ಸಾಬ್,ನವೀನಾಚಾರಿ,ಸಂತೋಷ್, ಸತೀಶ್,ವಸಂತ್ ಮತ್ತಿತರರು ಇದ್ದರು.