45ಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿದ ಮಂಗ

| Published : Oct 11 2025, 02:00 AM IST

45ಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿದ ಮಂಗ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಮೂರು ದಿನಗಳಿಂದ 45ಕ್ಕೂ ಅಧಿಕ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಂಭೀರ ಗಾಯಗೊಳಿಸಿ ಹುಚ್ಚಾಟ ನಡೆಸಿದ್ದ ಮಂಗನನ್ನು ಗದಗ ಪ್ರಾಣಿ ಸಂಗ್ರಹಾಲಯದ ಪಶುವೈದ್ಯಾಧಿಕಾರಿ ಡಾ.ಪವಿತ್ರಾ ರೇವಡಿ, ನಿಖಿಲ ಕುಲಕರ್ಣಿ ಅವರು ಶುಕ್ರವಾರ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಮೂರು ದಿನಗಳಿಂದ 45ಕ್ಕೂ ಅಧಿಕ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಂಭೀರ ಗಾಯಗೊಳಿಸಿ ಹುಚ್ಚಾಟ ನಡೆಸಿದ್ದ ಮಂಗನನ್ನು ಗದಗ ಪ್ರಾಣಿ ಸಂಗ್ರಹಾಲಯದ ಪಶುವೈದ್ಯಾಧಿಕಾರಿ ಡಾ.ಪವಿತ್ರಾ ರೇವಡಿ, ನಿಖಿಲ ಕುಲಕರ್ಣಿ ಅವರು ಶುಕ್ರವಾರ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬುಧವಾರದಿಂದ ಮಂಗವೊಂದು ಪಟ್ಟಣದ ಬಾಗವಾನ ಪೇಟೆ, ಹೊಸಪೇಟೆ ಬಡಾವಣೆ, ಭಂಡಾರಿ ಕಾಲೇಜ್ ಸರ್ಕಲ್, ಹರದೊಳ್ಳಿ ಹೀಗೆ ಕೆಲ ಸ್ಥಳಗಳಲ್ಲಿ ನಿರಂತರ ಉಪಟಳ ನೀಡಿ, ಜನರನ್ನು ಕಚ್ಚಿ ಗಾಯಗೊಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತ್ತು. ಕುತ್ತಿಗೆ, ಕೈ, ಬೆನ್ನು ಕಾಲು ಹೀಗೆ ದೇಹದ ವಿವಿಧೆಡೆ ಮನಬಂದಂತೆ ಕಚ್ಚಿ ಘಾಸಿಗೊಳಿಸಿ, ಸಾರ್ವಜನಿಕರನ್ನು ಭಯಭೀತರನ್ನಾಗಿ ಮಾಡಿತ್ತು. ಎರಡು ದಿನಗಳಿಂದ ಪೋಷಕರು ಮಕ್ಕಳನ್ನು ಶಾಲೆಗೂ ಕಳಿಸದೆ ಹೊರಹೋಗದಂತೆ ನೋಡಿಕೊಂಡಿದ್ದರು. ಜನರು ಹೊರಗೆ ಹೋಗಬೇಕಾದರೆ ಕೈಯಲ್ಲಿ ಬಡಿಗೆ ಹಿಡಿದುಕೊಂಡೇ ಹೊರ ಬರುವಂತಾಗಿತ್ತು. ವ್ಯಾಪಾರಸ್ಥರು ಬಡಿಗೆ ಇಟ್ಟುಕೊಂಡೇ ವ್ಯಾಪಾರಕ್ಕೆ ಕುಳಿತುಕೊಂಡಿದ್ದರು.

ಪತ್ರಿಕಾ ವಿತರಕರು, ಪತ್ರಕರ್ತರ ಮೇಲೂ ದಾಳಿ:ಶುಕ್ರವಾರ ಬೆಳಗ್ಗೆ ಎಂದಿನಂತೆ 6 ಗಂಟೆ ಸುಮಾರಿಗೆ ಕಾಲೇಜು ಸರ್ಕಲ್‌ ಹತ್ತಿರ ಪತ್ರಿಕೆ ವಿತರಣೆ ಮಾಡುತ್ತಿದ್ದ ಪತ್ರಕರ್ತ ಎಚ್.ಎಸ್. ಘಂಟಿ ಅವರ ಮೇಲೆ ಮಂಗ ದಾಳಿ ಮಾಡಿ ಕಚ್ಚಿದ್ದು, ತಪ್ಪಿಕೊಸಿಕೊಳ್ಳಲು ಓಡಿದರೂ ಬೆನ್ನಿಟ್ಟಿದೆ. ಘಟನೆಯಲ್ಲಿ ಅವರ ಎಡಗೈನ ಭುಜದ ಕೀಲು ಮುರಿದಿದೆ. ಅದೇ ಸಮಯದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದ ಪತ್ರಿಕಾ ವಿತರಕ ಶಂಕರ ಗಣಾಚಾರಿ, ಗುಂಡಪ್ಪ ಎಂಬುವವರ ಮೇಲೂ ಮಂದ ದಾಳಿ ನಡೆಸಿ ತೀವ್ರತರ ಗಾಯಗೊಳಿಸಿದೆ. ರಸ್ತೆಯ ಮೇಲಿನ ಅಂಗಡಿ ಹಾಗೂ ಮನೆಯ ವಠಾರದಲ್ಲಿ ಕೆಲಸ ಮಾಡಿಕೊಂಡು ಕುಳಿತಿದ್ದ ಜನರ ಮೇಲೂ ಅಟ್ಯಾಕ್ ಮಾಡಿದೆ. ಮಂಗನ ದಾಳಿಯಿಂದ ಸುಮಾರು 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮಂಗನನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಜನತೆಯ ಒತ್ತಡಕ್ಕೆ ಮಣಿದು ಶುಕ್ರವಾರ ಗದಗ ಪ್ರಾಣಿ ಸಂಗ್ರಹಾಲಯದ ವೈದ್ಯರನ್ನು ಕರೆಸಿದ್ದರು. ವೈದ್ಯರು ಕೆಲವೇ ನಿಮಿಷಗಳಲ್ಲಿ ಅರಿವಳಿಕೆ ಚುಚ್ಚು ಮದ್ದು ಹಾರಿಸಿದ್ದು, ಮಂಗ ಮೂರ್ಛೆಹೋದ ಬಳಿಕ ಬಲೆಯಲ್ಲಿ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆ ವಾಹನದಲ್ಲಿ ಹಾಕಿಕೊಂಡು ಹೋದರು.

ಅರಣ್ಯ ಅಧಿಕಾರಿಗಳು ಮಹೇಶ ಮರೆಣ್ಣವರ, ಮಹೇಶ ಕಲ್ಲೂರ, ಆರ್.ಎಸ್.ಹೊಸಮನಿ, ಬಿ.ಎಸ್.ಬಡಿಗೇರ, ಪಿ.ಎಸ್.ತುಂಗಳ, ಜಿ.ಎಸ್.ಮಾಲಗತ್ತಿಮಠ, ಶಿವರಾಜ ಸಜ್ಜನ, ಶರಣು ಹಚ್ಯಾಳ, ಭದ್ರು ಸಂಕನ್ನವರ, ನಾಗರಾಜ ಹೊಸಮನಿ, ಹಣಮಂತ ತಿಮ್ಮಣ್ಣವರ ಮತ್ತು ಪೋಲೀಸ್ ಸಿಬ್ಬಂದಿ ಇದ್ದರು. ಮೂರು ದಿನಗಳಿಂದ ಜನರನ್ನು ಹೈರಾಣ ಮಾಡಿದ್ದ ಕೋತಿ ಸೆರೆಸಿಕ್ಕಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿಬಿಟ್ಟರು. ಬುಧವಾರದಿಂದ ಮಂಗ ಕಚ್ಚಿದ ಪ್ರಕರಣಗಳು ಕಂಡು ಬಂದವು. ಸಂಬಂಧಪಟ್ಟ ಇಲಾಖೆಯವರು ಕಾರ್ಯಾಚರಣೆ ಮಾಡಿ ಮಂಗನನ್ನು ಸೆರೆ ಹಿಡಿದಿದ್ದರೆ ಸುಮಾರು 40ರಷ್ಟು ಜನರನ್ನು ರಕ್ಷಿಸಬಹುದಿತ್ತು. ಅದರೆ ತಡವಾಗಿ ಎಚ್ಚೆತ್ತು ಅರಣ್ಯ ಇಲಾಖೆಯವರು ಗದಗದಿಂದ ವೈದ್ಯರ ತಂಡ ಕರೆಯಿಸಿ ಮಂಗನನ್ನು ಸೆರೆಹಿಡಿದರು. ಇದು ಬುಧವಾರ ಇಲ್ಲವೇ ಗುರುವಾರವೇ ಆಗಬೇಕಿತ್ತು.

-ಮಲ್ಲಿಕಾರ್ಜುನ ರಾಜನಾಳ, ವಿಶ್ರಾಂತ ಶಿಕ್ಷಕ, ಹೊಸಪೇಟೆ ಓಣಿ ಗುಳೇದಗುಡ್ಡ

ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಸುಮಾರು 18-20 ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಮೆಡಿಷನ್ ನಮ್ಮಲ್ಲಿ ಸಂಗ್ರಹವಿತ್ತು. ಶುಕ್ರವಾರ ರೇಬೀಸ್ ಹಿಮೋಗ್ಲೋಬಿನ್‌ ಇಂಜಕ್ಷನ್ ತರಿಸಿಕೊಂಡಿದ್ದೇವೆ. ಮಂಗದ ಹಾವಳಿಗೆ ಬಿದ್ದು ಗಾಯಗೊಂಡ ಸುಮಾರು ಹತ್ತಾರು ಜನರಿಗೂ ಚಿಕಿತ್ಸೆ ನೀಡಿ ಕಳಿಸಿದ್ದೇವೆ.

-ಡಾ.ನಾಗರಾಜ ಕುರಿ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಗುಳೇದಗುಡ್ಡ

ಮೂರು ದಿನಗಳಿಂದ ಗುಳೇದಗುಡ್ಡದಲ್ಲಿ ಮಂಗ ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿದ್ದು, ನಮಗೂ ನೋವು ತಂದಿದೆ. ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಮಂಗನ ಹಾವಳಿಗೆ ಗಾಯಗೊಂಡವರಿಗೆ ಸರ್ಕಾರ ಸಹಾಯ ನೀಡಲು ಪ್ರಯತ್ನಿಸಲಾಗುವುದು.

- ಮಹೇಶ ಮರೆಣ್ಣವರ್ ವಲಯ ಅರಣ್ಯಾಧಿಕಾರಿ ಬಾದಾಮಿ