16,600ಕ್ಕೂ ಅಧಿಕ ಮಾಹಿತಿ ಹಕ್ಕು ಮೇಲ್ಮನವಿ ಅರ್ಜಿ ವಿಲೇವಾರಿ: ಬದ್ರುದ್ದೀನ್‌

| Published : Oct 19 2025, 01:02 AM IST

16,600ಕ್ಕೂ ಅಧಿಕ ಮಾಹಿತಿ ಹಕ್ಕು ಮೇಲ್ಮನವಿ ಅರ್ಜಿ ವಿಲೇವಾರಿ: ಬದ್ರುದ್ದೀನ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.

ಪ್ರತಿ ಜಿಲ್ಲಾ ಕೆಡಿಪಿ ಸಭೆಯ ಕಾರ್ಯಸೂಚಿಯಲ್ಲಿ ಮಾಹಿತಿ ಹಕ್ಕು ವಿಚಾರ ಸೇರ್ಪಡೆಗೆ ಸುತ್ತೋಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ ಬಾಕಿ ಉಳಿದ ಹಾಗೂ ಸಲ್ಲಿಕೆಯಾಗುತ್ತಿರುವ ಮೇಲ್ಮನವಿ ಅರ್ಜಿಗಳ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ. ಅಧಿಕಾರ ಸ್ವೀಕಾರ ಮಾಡಿದ ಕಳೆದ ಆರು ತಿಂಗಳಲ್ಲಿ 16,600ಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್‌ ಕೆ. ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಳೆದ ಫೆ.4ರಂದು ಅಧಿಕಾರ ಸ್ವೀಕಾರ ಮಾಡಿದಾಗ ರಾಜ್ಯದಲ್ಲಿ 2015ರಿಂದಲೂ ವಿಲೇವಾರಿಗೆ ಬಾಕಿ ಉಳಿದಿದ್ದ 55,400 ಮೇಲ್ಮನವಿ ಅರ್ಜಿಗಳಿದ್ದವು. ಇಷ್ಟು ಬೃಹತ್‌ ಸಂಖ್ಯೆಯ ಅರ್ಜಿಗಳನ್ನು ಈಗ (ಅ.17ಕ್ಕೆ ಅನ್ವಯಿಸಿ) 38,787ಕ್ಕೆ ಇಳಿಸಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 232 ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ರಾಜ್ಯದಲ್ಲಿ ದ.ಕ. 29ನೇ ಸ್ಥಾನದಲ್ಲಿದೆ. ಹೊಸ ಮೇಲ್ಮನವಿಗಳ ಜತೆ ಹಳೆ ಅರ್ಜಿಗಳನ್ನೂ ಆದ್ಯತೆ ನೆಲೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದರು.

ಕೊರೋನಾ ಅವಧಿಯಲ್ಲಿ ಮೇಲ್ಮನವಿ ಅರ್ಜಿಗಳ ವಿಚಾರಣೆ ಆಗಿರಲಿಲ್ಲ. ಜತೆಗೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರ ನೇಮಕ ಆಗಿರಲಿಲ್ಲ. ಹೀಗಾಗಿ ವಿಲೇವಾರಿ ಬಾಕಿ ಉಳಿದಿತ್ತು. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ ಒಟ್ಟು 6 ಲಕ್ಷ ಅರ್ಜಿಗಳು ಸಲ್ಲಿಕೆಯಾದರೆ, 30 ಸಾವಿರ ಮೇಲ್ಮನವಿಗಳು ಸಲ್ಲಿಕೆಯಾಗುತ್ತವೆ. ಕಳೆದ 8 ತಿಂಗಳನಲ್ಲಿ 15 ಸಾವಿರ ಮೇಲ್ಮನವಿಗಳು ಬಂದಿವೆ ಎಂದು ಬದ್ರುದ್ದೀನ್‌ ಮಾಹಿತಿ ನೀಡಿದರು.ಕೆಡಿಪಿ ಸಭೆಯಲ್ಲಿ ಕಾರ್ಯಸೂಚಿ ಸೇರ್ಪಡೆ:

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿ ಪ್ರತಿ 3 ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ಮುಖ್ಯಸ್ಥರು ಸಭೆ ನಡೆಸಬೇಕು ಎಂದ ಅವರು, ಪ್ರತಿ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲೂ ಮಾಹಿತಿ ಹಕ್ಕು ಕಾರ್ಯಸೂಚಿ ಅಳವಡಿಸಿಕೊಳ್ಳುವಂತೆ ಸರ್ಕಾರ ಹಾಗೂ ಎಲ್ಲ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.

ಕಾಯ್ದೆ ಜಾರಿಯಾಗಿ 20 ವರ್ಷಗಳಾದರೂ ಈ ಬಗ್ಗೆ ಸಾರ್ವಜನಿರಿಗೆ ಇರುವಷ್ಟು ಮಾಹಿತಿ ಕೆಲ ಮಾಹಿತಿ ಅಧಿಕಾರಿಗಳಿಗೆ ಇಲ್ಲ. ಜಿಲ್ಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ ಮಾಡಬೇಕೆಂದು ನಿರ್ದೇಶನವಾಗಿ 20 ವರ್ಷಗಳಾದರೂ ಕೆಲ ಜಿಲ್ಲೆಗಳಲ್ಲಿ ಈ ಕಾರ್ಯ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಕಾಯ್ದೆಯಡಿ ಅರ್ಜಿ ಹಾಕಲು ತಿಳಿಯದಿದ್ದರೆ ಮಾಹಿತಿ ಅಧಿಕಾರಿಯೇ ಅರ್ಜಿ ಸಲ್ಲಿಕೆಗೆ ಸಹಾಯ ಮಾಡಬೇಕು ಎಂದವರು ಹೇಳಿದರು.

ದುರುದ್ದೇಶ ಬೇಡ:

ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಸಲ್ಲಿಸುವ ಅರ್ಜಿ ಸುದುದ್ದೇಶ, ಪ್ರಾಮಾಣಿಕತೆ, ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದ್ದರೆ ಕಾಯ್ದೆಗೆ ಬಲ ಬರುತ್ತದೆ. ಅರ್ಜಿದಾರರು ಗುಣಮಟ್ಟದ ಅರ್ಜಿ ಸಲ್ಲಿಸಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಕಾಯ್ದೆ ದುರುಪಯೋಗ ಮಾಡಿರುವ 26 ಮಂದಿಯನ್ನು ಈಗಾಗಲೇ ಬ್ಲ್ಯಾಕ್‌ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ಬದ್ರುದ್ದೀನ್‌ ತಿಳಿಸಿದರು.