ಕಲಾಸಕ್ತರನ್ನು ರಂಜಿಸಿದ ನಿರ್ದಿಗಂತ ಉತ್ಸವಕ್ಕೆ ತೆರೆ

| Published : Feb 26 2025, 01:01 AM IST

ಕಲಾಸಕ್ತರನ್ನು ರಂಜಿಸಿದ ನಿರ್ದಿಗಂತ ಉತ್ಸವಕ್ಕೆ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಪ್ರಕಾಶ್‌ ರಾಜ್‌ ನೇತೃತ್ವದ ನಿರ್ದಿಗಂತ ಸಂಸ್ಥೆಯು ಉತ್ತರ ಕರ್ನಾಟಕದ ಭಾಗವಾಗಿ ಧಾರವಾಡದಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ನಿರ್ದಿಗಂತ ಉತ್ಸವಕ್ಕೆ ಸಮಾಧಾನದ ತೆರೆ ಬಿದ್ದಿದೆ.

ಧಾರವಾಡ: ರಾಜ್ಯದ ವಿವಿಧೆಡೆ ಯುವ ರಂಗಕಲಾವಿದರಿಗೆ ರಂಗ ಕಾರ್ಯಾಗಾರ, ಸಂವಾದ, ನಾಟಕ ತಿರುಗಾಟ ಹಾಗೂ ಶಿಕ್ಷಣ ಹಾಗೂ ರಂಗಭೂಮಿಯನ್ನು ಬೆಸೆಯಲು ಶಾಲಾರಂಗದಂತಹ ಯೋಜನೆ ನಡೆಸುತ್ತಿರುವ, ಬಹುಭಾಷಾ ನಟ ಪ್ರಕಾಶ್‌ ರಾಜ್‌ ನೇತೃತ್ವದ ನಿರ್ದಿಗಂತ ಸಂಸ್ಥೆಯು ಉತ್ತರ ಕರ್ನಾಟಕದ ಭಾಗವಾಗಿ ಧಾರವಾಡದಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ನಿರ್ದಿಗಂತ ಉತ್ಸವಕ್ಕೆ ಸಮಾಧಾನದ ತೆರೆ ಬಿದ್ದಿದೆ.

ಕಿಕ್ಕಿರಿದು ಸಭಾಭವನ ತುಂಬದೇ, ಗದ್ದಲ-ಗೊಂದಲ ಇಲ್ಲದೇ, ಇದ್ದಷ್ಟೇ ರಂಗಕರ್ಮಿಗಳು ನಾಟಕಗಳ ಪ್ರದರ್ಶನ, ಚರ್ಚೆ, ಸಂವಾದದಲ್ಲಿ ಭಾಗವಹಿಸಿ ನಿರ್ದಿಗಂತ ಉತ್ಸವವನ್ನು ಯಶಸ್ವಿಗೊಳಿಸಿದರು.

ಉತ್ತರ ಕರ್ನಾಟಕ ಭಾಗದಿಂದ ಬಂದ ಸುಮಾರು 25ಕ್ಕೂ ಹೆಚ್ಚು ರಂಗ ವಿದ್ಯಾರ್ಥಿಗಳು ನಿತ್ಯ ಎರಡು ನಾಟಕಗಳು, ರಂಗಸಂಗೀತ, ಕವ್ವಾಲಿ, ಹಾಡುಗಳನ್ನು ಕೇಳಿ, ನಂತರ ನಡೆಯುವ ಈ ಕುರಿತ ಚರ್ಚೆ, ಸಂವಾದದಲ್ಲಿ ಸಮರ್ಥವಾಗಿ ಪಾಲ್ಗೊಂಡು, ತಾವು ಭವಿಷ್ಯದಲ್ಲಿ ಉತ್ತಮ ರಂಗಕರ್ಮಿಗಳಾಗಬೇಕು ಎಂಬುದನ್ನು ಉತ್ಸವದ ಮೂಲಕ ಪಡೆದರು.

ಈ ಉತ್ಸವಕ್ಕೆ ಚಾಲನೆ ನೀಡಿದ ಖ್ಯಾತ ಭಾಷಾ ತಜ್ಞ ಗಣೇಶ ದೇವಿ ಅವರು ಪ್ರಸ್ತುತ ಅಧಿಕಾರದ ವ್ಯವಸ್ಥೆಯಲ್ಲಿ ಸಮಾಜದಲ್ಲಿ ಮತ್ತೆ ಗುಲಾಮಗಿರಿಗೆ ಒತ್ತಾಯದಿಂದ ನಮ್ಮನ್ನು ತಳ್ಳಲಾಗುತ್ತಿದೆ. ಮತ್ತೆ ಬದುಕಿನ ಪರವಾಗಿ ನಿರ್ದಿಗಂತ ಉತ್ಸವ ಒಯ್ಯುತ್ತಿರುವುದು ಸಮಾಧಾನದ ಸಂಗತಿ. ಇತ್ತೀಚೆಗೆ ನಾವು ಸಹನೆ ಕಳೆದುಕೊಳ್ಳುತ್ತಿದ್ದೇವೆ. ಇನ್ನೊಬ್ಬರ ದೃಷ್ಟಿಕೋನ ಮಾನ್ಯತೆ ಮಾಡುವುದನ್ನು ಕಲಿಯಬೇಕೆಂದು ಇಡೀ ಸಮಾಜಕ್ಕೆ ಈ ಉತ್ಸವದ ಮೂಲಕ ತಿಳಿ ಹೇಳಿದರು. ಆಶಯ ಭಾಷಣದಲ್ಲೂ ಹಿರಿಯ ಸಾಹಿತಿ ರಾಜೇಂದ್ರ ಚೆನ್ನಿ, ಒಕ್ಕೂಟ ವ್ಯವಸ್ಥೆ ನಾಶ ಮಾಡುತ್ತಿರುವ ಪ್ರಸ್ತುತ ರಾಜಕೀಯದ ಬಗ್ಗೆ ವಿಶ್ಲೇಸಿದರು.

ಇನ್ನುಳಿದಂತೆ, ಅನಾಮಿಕನ ಸಾವು, ಮೈ ಮನಗಳ ಸುಳಿಯಲ್ಲಿ, ರಸೀದಿ ಟಿಕೆಟ್‌, ತಿಂಡಿಗೆ ಬಂದ ತುಂಡೇರಾಯ, ಹೂ ಎಂ ಐ, ಮತ್ತಾಯ, ಎ ಫ್ರೆಂಡ್‌ ಬಿಯಾಂಡ್‌ ದಿ ಫೆನ್ಸ್‌ ಹಾಗೂ ಕೊನೆಯ ದಿನದ ಗುಡಿಯ ನೋಡಿರಣ್ಣ ನಾಟಕಗಳು ಪ್ರೇಕ್ಷಕರನ್ನು ಹಿಡಿದಿಟ್ಟವು. ಪ್ರತಿ ನಾಟಕದ ಚರ್ಚೆಗಳೂ ನಡೆದವು. ಜೊತೆಗೆ ಐದು ದಿನಗಳಲ್ಲಿ ಕ್ರಮವಾಗಿ ಕೃಷ್ಣ ಪಾರಿಜಾತ, ರಂಗಸಂಗೀತ, ಕವ್ವಾಲಿ, ಅದ್ಭುತ ರಾಮಾಯಣ ಎಂಬ ತೊಗಲು ಗೊಂಬೆಯಾಟದ ಡಿಜಿಟಲ್‌ ಪ್ರದರ್ಶನ, ಸಮತೆಯ ಹಾಡುಗಳ ಪ್ರದರ್ಶನವೂ ನಡೆಯಿತು. ಇದಲ್ಲದೇ, ನಾಡಿನ ಖ್ಯಾತ ನಾಟಕಾರರು, ಸಾಹಿತಿಗಳಿಂದ ರಂಗಭೂಮಿ ಕುರಿತಾದ ವಿಷಯಗಳ ಬಗ್ಗೆ ರಂಗ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ, ಸಂವಾದವೂ ನಡೆಯಿತು. ಒಟ್ಟಾರೆ, ಭವಿಷ್ಯದಲ್ಲಿ ರಂಗಭೂಮಿಯ ದಾರಿ ಯಾವ ರೀತಿ ಇರಬೇಕು? ನಾವು ಯಾವ ಹಾದಿಯಲ್ಲಿ ನಡೆಯಬೇಕು ಎಂಬುದನ್ನು ನಿರ್ದಿಗಂತ ಉತ್ಸವ ತೋರಿಸಿಕೊಟ್ಟಿತು ಎನ್ನಬಹುದು.